ಪಟಾಕಿ ಪೆಟ್ಟಿಗೆಯ ಮೇಲೆ ಕುಳಿತು ಸವಾಲು ಗೆಲ್ಲಲು ಹೋದ 32 ವರ್ಷದ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರು ನಗರದ ಕೋಣನಕುಂಟೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಕೋಣನಕುಂಟೆ ನಿವಾಸಿ ಶಬರಿ ಎಂ ಎಂದು ಗುರುತಿಸಲಾಗಿದೆ. ಯುವಕರೆಲ್ಲರೂ ಪಾನಮತ್ತರಾಗಿದ್ದರು. ಪಟಾಕಿ ಡಬ್ಬದಲ್ಲಿ ಕೂರುವಂತೆ ಯುವಕರು ಶಬರಿಗೆ ಸವಾಲು ಹಾಕಿದ್ದರು ಎಂದು ಹೇಳಲಾಗಿದೆ.
ಅಕ್ಟೋಬರ್ 31ರ ಸಂಜೆ, ದಿನಗೂಲಿ ಕೆಲಸ ಮಾಡುತ್ತಿದ್ದ ಶಬರಿ ತನಗೆ ತಿಳಿದಿರುವ ಆರು ಯುವಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದನು. ಎಲ್ಲರೂ ಪಾನಮತ್ತರಾಗಿದ್ದರು. ಪಟಾಕಿ ಪೆಟ್ಟಿಗೆಯ ಮೇಲೆ ಕೂರುವಂತೆ ಯುವಕರು ಸವಾಲು ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ | ಮನೆ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಆಕ್ಷೇಪ; ವೃದ್ದನಿಗೆ ಥಳಿಸಿ ಕೊಲೆ
ಯುವಕರು ಪೆಟ್ಟಿಗೆಯ ಮೇಲೆ ಕುಳಿತರೆ ಆಟೋ ರಿಕ್ಷಾ ಖರೀದಿಸಿ ನೀಡುವುದಾಗಿ ಹೇಳಿದ್ದರು. ಈ ಸವಾಲು ಸ್ವೀಕರಿಸಿದ ಶಬರಿ ಮದ್ಯದ ಅಮಲಿನಲ್ಲಿ ಪಟಾಕಿ ಪೆಟ್ಟಿಗೆಯ ಮೇಲೆ ಕೂತಿದ್ದಾನೆ ಎಂದು ವರದಿಯಾಗಿದೆ.
ಸದ್ಯ ಈ ದೃಶ್ಯದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವಕ ಶಬರಿ ಪಟಾಕಿ ಡಬ್ಬದಲ್ಲಿ ಕುಳಿತಿರುವುದು ಕೆಲವೇ ಕ್ಷಣಗಳಲ್ಲಿ ಶಬರಿ ತೀವ್ರವಾಗಿ ಗಾಯಗೊಂಡು ಕುಸಿದಿರುವುದು ಕಂಡುಬಂದಿದೆ.
Bengaluru man dared to sit on bursting firecracker, dies
— The Siasat Daily (@TheSiasatDaily) November 4, 2024
A man died after sustaining severe injuries from sitting on a live firecracker in Bengaluru's Konanakunte suburbs of South Bengaluru on Deepawali night, October 31.
During the Deepawali night, Shabarish and his friends were… pic.twitter.com/YeGVsPHpIn
ಇನ್ನು ತೀವ್ರವಾಗಿ ಗಾಯಗೊಂಡ ಶಬರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಬರಿ ನವೆಂಬರ್ 3ರಂದು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕೋಣನಕುಂಟೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 105 (ಅಪರಾಧ ನರಹತ್ಯೆ ಆದರೆ ಕೊಲೆ ಅಲ್ಲ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನವೀನ್ ಕುಮಾರ್, ದಿನಕರನ್, ಸತ್ಯವೇಲು, ಕಾರ್ತಿಕ್, ಸತೀಶ್ ಮತ್ತು ಸಂತೋಷ್ ಕುಮಾರ್ ಎಂಬವರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
