ಡೊನಾಲ್ಡ್ ಟ್ರಂಪ್‌ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?

Date:

Advertisements
ಅಮೆರಿಕದ ಚುನಾವಣಾ ಫಲಿತಾಂಶವು ಭಾರತದ ವಿದೇಶಾಂಗ ನೀತಿಯ ಮೇಲೆ ಒಂದಿಷ್ಟು ಅನುಕೂಲವಾಗಬಹುದೆಂದು ಹೇಳಲಾಗುತ್ತಿದೆ. ಕೆಲವು ಹಿರಿಯ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿರುವುದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಡೊನಾಲ್ಡ್‌ ಟ್ರಂಪ್‌ ಹಾಗೂ ನರೇಂದ್ರ ಮೋದಿ ಇಬ್ಬರು ಬಲಪಂಥೀಯ ಮನಸ್ಥಿತಿ ಉಳ್ಳವರಾಗಿರುವುದು ಇದಕ್ಕೆ ಕಾರಣವಾಗಿರಬಹುದು.

ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗುತ್ತಿದ್ದಂತೆ ಏಷ್ಯಾದ ದೈತ್ಯ ರಾಷ್ಟ್ರ ಚೀನಾದಿಂದ ಒಳಗೊಂಡು ಯೂರೋಪ್‌ನ ಹಲವು ರಾಷ್ಟ್ರಗಳಿಗೆ ವ್ಯಾಪಾರ ವಹಿವಾಟಿನ ಸುಂಕಗಳು ಒಳಗೊಂಡು ಭದ್ರತಾ ಒಪ್ಪಂದಗಳ ಸಂಬಂಧಗಳ ಬಗ್ಗೆ ಆತಂಕ ಶುರುವಾಗಿದೆ. ಟ್ರಂಪ್‌ ಮೊದಲ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಾಯಕರೊಂದಿಗೆ ನಿಭಾಯಿಸಿದ ಜಾಗತಿಕ ಮಟ್ಟದ ವ್ಯವಹಾರಗಳು ಭವಿಷ್ಯತ್ತಿನಲ್ಲಿ ಮರುಕಳಿಸುವ ಅನಿಶ್ಚಿತತೆಗೆ ಕಾರಣವಾಗಿದೆ. ಟ್ರಂಪ್‌ ಪುನರಾಯ್ಕೆ ಹಾಗೂ ಮುಂದಿನ ಬೆಳವಣಿಗೆಗಳ ಬಗ್ಗೆ ಏಷ್ಯಾ ಹಾಗೂ ಯುರೋಪ್‌ನ ಬಹುತೇಕ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಯೂರೋಪಿನ ಪ್ರಮುಖ ರಾಷ್ಟ್ರ ಇಂಗ್ಲೆಂಡ್‌ನ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಕಮಲಾ ಹ್ಯಾರಿಸ್‌ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಅಮೆರಿಕ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದಂತೆ ತಕ್ಷಣವೇ ಉಕ್ರೇನ್‌ ವಿರುದ್ಧ ಯುದ್ಧವನ್ನು ನಿಲ್ಲಿಸಲು ಹಾಗೂ ಸೇನೆಯನ್ನು ಉಕ್ರೇನ್‌ನಿಂದ ವಾಪಸ್‌ ಕರೆಸಲು ರಷ್ಯಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವುದು ಕೀರ್‌ ಅವರ ಪ್ರಮುಖ ಬೇಡಿಕೆಯಾಗಿದೆ. ಟ್ರಂಪ್‌ ಆಯ್ಕೆ ಬೆನ್ನಲ್ಲೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬುಧವಾರವೇ ಜರ್ಮನಿಯ ಚಾನ್ಸಲರ್‌ ಒಲಫ್‌ ಸ್ಕೋಲಝ್‌ ಅವರನ್ನು ತುರ್ತು ಆಹ್ವಾನಿಸಿದ್ದು, ಹೊಸ ವಿದೇಶಾಂಗ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಟ್ರಂಪ್ ಅವರ ಚುನಾವಣಾ ಸಂದರ್ಭದ ಪ್ರಚಾರವು ಹಾಗೂ ಪ್ರಣಾಳಿಕೆಗಳು ಅಮೆರಿಕ ಕೇಂದ್ರಿತವಾಗಿದ್ದು, ಅಮೆರಿಕದಲ್ಲಿನ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಲು ಹೆಚ್ಚು ಪ್ರಾಮುಖ್ಯತೆ ನೀಡಿತ್ತು. ವಿಜಯೋತ್ಸವದ ಸಂದರ್ಭದಲ್ಲಿನ ಭಾಷಣದಲ್ಲೂ ಕೂಡ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟ್ರಂಪ್‌ ಅವರು ವಿದೇಶಾಂಗ ನೀತಿಯ ಯಾವುದೇ ಅಂಶವನ್ನು ಉಲ್ಲೇಖಿಸಲಿಲ್ಲ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಾಲ್ಕು ವರ್ಷಗಳ ಅವಧಿಯಲ್ಲಿ ಮಿತ್ರರಾಷ್ಟ್ರಗಳು ಮತ್ತು ವಿರೋಧಿ ರಾಷ್ಟ್ರಗಳು ಅಮೆರಿಕದ ವಿದೇಶಾಂಗ ನೀತಿಯಿಂದ ಸಾಕಷ್ಟು ಒತ್ತಡವನ್ನು ಅನುಭವಿಸಿದ್ದರು.

Advertisements

ಚೀನಾದ ಮೇಲೆ ಮೊದಲಿಗಿಂತ ಸಾಕಷ್ಟು ಕೆಂಗಣ್ಣು ಬೀರಿರುವ ಟ್ರಂಪ್‌, ಚುನಾವಣಾ ಪ್ರಚಾರದಲ್ಲಿ ಚೀನಾದ ಸರಕುಗಳ ಮೇಲೆ ಶೇ.60 ರಷ್ಟು ಸುಂಕಗಳನ್ನು ವಿಧಿಸಲು ಕರೆ ನೀಡಿದ್ದರು. ಟ್ರಂಪ್‌ ಅವರ ಎರಡನೇ ಬಾರಿಯ ಗೆಲುವು ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಡುವುದರ ಜೊತೆ ಮತ್ತಷ್ಟು ಅನಿಶ್ಚಿತತೆ ಮುಂದುವರಿಯುತ್ತದೆ ಎಂದು ಬೀಜಿಂಗ್‌ನ ಸಿಂಗುವಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ಕೇಂದ್ರದ ನಿರ್ದೇಶಕ ಡಾ. ವೀ ಅಭಿಪ್ರಾಯಪಡುತ್ತಾರೆ. ಹಾಗೆಯೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು ಬುಧವಾರ ಬೀಜಿಂಗ್‌ನಲ್ಲಿ ಮಾತನಾಡಿ, ಅಮೆರಿಕದೊಂದಿಗೆ ಚೀನಾದ ನೀತಿಯು ಸ್ಥಿರವಾಗಿರುತ್ತದೆ ಹಾಗೂ ಪರಸ್ಪರ ಗೌರವದ ತತ್ವಗಳೊಂದಿಗೆ  ಸಹಕಾರವನ್ನು ನಿರ್ವಹಿಸುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿ ದ್ವಿಪಕ್ಷಗಳ ಬಾಂಧವ್ಯವನ್ನು ಕೆಡಲು ಮುಂದಾಗುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

ಇಸ್ರೇಲ್ ಯುದ್ಧ ನಿಲ್ಲಿಸುವರೆ ಟ್ರಂಪ್?

ಪ್ಯಾಲೆಸ್ತೀನ್ ಹಾಗೂ ಗಾಜಾದಲ್ಲಿ ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗಿರುವ ಅಮೆರಿಕದ ಅತ್ಯಾಪ್ತ ಇಸ್ರೇಲ್‌ ಹಾಗೂ ಅಲ್ಲಿನ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಕೂಡ ಟ್ರಂಪ್‌ ಗೆಲುವಿನಿಂದ ಸಂತಸಗೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ‘ಅಮೆರಿಕ ಚುನಾವಣೆಯ ಫಲಿತಾಂಶದಲ್ಲಿ ಇತಿಹಾಸದ ಶ್ರೇಷ್ಠ ಪುನರಾಗಮನವಾಗಿದೆ’ ಎಂದು ಶ್ಲಾಘಿಸಿರುವುದಲ್ಲದೆ “ಆತ್ಮೀಯ ಡೊನಾಲ್ಡ್ ಮತ್ತು ಮೆಲಾನಿಯಾ ಟ್ರಂಪ್” ಎಂದು ಸಂಬೋಧಿಸಿದ್ದಾರೆ. ಈ ಹೇಳಿಕೆ ಗಮನಿಸಿದರೆ ಹಮಾಸ್, ಹೆಜ್ಬುಲ್ಲಾ ಮತ್ತು ಇರಾನ್‌ ಮೇಲೆ ಇಸ್ರೇಲ್‌ ಮತ್ತಷ್ಟು ದಾಳಿ ಮುಂದುವರಿಸಬಹುದು. ಟ್ರಂಪ್‌ ಇಸ್ರೇಲ್‌ನ ಯುದ್ಧ ಹಪಾಹಪಿಗೆ ಮತ್ತಷ್ಟು ಬೆಂಬಲ ನೀಡಬಹುದು ಎಂಬುದು ತಿಳಿಯುತ್ತದೆ.

ಈ ಸುದ್ದಿ ಓದಿದ್ದೀರಾ? ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

ಟ್ರಂಪ್‌ ಗೆಲುವಿನ ಬೆನ್ನಲ್ಲೆ ಹಮಾಸ್ ನಾಯಕರು ಕೂಡ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ. ಹಮಾಸ್‌ನ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ, ”ಯುದ್ಧ ನಿಲ್ಲಿಸುವ ಟ್ರಂಪ್ ಹೇಳಿಕೆ ಪರೀಕ್ಷೆಗೆ ಒಳಪಡುತ್ತದೆ. ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ ತಪ್ಪುಗಳಿಂದ ಟ್ರಂಪ್ ಪಾಠ ಕಲಿಯಲಿ” ಎಂದು ಹೇಳಿದ್ದಾರೆ. ಅಮೆರಿಕ ಚುನಾವಣಾ ಸಮಯದಲ್ಲಿ ಇಸ್ರೇಲ್ – ಹಮಾಸ್ ನಡುವಿನ ದೀರ್ಘ ಅವಧಿಯ ಯುದ್ಧವೂ ಇದರಲ್ಲಿ ಒಂದಾಗಿತ್ತು. ಗಾಜಾ ಯುದ್ಧದ ಬಗ್ಗೆ ತಮ್ಮ ಭಾಷಣಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಾಸಿನೊಳಗೆ ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸುತ್ತೇನೆ ಎಂದಿದ್ದರು. ತಾವು ಆಡಿದ ಮಾತಿನಂತೆ ನಡೆದುಕೊಳ್ಳುತ್ತಾರಾ ಎಂಬುದು ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಟ್ರಂಪ್‌ ಬಂಡವಾಳ ಬಯಲಾಗಲಿದೆ.

ಅಮೆರಿಕದ ಚುನಾವಣಾ ಫಲಿತಾಂಶವು ಭಾರತದ ವಿದೇಶಾಂಗ ನೀತಿಯ ಮೇಲೆ ಒಂದಿಷ್ಟು ಅನುಕೂಲವಾಗಬಹುದೆಂದು ಹೇಳಲಾಗುತ್ತಿದೆ. ಕೆಲವು ಹಿರಿಯ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿರುವುದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಡೊನಾಲ್ಡ್‌ ಟ್ರಂಪ್‌ ಹಾಗೂ ನರೇಂದ್ರ ಮೋದಿ ಇಬ್ಬರು ಬಲಪಂಥೀಯ ಮನಸ್ಥಿತಿ ಉಳ್ಳವರಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಭಾರತದಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶಗಳಲ್ಲಿ ವಾಸಿಸುವ ಅಪರಾಧಿಗಳ ವಿರುದ್ಧದ ಕಾರ್ಯಾಚರಣೆಗೆ ಭಾರತಕ್ಕೆ ಟ್ರಂಪ್‌ ಆಡಳಿತ ನೆರವಾಗಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಅಮೆರಿಕದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಗೆ ಆದೇಶ ನೀಡಿದ ಭಾರತೀಯ ಸರ್ಕಾರಿ ಏಜೆಂಟರ ಮೇಲೆ ಅಮೆರಿಕ ಆರೋಪ ಹೊರಿಸಿತ್ತು. ಕೆನಡಾ ಕೂಡ ಆ ದೇಶದಲ್ಲಿ ಮತ್ತೊಬ್ಬ ಸಿಖ್ ಕಾರ್ಯಕರ್ತನ ಹತ್ಯೆಯಲ್ಲಿ ಮೋದಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿತ್ತು.

ಚೀನಾದ ರಕ್ಷಣಾ ನೀತಿಗೆ ವಿರುದ್ಧವಾಗಿ ಆಸ್ಟ್ರೇಲಿಯಾದಲ್ಲಿ, ಜೋ ಬೈಡನ್‌ ಆಡಳಿತ ಇಂಗ್ಲೆಂಡ್‌ ಒಳಗೊಂಡ ‘ಎಯುಕೆಯುಎಸ್’ ಎಂಬ ಪ್ರಮುಖ ರಕ್ಷಣ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದವನ್ನು ವಿರೋಧಿಸಿ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದ ರಾಜಕಾರಣಿಗಳು ರಾಜೀನಾಮೆ ನೀಡಿದ್ದರು. ಮತ್ತೊಮ್ಮೆ ಆಯ್ಕೆಯಾಗಿರುವ ಟ್ರಂಪ್‌ ಅವರು ಚೀನಾ ವಿರೋಧಿ ನೀತಿಗೆ ಸಮ್ಮತಿಸುತ್ತಾರೆಯೆ ಅಥವಾ ಕೈಬಿಡುತ್ತಾರೆಯೆ ಎಂಬುದು ಕೂಡ ಪ್ರಮುಖವಾಗಿದೆ.

ತೈವಾನ್‌ನ ಸೂಚೌ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಚೆನ್ ಫಾಂಗ್-ಯು ಪ್ರಕಾರ, ಟ್ರಂಪ್‌ ಅವರ ವಿದೇಶಾಂಗ ನೀತಿಗಳು “ಅನಿರೀಕ್ಷಿತೆ ಮತ್ತು ಪ್ರತ್ಯೇಕತೆಯ” ಮೇಲೆ ಹೆಚ್ಚು ಕೇಂದ್ರೀಕರಿಸುತ್ತವೆ ಎಂದು ತಿಳಿಸಿದ್ದಾರೆ.

ಕಂಪನಿಗಳೊಂದಿಗೆ ವ್ಯವಹಾರ ಮತ್ತು ವ್ಯಾಪಾರದ ಸಂಬಂಧವನ್ನು ವಿಶ್ಲೇಷಿಸುವುದು ಸೇರಿದಂತೆ ಅಮೆರಿಕಕ್ಕೆ ಕಳುಹಿಸಲಾದ ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ನೀತಿಯನ್ನು ಜಪಾನ್‌ ಪರಿಶೀಲಿಸುವ ಸಾಧ್ಯತೆಯಿದೆ. ಡೊನಾಲ್ಡ್‌ ಟ್ರಂಪ್‌ ನೂತನವಾಗಿ ಆಯ್ಕೆಯಾಗಿರುವುದರಿಂದ ಉತ್ತರ ಕೊರಿಯಾದ ಬೆದರಿಕೆ ಹಿನ್ನಲೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜೊತೆ ಮತ್ತಷ್ಟು ತ್ರಿಪಕ್ಷೀಯ ಒಪ್ಪಂದಗಳಿಗೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.  

ಉಕ್ರೇನ್ ಸ್ನೇಹ ಕಡಿತ ಸಾಧ್ಯತೆ

ಟ್ರಂಪ್ ಅವರ ಸಹವರ್ತಿ ಜೆಡಿ ವ್ಯಾನ್ಸ್ ಅವರು ಯೂರೋಪಿನ ಆತಂಕ ಹೆಚ್ಚಿಸುವ ಉಕ್ರೇನ್‌ಗಿಂತ ಹೆಚ್ಚಾಗಿ ಏಷ್ಯಾದ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದ್ದಾರೆ. ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಶುಕ್ರವಾರದಂದು ನಿಗದಿತ ಶೃಂಗಸಭೆಯ ಮೊದಲು ಔತಣಕೂಟದಲ್ಲಿ ಅಮೆರಿಕದ ಚುನಾವಣಾ ಫಲಿತಾಂಶಗಳ ಬಗ್ಗೆ ಯುರೋಪಿಯನ್ ಒಕ್ಕೂಟದ ನಾಯಕರು ಚರ್ಚಿಸಲಿದ್ದಾರೆ. ಒಂದು ವೇಳೆ ಉಕ್ರೇನ್‌ಗೆ ಅಮೆರಿಕ ನಿರೀಕ್ಷಿತ ಮಟ್ಟದ ಬೆಂಬಲವನ್ನು ನೀಡದಿದ್ದರೆ, ಉಕ್ರೇನ್‌ ರಕ್ಷಣೆಗೆ ಯುರೋಪ್ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗೆಯೂ ಮಾತುಕತೆಗಳು ನಡೆಯಲಿವೆ. ಟ್ರಂಪ್‌ ಯುರೋಪ್‌ನೊಂದಿಗೆ ಸಕಾರಾತ್ಮಕ ಸಂಬಂಧ ಹೊಂದಿದ್ದರೂ ರಷ್ಯಾ ಜೊತೆಗೆ ಉದಾರ ಭಾವನೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಹಿಂದಿನ ಟ್ರಂಪ್‌ ಅವರ ಆಡಳಿತದಲ್ಲಿ ರಷ್ಯಾ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬ ಆಪಾದನೆ ಹೆಚ್ಚಾಗಿ ಕೇಳಿ ಬಂದಿತ್ತು. ಇವೆಲ್ಲವೂ ಉಕ್ರೇನ್‌ ಯುದ್ಧದ ಮೇಲೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಯುರೋಪ್‌ಗೆ ಟ್ರಂಪ್‌ ಪುನರಾಯ್ಕೆ ನಿರ್ಣಾಯಕ ಘಟ್ಟವಾಗಿದೆ ಎಂದು ಹಲವು ರಾಜತಾಂತ್ರಿಕರು ಅಭಿಪ್ರಾಯಪಡುತ್ತಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X