ನಿರ್ಣಾಯಕ ಎಲೆಕ್ಟೋರಲ್ ರಾಜ್ಯಗಳಲ್ಲಿ ಗೆಲುವು ಸಾಧಿಸಿದ ನಂತರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಫೋರಿಡಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ತಮ್ಮ ಪಕ್ಷವನ್ನು ಬೆಂಬಲಿಸಿದಕ್ಕಾಗಿ ರಾಷ್ಟ್ರದ ಜನರಿಗೆ ಧನ್ಯವಾದ ತಿಳಿಸಿದ್ದಾರೆ.
“ಅಮೆರಿಕ ನಮಗೆ ಅಭೂತಪೂರ್ವ ಹಾಗೂ ಶಕ್ತಿದಾಯಕ ಜನಾದೇಶವನ್ನು ನೀಡಿದೆ. ಇದು ಅಮೆರಿಕನ್ನರ ಭವ್ಯವಾದ ಗೆಲುವು” ಎಂದು ಫ್ಲೋರಿಡಾದ ಪಾಮ್ ಬೀಚ್ ಕೌಂಟಿ ಕನ್ವೆಂಷನ್ ಸೆಂಟರ್‌ನಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ – ಡೊನಾಲ್ಡ್ ಟ್ರಂಪ್; ಮತದಾರರ ಚಿತ್ತ ಯಾರತ್ತ?
ಪತ್ನಿ ಮೆಲಾನಿಯಾ ಮತ್ತು ಕಿರಿಯ ಪುತ್ರ ಬರೋನ್ ಅವರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್, ಇದು ಹಿಂದೆಂದು ಕಂಡಿರದ ರಾಜಕೀಯ ಗೆಲುವು ಎಂದು ತಿಳಿಸಿದ್ದಾರೆ.
ಪ್ರಸ್ತುತ, ಟ್ರಂಪ್ 25 ರಾಜ್ಯಗಳಲ್ಲಿ ಮತ್ತು ಕಮಲಾ ಹ್ಯಾರಿಸ್ 16 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 538 ಕ್ಷೇತ್ರಗಳ ಪೈಕಿ ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುಂದಿದ್ದಾರೆ. ಗೆಲುವಿಗೆ 270 ಸ್ಥಾನಗಳ ಅವಶ್ಯಕತೆಯಿದ್ದು, ಈ ಸ್ಥಾನಗಳಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಮುಂದಿನ ವರ್ಷದ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಿಪಬ್ಲಿಕನ್ ಪಕ್ಷ ಗೆಲುವು ಸಾಧಿಸಿರುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನೀವು ಹಿಂದಿನ ಅವಧಿಯಲ್ಲಿ ಯಶಸ್ಸು ಸಾಧಿಸಿದಂತೆ, ನಾವು ಭಾರತ ಮತ್ತು ಅಮೆರಿಕದ ಸಮಗ್ರ ಜಾಗತಿಕ ಬಲವರ್ಧನೆ ಹಾಗೂ ಕಾರ್ಯಗತಗೊಳಿಸುವ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚುಗೊಳಿಸಲು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಅಭಿವೃದ್ಧಿಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ.
