ಮಹಾರಾಷ್ಟ್ರದ ಬಿಜೆಪಿ ‘ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ’ ಎಂದು ಸುಳ್ಳು ಜಾಹಿರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹೀರಾತುಗಳನ್ನು ಪುಟಗಟ್ಟಲೆ ನೀಡಿದೆ. ನಮ್ಮದು ವಾದಾ ದಿಯಾ: ಪೂರಾ ಕಿಯಾ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಸಂಡೂರು ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಮಾತನಾಡಿ, “ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದು ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೇಳಿದ್ದೇನು ? ಮಾಡಿದ್ದೇನು?
“ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
ಅನ್ನಪೂರ್ಣ ಅವರನ್ನು ಗೆಲ್ಲಿಸಿ: ಮನವಿ
ಅನ್ನಪೂರ್ಣ ನನ್ನ ಆತ್ಮೀಯ ಸ್ನೇಹಿತನ ಮಗಳು. ಇವರನ್ನು ಗೆಲ್ಲಿಸಿ. ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರತ್ತೆ. ಸಂಡೂರಿನ ಅಭಿವೃದ್ಧಿ ಜೋರಾಗತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
“ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ಈ.ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು” ಎಂದರು.