ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ವಾರಣಾಸಿಯ ಭೈದಾನಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಆರೋಪಿ ರಾಜೇಂದ್ರ ಗುಪ್ತಾ (45) ತನ್ನ ಪತ್ನಿ ನೀತು ಗುಪ್ತಾ (43), ಮಕ್ಕಳಾದ ನವೇಂದ್ರ (25) ಮತ್ತು ಸುಬೇಂದ್ರ (15) ಮತ್ತು ಪುತ್ರಿ ಗೌರಂಗಿ (16) ಮಲಗಿದ್ದಾಗ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಟುಂಬದ ಎಲ್ಲರನ್ನೂ ಕೊಂದ ಬಳಿಕ ರಾಜೇಂದ್ರ ಗುಪ್ತಾ ತಮ್ಮ ಮನೆಯಿಂದ ಹೊರಹೋಗಿದ್ದಾರೆ. ಅದಾದ ಬಳಿಕ ನಗರದ ರೊಹನಿಯಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಿಂದ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸುಳಿವು ಸಿಕ್ಕಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಚಾಕುವಿನಿಂದ ಇರಿದು ಎಎನ್‌ಐ ಪತ್ರಕರ್ತನ ಕೊಲೆ
ನೆರೆಮನೆಯವರು ಕರೆ ಮಾಡಿದ ಬಳಿಕ ಸ್ಥಳಕ್ಕೆ ಧಾವಿಸಿದ ವಾರಣಾಸಿ ಪೊಲೀಸ್ ತಂಡವು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ದಂಪತಿ ನಡುವೆ ಕೆಲವು ವಿಚಾರದಲ್ಲಿ ವಾಗ್ವಾದ ನಡೆಯುತ್ತಿತ್ತು ಎಂದು ರಾಜೇಂದ್ರ ಅವರ ತಾಯಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಡಿಸಿಪಿ ಗೌರವ್ ಬನ್ವಾಲ್, “ಗುಂಡಿಕ್ಕಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಕುಟುಂಬ ಕಳಹ, ವಾಮಾಚಾರ ಹೀಗೆ ನಾವು ಬೇರೆ ಬೇರೆ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
“ವಾರಾಣಾಸಿಯಲ್ಲಿ ರಾಜೇಂದ್ರ ಗುಪ್ತಾ ಮೃತದೇಹವೂ ಕೂಡಾ ಪತ್ತೆಯಾಗಿದೆ. ರಾಜೇಂದ್ರ ಗುಪ್ತಾರ ಕೊಲೆಯಾಗಿದೆ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
1997ರಿಂದ ರಾಜೇಂದ್ರ ವಿರುದ್ಧ ಕೊಲೆ ಪ್ರಕರಣವಿದೆ. ಸದ್ಯ ರಾಜೇಂದ್ರ ಜಾಮೀನಿನಲ್ಲಿ ಹೊರಗಿದ್ದಾರೆ.
