ರಾಯಚೂರು ಜಿಲ್ಲೆಯ ದೇವದುರ್ಗ ನಗರದಲ್ಲಿ ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ಹೋಟೆಲ್, ಬೇಕರಿ, ಕಿರಾಣಿ ಅಂಗಡಿ ಗ್ಯಾರೇಜ್ ಸೇರಿದಂತೆ ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ರೆಸ್ಕ್ಯೂ ಮತ್ತು ರಿಹಾಬಿಲಿಟೇಷನ್ ಕ್ಯಾಂಪೇನ್ ಅಂಗವಾಗಿ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ತಪಾಸಣೆ ಮಾಡಿ ಕಿಶೋರ್ ಎಂಬ ಬಾಲಕನನ್ನು ರಕ್ಷಣೆ ಮಾಡಿದ್ದು, ದೇವದುರ್ಗದ ಕೆಇಬಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಗೆ ದಾಖಲು ಮಾಡಿ, ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಮಗುವನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಗ್ಯಾರೇಜ್ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, “ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತುನಿಯಂತ್ರಣ) ತಿದ್ದುಪಡಿ ಕಾಯೆ 2016ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ದುಡಿಸಿಕೊಂಡರೆ, ₹50 ಸಾವಿರ ದಂಡ ಹಾಗೂ ಎರಡು ವರ್ಷ ಜೈಲುಶಿಕ್ಷೆ ಇರುತ್ತದೆ” ಎಂದು ವಿವರಿಸಿದರು.
“ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದುಡಿಯುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098ಗೆ ಮಾಹಿತಿ ನೀಡಬಹುದಾಗಿದೆ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ : ವಿಜಯಕುಮಾರ್ ಬಾವಗಿ
ಮಾನ್ವಿ ವೃತ್ತದ ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ಶಿಕ್ಷಣ ಇಲಾಖೆ ಇಸಿಒ ರಾಜನಗೌಡ, ಗ್ರಾಮ ಆಡಳಿತಾಧಿಕಾರಿ ವಿರೇಶ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಕ್ಕಯ್ಯ, ಡಾನ್‍ಬಾಸ್ಕೋ ಸಂಸ್ಥೆಯ ನಾಗರಾಜ ಮತ್ತು ಬಸವರಾಜ ಇದ್ದರು.
