ಉತ್ತರ ಕರ್ನಾಟಕದಲ್ಲಿಯೇ ಶಕ್ತಿ ದೇವತೆ ಹಾಗೂ ಈ ಭಾಗದ ಭಕ್ತರು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಲೋಕಾಪುರ-ಸವದತ್ತಿ ಮಾರ್ಗದಲ್ಲಿ ಹೊಸ ರೈಲುಮಾರ್ಗ ನಿರ್ಮಾಣದ ಅಗತ್ಯವಿದೆ. ಇದಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಉತ್ತರ ಕರ್ನಾಟಕದ ಜನರು ಈ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕರ್ನಾಟಕ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಮನವಿ ಮಾಡಿದರು.
ಬಾಗಲಕೋಟೆ ನಗರದ ಚರಂತಿಮಠ ಸಮುದಾಯ ಭವನದಲ್ಲಿ ಲೋಕಾಪುರ-ರಾಮದುರ್ಗ-ಸವದತ್ತಿ ಯಲ್ಲಮ್ಮ ಮಾರ್ಗದಲ್ಲಿ ಹೊಸ ರೈಲುಮಾರ್ಗ ನಿರ್ಮಾಣದ ಹೋರಾಟ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
“ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಹೋರಾಟದ ಆಂದೋಲನವೇ ನಡೆದಿತ್ತು. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬರೂ ಬೆಂಬಲ ನೀಡಿ, ಹೋರಾಟದಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಅಭಿವೃದ್ಧಿಯ ಜೀವನಾಡಿಯಾಗಲಿದೆ. ಅದೇ ಮಾದರಿಯಲ್ಲಿ ಲೋಕಾಪುರ-ಧಾರವಾಡ ಮಾರ್ಗ ನಿರ್ಮಾಣ ಹೋರಾಟ ನಡೆಯಲಿದೆ” ಎಂದು ಹೇಳಿದರು.
“ಬಾಗಲಕೋಟೆ ಮತ್ತು ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಕ್ಕೆ ಅನುಕೂಲ ಆಗಲಿರುವ ಈ ಮಾರ್ಗ ಅನುಷ್ಠಾನಗೊಂಡರೆ, ಉತ್ತರ ಕರ್ನಾಟಕ ಜಿಲ್ಲೆಯ ಜನ ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ವಕೀಲ ಜೆ ಜೆ ಕುಲಕರ್ಣಿ ಮಾತನಾಡಿ, “ಧಾರವಾಡದ ಹೈಕೋರ್ಟ್ ಪೀಠಕ್ಕೆ ತೆರಳಲು ವಕೀಲರು, ಜನರಿಗೆ, ಪ್ರವಾಸಿಗರಿಗೆ, ಈ ಮಾರ್ಗ ಬಹಳಷ್ಟು ಅನುಕೂಲವಾಗಲಿದೆ. ಮುಧೋಳ ತಾಲೂಕು ಕೈಗಾರಿಕೆಯ ನಾಡಾಗಿದೆ. ಸರಕು ಸಾಗಾಣಿಕೆಗೆ ರೈಲು ಅನುಕೂಲವಾಗಲಿದೆ. ಹಾಗಾಗಿ ರೈಲುಮಾರ್ಗ ಶೀಘ್ರ ಕಾರ್ಯರೂಪಕ್ಕೆ ಬಂದರೆ ರೈತರಿಗೆ ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಹುರಾಷ್ಟ್ರೀಯ ಕಂಪನಿಗಳಿಂದ ಆಹಾರ ಸಾರ್ವಭೌಮತೆ ಕಸಿಯುವ ಹುನ್ನಾರ : ಸಿ. ಯತಿರಾಜು
ವಕೀಲ ರಾಜು ಮನ್ನಿಕೇರಿ ಮಾತನಾಡಿ, “ರಾಮದುರ್ಗ ಭಾಗದಲ್ಲಿ ಶಬರಿ ಕೊಳ, ಶಿರಸಂಗಿ ಕಾಳಮ್ಮ ದೇವಿ, ಶಿವನ ಮೂರ್ತಿ ಸೇರಿದಂತೆ ಇನ್ನೂ ಹಲವಾರು ಐತಿಹಾಸಿಕ ತಾಣಗಳಿದ್ದು, ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೈಲು ಮಾರ್ಗದಿಂದ ಅನುಕೂಲವಾಗುತ್ತದೆ” ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಧರ್ಮಂತಿ, ರಾಮದುರ್ಗದ ಹೋರಾಟಗಾರ ಅಭಿಷೇಕ ತಳ್ಳಿಕೇರಿ, ಗೈಬು ಜೈನುಖಾನ್, ಡಾ. ಯಾದವಾಡ, ದಾದಾಪೀರ ಕೆರೂರ, ಪ್ರೇಮಾ ರಾಠೋಡ, ರೇಣುಕಾ ನ್ಯಾಮಗೌಡರ, ಮಂಜುಳಾ ಭೂಸಾರೆ, ಮೈನುದ್ದಿನ ಖಾಜಿ, ಸುಭಾಸ್‌ಚಂದ್ರ ಘೋಡಕೆ, ಬಿಬಿಜಾನ ತಾಳಿಕೋಟಿ, ಎ ಆರ್ ಪಠಾಣ, ಡಿ ಎಫ್ ಹಾಜಿ ಮುಂತಾದವರು ದ್ದರು.