ಒಂದು ವರ್ಷಕ್ಕೂ ಅಧಿಕ ಕಾಲದಿಂದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರಿಗೆ ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಕೇಂದ್ರ ಸರ್ಕಾರ ಕಟ್ಟುತ್ತಿದೆ. ರೈತರ ಪರ ನಿಲ್ಲಬೇಕಾದ ಸರ್ಕಾರ ರೈತರ ಭೂಮಿ ದೋಚುವ ಕಂಪನಿಗಳ ಬಾಲಂಗೋಚಿಯಾಗಿದೆ. ಕಾರ್ಪೋರೇಟ್ ದೊರೆಗಳ ತೆರಿಗೆ ಮನ್ನಾ ಮಾಡುವ ಕೇಂದ್ರದ ಮೋದಿ ಸರ್ಕಾರ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಮನಸ್ಸು ಮಾಡುವುದು ಯಾವಾಗ?
ಪ್ರಸ್ತುತ ಎಲ್ಲಾ ತರಕಾರಿ, ಹಣ್ಣು, ಮಾಂಸದ ಬೆಲೆ ಏರಿಕೆಯಾಗಿದೆ. ಅದರಲ್ಲೂ ನಾವು ದಿನನಿತ್ಯ ಬಳಸುವ ಈರುಳ್ಳಿ, ಟೊಮೆಟೋ, ಆಲೂಗಡ್ಡೆ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ದರಗಳು ಗಗನಕ್ಕೇರುತ್ತಿದೆ. ಬೆಲೆ ಏರಿಕೆಯಾಗುತ್ತಿದ್ದಂತೆ ಭಾರತದಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ಆಗಸ್ಟ್‌ನಲ್ಲಿ ಶೇಕಡ 5.66ರಷ್ಟಿದ್ದ ಆಹಾರ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇಕಡ 9.24ಕ್ಕೆ ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಆಹಾರ ಹಣದುಬ್ಬರ ಪ್ರಮಾಣವು ಶೇಕಡ 63.3ರಷ್ಟು ಜಿಗಿದಿದೆ.
ಹೀಗೆ ತರಕಾರಿಗಳ ಬೆಲೆ ಜಿಗಿಯುತ್ತಿದ್ದಂತೆ ರೈತರ ಖಜಾನೆ ತುಂಬುತ್ತಿದೆ ಎಂಬ ಭ್ರಮೆ ಹಲವರದ್ದು. ಆದರೆ ವಾಸ್ತವವೇ ಬೇರೆ. ತರಕಾರಿ ಬೆಲೆ ನಮ್ಮ ಜೇಬು ತೂತು ಮಾಡಿದರೂ ಶ್ರಮಪಟ್ಟು ಬೆಳೆ ಬೆಳೆದ ರೈತನ ಕಿಸೆ ಮಾತ್ರ ತುಂಬದು. ಲಾಭದ ಮಾತು ಬಿಡಿ. ವ್ಯಾಪಾರಿಗಳು, ಡೀಲರ್‌ಗಳಿಗೂ ಗ್ರಾಹಕ ಬೆಲೆಯ ಲಾಭ ಹಂಚಿಹೋಗಿ ಸಿಕ್ಕ ಪುಡಿಗಾಸು ಕೃಷಿಕನ ಉತ್ಪಾದನಾ ವೆಚ್ಚವನ್ನೂ ತುಂಬಲಾರದು.
ಇದನ್ನು ಓದಿದ್ದೀರಾ? ವಕ್ಫ್, ರೈತರ ಆಸ್ತಿ: ಸರ್ಕಾರ ಮಾಡಿದ್ದೇನು? ಇಲ್ಲಿದೆ ಫುಲ್ ಡೀಟೇಲ್ಸ್
ವಾಷಿಂಗ್ಟನ್ ಮೂಲದ ಇಂಟರ್‌ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ನಗರ ಮತ್ತು ಕೃಷಿಯೇತರ ದೇಶಗಳನ್ನು ಹೊರತುಪಡಿಸಿ ಉಳಿದೆಡೆ ಆಹಾರದ ನೈಜ ಬೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವು ದಿನಕ್ಕೆ 3.20 ಡಾಲರ್‌ನಷ್ಟು ಬಡತನದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಎರಡು ದಶಕಗಳಲ್ಲಿ (2000-2019) ಸುಮಾರು 33 ಮಧ್ಯಮ ಆದಾಯದ ದೇಶಗಳ ಬಡತನ ದರ, ಆಹಾರದ ಬೆಲೆ ಬದಲಾವಣೆ, ಆಹಾರ ಉತ್ಪಾದನೆಯ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡಲಾಗಿದೆ. ಹಾಗೆಯೇ ಬೆಲೆ ಏರಿಕೆ ರೈತರ ಆದಾಯ ಹೆಚ್ಚಿಸುತ್ತದೆಯೇ ಎಂಬುದನ್ನು ಕೂಡಾ ಸಂಶೋಧನೆ ಮಾಡಲಾಗಿದೆ. ಆದರೆ ಆಹಾರ ಬೆಲೆಗಳು ಕೈಸುಡುವಂತೆ ಹೆಚ್ಚಾಗುತ್ತಿರುವ ಭಾರತದಲ್ಲಿ ಈ ಸಂಶೋಧನೆಗಳು ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವರದಿಯೊಂದು ಭಾರತದಲ್ಲಿ ರೈತರ ಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದೆ. ಗ್ರಾಹಕರು ತರಕಾರಿಗಳು ಮತ್ತು ಹಣ್ಣುಗಳಿಗೆ ಖರ್ಚು ಮಾಡುವ ಹಣದ ಮೂರನೇ ಒಂದು ಭಾಗವನ್ನು ಮಾತ್ರ ಭಾರತದ ರೈತರು ಪಡೆಯುತ್ತಾರೆ. ಉಳಿದವು ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಜೇಬು ಸೇರುತ್ತದೆ ಎಂದು ಆರ್‌ಬಿಐ ಸಂಶೋಧನಾ ವರದಿ ಹೇಳುತ್ತದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ: ಬಸವರಾಜ ಬೊಮ್ಮಾಯಿ
ಡೈರಿ ಉತ್ಪನ್ನದ ಶೇಕಡ 70ರಷ್ಟು, ಮೊಟ್ಟೆಯ ಗ್ರಾಹಕ ಬೆಲೆಯ ಶೇಕಡ 75ರಷ್ಟು, ಕೋಳಿ-ಮಾಂಸ ಉತ್ಪಾದನೆಯ ಗ್ರಾಹಕ ಬೆಲೆಯ ಶೇಕಡ 56ರಷ್ಟು, ಬೇಳೆಕಾಳುಗಳ ಗ್ರಾಹಕ ಬೆಲೆಯ ಶೇಕಡ 75ರಷ್ಟು ಮೊತ್ತವನ್ನು ರೈತರು ಪಡೆಯುತ್ತಾರೆ. ಆದರೆ ಹಣ್ಣು, ತರಕಾರಿ ಬೆಲೆಗಾರರು ಅಧಿಕ ನಷ್ಟವನ್ನು ಕಾಣುತ್ತಾರೆ.
ಟೊಮೆಟೊ ಬೆಳೆಯುವ ರೈತರು ಗ್ರಾಹಕ ಬೆಲೆಯ ಶೇಕಡ 33ರಷ್ಟು ಮಾತ್ರ ಪಡೆಯುತ್ತಾರೆ. ಈರುಳ್ಳಿ ಬೆಳೆಗಾರರು ಶೇಕಡ 36 ಮತ್ತು ಆಲೂಗಡ್ಡೆ ಬೆಳೆಯುವ ರೈತರು ಗ್ರಾಹಕ ಬೆಲೆಯ ಶೇಕಡ 37ರಷ್ಟು ಹಣವನ್ನು ಮಾತ್ರ ಪಡೆಯುತ್ತಾರೆ. ಇನ್ನು ಬಾಳೆಹಣ್ಣು, ದ್ರಾಕ್ಷಿ, ಮಾವಿನ ಗ್ರಾಹಕ ಬೆಲೆಯ ಶೇಕಡ 30ರಿಂದ 43ರ ಆಸುಪಾಸಿನಷ್ಟು ಹಣವನ್ನು ಪಡೆಯುತ್ತಾರೆ.
ಹೆಚ್ಚಾಗಿ ಹಣ್ಣು, ತರಕಾರಿ ಬೆಳೆಯುವ ರೈತರು ತಮ್ಮ ಉತ್ಪಾದನಾ ವೆಚ್ಚವನ್ನು ಕೂಡ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಅಕಾಲಿಕ ಮಳೆ, ಬರ ರೈತರನ್ನು ಬೆಂಬಿಡುವುದಿಲ್ಲ. ಹೀಗಿದ್ದಾಗ ಕೃಷಿಯೆಡೆ ಯುವಕರು ಮುಖ ಮಾಡುವುದಾದರೂ ಹೇಗೆ? ನಷ್ಟದ ಕೂಪಕ್ಕೆ ತಮ್ಮನ್ನು ತಾವು ದೂಡಲು ಯಾರು ಬಯಸುತ್ತಾರೆ? ಬಂಡವಾಳಶಾಹಿಗಳ, ಕಾರ್ಪೋರೇಟ್ ದನಿಗಳ ಬೆನ್ನಿಗೆ ನಿಲ್ಲುವ ಕೇಂದ್ರ, ರಾಜ್ಯ ಸರ್ಕಾರವು ದೇಶದ ಬೆನ್ನೆಲುಬಾದ ಕೃಷಿಕನ ಪರ ನಿಲ್ಲುವವರೆಗೂ ರೈತರಿಗೆ ಆಗುವ ನಷ್ಟ ತಪ್ಪಿಸಲಾಗದು.
ಒಂದು ವರ್ಷಕ್ಕೂ ಅಧಿಕ ಕಾಲದಿಂದ ಈ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರಿಗೆ ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಕೇಂದ್ರ ಸರ್ಕಾರ ಕಟ್ಟುತ್ತಿದೆ. ರೈತರ ಪರ ನಿಲ್ಲಬೇಕಾದ ಸರ್ಕಾರ ರೈತರ ಭೂಮಿ ದೋಚುವ ಕಂಪನಿಗಳ ಬಾಲಂಗೋಚಿಯಾಗಿದೆ. ಕಾರ್ಪೋರೇಟ್ ದೊರೆಗಳ ತೆರಿಗೆ ಮನ್ನಾ ಮಾಡುವ ಕೇಂದ್ರದ ಮೋದಿ ಸರ್ಕಾರ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಮನಸ್ಸು ಮಾಡುವುದು ಯಾವಾಗ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.