ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹಾಗೂ ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ಅವರೇ ಕಾರಣವೆಂದು ರುದ್ರಣ್ಣ ಡೆನ್‌ನೋಟ್ ಬರೆದಿದ್ದಾರೆ. ರುದ್ರಣ್ಣ ಅವರ ತಾಯಿ ಮಲ್ಲವ್ವ ನೀಡಿದ ದೂರಿನ ಆಧಾರದ ಮೇಲೆ ಈ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರುದ್ರಣ್ಣ ಅವರನ್ನು ನವೆಂಬರ್ 5ರಂದು ಸವದತ್ತಿ ತಹಶೀಲ್ದಾರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ತಮ್ಮ ವರ್ಗಾವಣೆಗೆ ಹಿಂದೆ ಬಸವರಾಜ್ ನಾಗರಾಳ, ಸೋಮು ಹಾಗೂ ಅಶೋಕ ಕಬ್ಬಲಿಗೇರ್ ಅವರ ಕೈವಾಡವಿದೆ ಎಂದು ರುದ್ರಣ್ಣ ಆರೋಪಿಸಿದ್ದರು. ತಮ್ಮ ಇತರ ಸಹೋದ್ಯೋಗಿಗಳಿಗೆ ಈ ಬಗ್ಗೆ ವಾಟ್ಸಾಪ್ ಸಂದೇಶ ಕಳಿಸಿದ್ದರು ಎಂದು ವರದಿಯಾಗಿದೆ.
ತಮ್ಮ ವಾಟ್ಸಾಪ್ ಸಂದೇಶದಲ್ಲಿ, “ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಮತ್ತು ಸೋಮು ಅವರೇ ನೇರಕಾರಣ.ಅಶೋಕ್ ಕಬ್ಬಲಿಗೇರ್ ಕೂಡ ಕಾರಣ. ಬೆಳಗಾವಿ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು” ಎಂದು ಹೇಳಿದ್ದಾರೆ.
ಆನಂತರ, ಬೆಳಗಾವಿ ತಹಶೀಲ್ದಾರ್ ಕಚೇರಿಗೆ ಬಂದ ರುದ್ರಣ್ಣ, ತಹಶೀಲ್ದಾರಿ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮಗನ ಸಾವಿಗೆ ಬಸವರಾಜ್ ನಾಗರಾಳ, ಸೋಮು ಹಾಗೂ ಅಶೋಕ ಕಬ್ಬಲಿಗೇರ್ ಅವರೇ ಕಾರಣ. ಅವರನ್ನು ಬಂಧಿಸಬೇಕು. ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ರುದ್ರಣ್ಣ ಅವರ ತಾಯಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.