- ಪ್ರಜಾಕೀಯ ಪಕ್ಷದ ಸೋಲಿಗೆ ಜನರನ್ನು ದೂಷಿಸಿದ ಉಪೇಂದ್ರ
- ಅಭ್ಯರ್ಥಿಗಳ ಹೆಸರೇ ಗೊತ್ತಿರಲಿಲ್ಲ ಎಂದ ಅಭಿಮಾನಿಗಳು
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ನಾಲ್ಕೈದು ದಿನಗಳ ಆಂತರಿಕ ತಿಕ್ಕಾಟದ ಬಳಿಕ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಮುಂದಾಗಿದೆ. ಇದೇ ಶನಿವಾರ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಟ, ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುನುಭವಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದ ಸೋಲಿನ ಬಗ್ಗೆ ಒಗಟಿನ ರೀತಿಯಲ್ಲಿ ಟ್ವೀಟ್ ಮಾಡಿರುವ ಉಪೇಂದ್ರ, “ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಅದನ್ನು ಎತ್ತಲು ಹತ್ತು ಜನ ಬೇಕು. ಅದನ್ನು ನಾವೆಲ್ಲ ಸೇರಿ ತೆಗೆಯೋಣ ಎಂದರೆ, ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ. ಏನು ಮಾಡುವುದು? ಜನಸಾಮಾನ್ಯ ಅಲ್ಲ, ಜನ ಅಸಾಮಾನ್ಯರು ತಿಳಿಸಿ” ಎಂದಿದ್ದಾರೆ. ಅದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿ, “ಯಾರನ್ನೂ ಬಲವಂತ ಮಾಡಬಾರದು” ಎಂದೂ ಹೇಳಿದ್ದಾರೆ.
ಪ್ರಜಾಕೀಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಸಹಕರಿಸುತ್ತಿಲ್ಲ ಎಂಬ ಧಾಟಿಯ ಉಪೇಂದ್ರ ಅವರ ಮಾತಿಗೆ ನೆಟ್ಟಿಗರು ಕೂಡ ತಕ್ಕ ಉತ್ತರವನೇ ನೀಡಿದ್ದಾರೆ. “ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವು ಹೀಗೆ ತೆಗೆಯಬಹುದು ಹಾಗೆ ತೆಗೆಯಬಹುದು ಎಂದು ಹೇಳುತ್ತಾ ಕುಳಿತರೆ ಹೆಂಗೆ? ಕಲ್ಲಿನ ಹತ್ತಿರ ಬರಬೇಕಲ್ಲವೋ? ಸ್ವಲ್ಪ ಜನ ಬಂದ್ರೆ ಇನ್ನೊಂದಿಷ್ಟು ಜನ ಸೇರುತ್ತಾರೆ. ಅದನ್ನು ಬಿಟ್ಟು ಮನೆಯಲ್ಲಿ ಕೂತು ಸ್ಕೆಚ್ ಹಾಕಿ ಪ್ಲಾನ್ ರೆಡಿ ಮಾಡಿದರೆ ಆಯಿತೋ?” ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಹಾಕಿದ್ದಾರೆ.
ಅಪರ್ಣಾ ಶಮಂತ್ ಎನ್ನುವವರು ಟ್ವೀಟ್ ಮಾಡಿ, “ನಾನು ಈ ಬಾರಿ ಪ್ರಜಾಕೀಯಕ್ಕೆ ಮತ ಹಾಕಬೇಕು ಎಂದುಕೊಂಡಿದ್ದೆ. ಡೈಲಾಗ್ ಹೊಡೆಯುವುದೇ ರಾಜಕೀಯ ಅಲ್ಲ ಎಂಬುದನ್ನು ಪ್ರಜಾಕೀಯ ಪಕ್ಷದವರು ಮೊದಲು ಅರಿತುಕೊಳ್ಳಬೇಕಿದೆ. ಹಾಗಂತ ಪ್ರಜಾಕೀಯದ ನಾಯಕರು ದುಬಾರಿ ಪ್ರಚಾರ ಮಾಡಬೇಕಿಲ್ಲ, ಜನ ಸಾಮಾನ್ಯರ ನಡುವೆ ಕೆಲಸ ಮಾಡಿ ಗುರುತಿಸಿಕೊಳ್ಳುವ ಅಗತ್ಯವಿದೆ. ಈ ಬಾರಿ ನಮ್ಮ ಕ್ಷೇತ್ರದಲ್ಲಿ ಪ್ರಜಾಕೀಯದ ಅಭ್ಯರ್ಥಿ ಯಾರೂ ಎಂಬ ಮಾಹಿತಿ ಕೂಡ ನಮಗಿರಲಿಲ್ಲ” ಎಂದು ಪಕ್ಷದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ನಿತಿನ್ ಎಂಬುವವರು ಟ್ವೀಟ್ ಮಾಡಿ, “ಜನರಿಗೆ ಗೊಂದಲ ಇರುವುದು ʼನಾನೇನು ಮಾಡಲ್ಲ, ಎಲ್ಲ ನೀವು ನೀವೇ ಸೇರಿ ಕಲ್ಲನ್ನು ಎತ್ತಿ ಹಾಕಿʼ ಅನ್ನುವ ವಾದ” ಎಂದು ಉಪೇಂದ್ರ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.