ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ರಾಜ್ಯದ ಅಧಿಕಾರದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬುದು ಖಚಿತವಾಗಲಿದೆ. ಈಗಾಗಲೇ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಇಂಡಿಯಾ ಒಕ್ಕೂಟ ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಇತ್ತ ಬಿಜೆಪಿ ತನ್ನ ಸ್ವಂತ ಬಲದಿಂದಲೇ ಗದ್ದುಗೆ ಏರುವ ಕನಸು ಕಾಣುತ್ತಿದೆ. ಆದರೆ ಜಾರ್ಖಂಡ್‌ನಲ್ಲಿ ಯಾವ ಪಕ್ಷ ಮುಂದಿನ ಸರ್ಕಾರ ರಚಿಸಲಿದೆ ಎಂದು ನಿರ್ಧರಿಸುವುದು ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಮತಗಳು.
2000ರಲ್ಲಿ ರಚನೆಯಾದ ಜಾರ್ಖಂಡ್ ಇದೀಗ ಐದನೇ ವಿಧಾನಸಭೆ ಚುನಾವಣೆಯ ಸಿದ್ದತೆಯಲ್ಲಿದೆ. ಈವರೆಗೆ ಇಲ್ಲಿ ಯಾವುದೇ ಪಕ್ಷಗಳು ತಮ್ಮ ಸ್ವಂತ ಬಲದಿಂದ ಸರ್ಕಾರ ರಚಿಸಿಲ್ಲ. ಹಾಗಾಗಿ ಬುಡಕಟ್ಟು ಸಮುದಾಯದ ಮತಗಳನ್ನು ತಮ್ಮತ್ತ ಸೆಳೆದು ಬಹುಮತದಿಂದ ಸರ್ಕಾರ ರಚಿಸಿ ಇತಿಹಾಸ ನಿರ್ಮಿಸಲು ಬಿಜೆಪಿ ಹೆಣಗುತ್ತಿದೆ. ಗೆಲುವಿಗಾಗಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಗ್ಯಾರಂಟಿ’ ಎಂದು ಟೀಕಿಸುತ್ತಿದ್ದ ಬಿಜೆಪಿ ಜಾರ್ಖಂಡ್‌ನಲ್ಲಿ 25 ಗ್ಯಾರಂಟಿಗಳಿಗೆ ಜೋತು ಬಿದ್ದಿದೆ.
ಕಳೆದ 24 ವರ್ಷಗಳಲ್ಲಿ ಸುಮಾರು 13 ವರ್ಷಗಳ ಕಾಲ ಜಾರ್ಖಂಡ್‌ನಲ್ಲಿ ಆಡಳಿತ ನಡೆಸಿರುವ ಬಿಜೆಪಿ ತನ್ನ ತಪ್ಪು ನಿರ್ಧಾರ, ದುರಾಡಳಿತದಿಂದಾಗಿಯೇ ಅಧಿಕಾರ ಕಳೆದುಕೊಂಡಿತು. ಬುಡಕಟ್ಟು ಸಮುದಾಯದ ಮತಗಳು ಲಭಿಸದಿರುವುದೇ 2019ರಲ್ಲಿ ಬಿಜೆಪಿಯ ಸೋಲಿಗೆ ಮುಖ್ಯ ಕಾರಣ. ಆದಿವಾಸಿಗಳ ವಿರುದ್ಧವಾಗಿ ನಿಂತ ಬಿಜೆಪಿಗೆ ಚುನಾವಣೆಯಲ್ಲೇ ಸಮುದಾಯ ಉತ್ತರ ನೀಡಿತ್ತು. ಈ ಚುನಾವಣೆಯಲ್ಲಿಯೂ ಬುಡಕಟ್ಟು ಸಮುದಾಯದ ಮತಗಳು ಜಾರ್ಖಂಡ್‌ನಲ್ಲಿ ನಿರ್ಣಾಯಕವಾಗಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಜನತೆಗೆ 25 ಗ್ಯಾರಂಟಿಗಳನ್ನು ಘೋಷಿಸಿದ ಬಿಜೆಪಿ: ಇಲ್ಲಿ ಟೀಕೆ, ಅಲ್ಲಿ ಓಲೈಕೆ!
2019ರ ಚುನಾವಣೆಯಲ್ಲಿ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮೈತ್ರಿಕೂಟವು 81 ಸ್ಥಾನಗಳ ಪೈಕಿ 47ರಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ 30 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆಯುವ ಮೂಲಕ ಜೆಎಂಎಂ ಜಾರ್ಖಂಡ್‌ನಲ್ಲಿ ಅತೀ ದೊಡ್ಡ ಪಕ್ಷ ಎನಿಸಿಕೊಂಡಿದೆ. ಬಿಜೆಪಿ ಅತೀ ಹೆಚ್ಚು ಮತ ಪಡೆದಿದ್ದರೂ ಕೂಡಾ 25 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದೆ. 2014ರಲ್ಲಿ 37 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ 2019ರಲ್ಲಿ ಸುಮಾರು 12 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಜೆಎಂಎಂ ಮತ್ತು ಕಾಂಗ್ರೆಸ್ ಎರಡೂ ತಮ್ಮ ಕ್ಷೇತ್ರಗಳನ್ನು ವಿಸ್ತರಿಸಿಕೊಂಡಿದೆ. ಈ ಬದಲಾವಣೆಗೆ ಮುಖ್ಯ ಕೊಡುಗೆ ನೀಡಿದ್ದು ಬುಡಕಟ್ಟು ಸಮುದಾಯದ ಮತಗಳು.
ಬುಡಕಟ್ಟು ಜನಾಂಗದ ಮತಕ್ಕಾಗಿ ಬೇಟೆ
ಪ್ರಸ್ತುತ ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಮತಕ್ಕಾಗಿ ಬೇಟೆ ನಡೆಯುತ್ತಿದೆ. 2011ರ ಜನಗಣತಿ ಪ್ರಕಾರ ಜಾರ್ಖಂಡ್‌ನಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 26ರಷ್ಟು ಬುಡಕಟ್ಟು ಸಮುದಾಯವಾಗಿದೆ. ಒಟ್ಟು 81 ವಿಧಾನಸಭಾ ಕ್ಷೇತ್ರಗಳ ಪೈಕಿ 28 ಸೀಟುಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಿಡಲಾಗಿದೆ. ಜಾರ್ಖಂಡ್‌ನ ಬುಡಕಟ್ಟು ಪ್ರಾಬಲ್ಯದ ದಕ್ಷಿಣ ಚೋಟಾನಾಗ್‌ಪುರ ಪ್ರದೇಶದಲ್ಲಿ ಒಟ್ಟು ಐದು ಜಿಲ್ಲೆಗಳಿದ್ದು ಅಲ್ಲಿ 15 ವಿಧಾನಸಭೆ ಕ್ಷೇತ್ರಗಳಿದೆ. ಈ ಪೈಕಿ 11ರಲ್ಲಿ ಎಸ್‌ಟಿ ಮೀಸಲಾತಿಯಿದೆ.
ಜಾರ್ಖಂಡ್‌ನಲ್ಲಿ ಬಿಜೆಪಿ 2014-2019ರವರೆಗೆ ಅಧಿಕಾರವನ್ನು ಹೊಂದಿತ್ತು. ಐದು ವರ್ಷವೂ ಕೂಡಾ ರಘುಬರ್ ದಾಸ್ ಮುಖ್ಯಮಂತ್ರಿಯಾಗಿದ್ದರು. ಆದರೆ 2019ರಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಬಲಿಷ್ಠ ರೈತ ಹೋರಾಟದ ಇತಿಹಾಸ ಹೊಂದಿರುವ ಹರಿಯಾಣದಲ್ಲಿ ಸೋಲನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಹೇಗೆ ಸಾಧ್ಯವಾಗಿಲ್ಲವೋ ಅದೇ ಸ್ಥಿತಿ 2019ರಲ್ಲಿ ಬಿಜೆಪಿಗೆ ಜಾರ್ಖಂಡ್‌ನಲ್ಲಿ ಎದುರಾಗಿತ್ತು. ಸಿಎಂ ಆಗಿದ್ದ ರಘುಬರ್ ದಾಸ್ ಅವರೇ ಜಮ್ಶೆದ್‌ಪುರ ಪೂರ್ವ ಕ್ಷೇತ್ರದಲ್ಲಿ ಪರಾಭವಗೊಂಡರು. ಇದಕ್ಕೆಲ್ಲ ಮುಖ್ಯ ಕಾರಣವಾಗಿದ್ದು ಬಿಜೆಪಿಯ ಬುಡಕಟ್ಟು ಜನಾಂಗಕ್ಕೆ ವಿರುದ್ಧವಾದ ನಿರ್ಧಾರಗಳು, ದುರಾಡಳಿತ ಮತ್ತು ಪಕ್ಷದ ಒಳಹೊರಗೆ ಎದ್ದ ಅಧಿಕಾರ ವಿರೋಧಿ ಅಲೆಯಾಗಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ | ಬಂಡಾಯವೆದ್ದ 30 ನಾಯಕರ ಉಚ್ಚಾಟಿಸಿದ ಬಿಜೆಪಿ
ಜಾರ್ಖಂಡ್‌ನಲ್ಲಿ ಚೋಟಾನಾಗ್‌ಪುರ ಟೆನೆನ್ಸಿ ಆಕ್ಟ್ 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್ 1949 – ಬುಡಕಟ್ಟು ಜನಾಂಗಕ್ಕೆ ಇರುವ ಭೂಮಿಯ ಮೇಲಿನ ಹಕ್ಕನ್ನು ರಕ್ಷಿಸುತ್ತದೆ. ಆದರೆ 2016-2017ರಲ್ಲಿ ಬಿಜೆಪಿ ಸರ್ಕಾರ ಈ ಎರಡೂ ಕಾನೂನನ್ನು ತಿದ್ದುಪಡಿ ಮಾಡಲು ಮುಂದಾಗಿ ಬುಡಕಟ್ಟು ಸಮುದಾಯದ ಕೆಂಗಣ್ಣಿಗೆ ಗುರಿಯಾಯಿತು. ತಿದ್ದುಪಡಿ ಕಾಯ್ದೆಗಳು ಬುಡಕಟ್ಟು ಜನಾಂಗದ ಜನರಿಗೆ ಸೇರಿದ ಭೂಮಿಯನ್ನು ಕೈಗಾರಿಕೆ ಮತ್ತು ‘ಅಭಿವೃದ್ಧಿ’ ಉದ್ದೇಶಗಳಿಗಾಗಿ ವರ್ಗಾಯಿಸಲು ಅವಕಾಶ ನೀಡುತ್ತದೆ.
ಈ ತಿದ್ದುಪಡಿ ಕಾಯ್ದೆಯ ವಿರುದ್ಧ ಬುಡಕಟ್ಟು ಸಮುದಾಯವು ಪ್ರಬಲ ಚಳವಳಿಯನ್ನು ಸಂಘಟಿಸಿತು. ಪಾತಾಳಗಡಿ ಚಳವಳಿ ನಡೆಸಿದ ಸಾವಿರಾರು ಜನರನ್ನು ಬಿಜೆಪಿ ಸರ್ಕಾರ ಬಂಧಿಸಿತು. 14000 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿತು. ಅದೆಷ್ಟೋ ಜನರಿಗೆ ದೇಶದ್ರೋಹ ಹಣೆಪಟ್ಟಿಯನ್ನು ಕಟ್ಟಲಾಯಿತು. ಬಿಜೆಪಿ ಸರ್ಕಾರವು ಬುಡಕಟ್ಟು ಸಮುದಾಯದ ಮೇಲೆ ನಿರಂತರ ದಾಳಿ ನಡೆಸಿತು. ಬಿಜೆಪಿಯ ಈ ಕ್ರೂರ ಆಡಳಿತವೇ 2019ರಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು. ಬಿಜೆಪಿಯಲ್ಲಿದ್ದ ಹಲವು ಬುಡಕಟ್ಟು ನಾಯಕರು ಪಕ್ಷ ತೊರೆದರು. 28 ಎಸ್‌ಟಿ ಮೀಸಲಾತಿ ಸ್ಥಾನದಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಬಿಜೆಪಿ ಪಡೆಯಿತು.
ತನ್ನ ಇತಿಹಾಸದಿಂದ ಪಾಠ ಕಲಿತ ಬಿಜೆಪಿ ಈಗ ಬುಡಕಟ್ಟು ಮತಗಳ ಮಹತ್ವವನ್ನು ಅರಿತು 2023ರಲ್ಲಿ ಜಾರ್ಖಂಡ್ ಮುಖ್ಯಸ್ಥರಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರನ್ನು ನೇಮಿಸಿದೆ. ಮೂವರು ಮಾಜಿ ಬುಡಕಟ್ಟು ಮುಖ್ಯಮಂತ್ರಿಗಳಾದ ಚಂಪೈ ಸೊರೇನ್, ಅರ್ಜುನ್ ಮುಂಡಾ ಮತ್ತು ಮಧು ಕೋಡಾ ಅವರನ್ನು ಅವಲಂಬಿಸಿದೆ. ಜೊತೆಗೆ ಮಹಿಳೆಯರನ್ನು ತನ್ನತ್ತ ಸೆಳೆಯುವ ‘ಗ್ಯಾರಂಟಿ’ಗಳನ್ನು ಘೋಷಿಸಿಕೊಂಡಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಚುನಾವಣೆ | ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಮಾನಸ್ ಸಿನ್ಹಾ ಬಿಜೆಪಿ ಸೇರ್ಪಡೆ
ಆಗಸ್ಟ್‌ನಲ್ಲಿ ಜೆಎಂಎಂ ತೊರೆದು ಬಿಜೆಪಿ ಸೇರಿದ ಚಂಪೈ ಸೊರೇನ್ ಮತ್ತು ಅವರ ಮಗ ಬಾಬುಲಾಲ್ ಮರಾಂಡಿ ಅವರು ಸರೈಕೆಲಾ ಮತ್ತು ಘಟ್‌ಶಿಲಾದಿಂದ ಸ್ಪರ್ಧಿಸುತ್ತಿದ್ದಾರೆ. 2006ರಲ್ಲಿ ಅರ್ಜುನ್ ಮುಂಡಾ ನೇತೃತ್ವದ ಸರ್ಕಾರವನ್ನು ಕೆಡವಿ ಮುಖ್ಯಮಂತ್ರಿಯಾಗಿದ್ದ ಮಧು ಕೋಡಾ ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ಆದರೆ ಚಂಪೈ ಸೊರೇನ್ ಅವರ ರಾಜಕೀಯ ಸಂತಾಲ್ ಪ್ರದೇಶಕ್ಕೆ ಸೀಮಿತವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಇನ್ನೊಂದೆಡೆ ಬಿಜೆಪಿಯಲ್ಲಿ ಬಂಡಾಯದ ಅಲೆ ಎದ್ದಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಘೋಷಿಸಿದ 35ಕ್ಕೂ ಅಧಿಕ ಅಭ್ಯರ್ಥಿಗಳು ಇತರೆ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರಗೊಂಡವರು. ಇದು ಬಿಜೆಪಿ ನಾಯಕರಲ್ಲಿ ನಿರಾಶೆಗೆ ಕಾರಣವಾಗಿದೆ. ಬಂಡಾಯವೆದ್ದು ಹಲವು ಬಿಜೆಪಿ ನಾಯಕರು ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೇ 30 ನಾಯಕರುಗಳನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ. ಬುಡಕಟ್ಟು ಸಮುದಾಯವನ್ನು ಮತ್ತೆ ತನ್ನೆಡೆ ಸೆಳೆಯುವ ಜೊತೆಗೆ ಬಂಡಾಯ ಶಮನವೂ ಬಿಜೆಪಿಗೆ ದೊಡ್ಡ ಸವಾಲಾಗಿದೆ.
ಜೆಎಂಎಂ-ಕಾಂಗ್ರೆಸ್ ಕೈ ಹಿಡಿದ ಬುಡಕಟ್ಟು ಜನಾಂಗ
ಬಿಜೆಪಿಯ ಬುಡಕಟ್ಟು ವಿರೋಧಿ ಆಡಳಿತ ಸಂದರ್ಭದಿಂದಲೇ ಜೆಎಂಎಂ ಮತ್ತು ಕಾಂಗ್ರೆಸ್ ಈ ಜನಾಂಗದ ಪರವಾಗಿ ಧ್ವನಿ ಎತ್ತುವಲ್ಲಿ ಸಫಲವಾಗಿದೆ. ಅಲ್ಲಲ್ಲಿ ಎಡ ಪಕ್ಷಗಳೂ ಕೂಡಾ ತನ್ನ ಬಲವನ್ನು ಪ್ರದರ್ಶಿಸಿದೆ. ಆದರೆ ಬಿಜೆಪಿಯ ದುರಾಡಳಿತದಿಂದ ಅಧಿಕ ಲಾಭ ಪಡೆದದ್ದು ಜೆಎಂಎಂ. ಎರಡು ಕಾಯ್ದೆಗಳ ತಿದ್ದುಪಡಿ ವಿರುದ್ಧವಾಗಿ ಜೆಎಂಎಂ ನಿಂತಿತು. ಹೇಮಂತ್ ಸೊರೇನ್ ಅವರ 2019ರ ಚುನಾವಣಾ ಭರವಸೆಗಳಲ್ಲಿ ಸಾವಿರಾರು ಬುಡಕಟ್ಟು ಸಮುದಾಯದ ಜನರ ವಿರುದ್ಧ ಬಿಜೆಪಿ ಸರ್ಕಾರ ದಾಖಲಿಸಿದ್ದ ದೇಶದ್ರೋಹ ಪ್ರಕರಣಗಳನ್ನು ರದ್ದು ಪಡಿಸುವುದೂ ಕೂಡಾ ಒಂದಾಗಿತ್ತು. ಅಧಿಕಾರಕ್ಕೆ ಬಂದ ಬಳಿಕ ಮಾತಿಗೆ ತಕ್ಕಂತೆ ನಡೆದುಕೊಂಡು ಬುಡಕಟ್ಟು ಜನರು ತನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಜೊತೆಗೆ ಮಿತ್ರ ಪಕ್ಷಗಳೊಂದಿಗೆ ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದೆ.
ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ಬುಡಕಟ್ಟು ಜನಾಂಗದ ಮೇಲೆ ನಡೆಸಿದ ದಾಳಿಯ ನೋವು ಇಂದಿಗೂ ಅಳಿದಿಲ್ಲ. ಅದಕ್ಕೆ ತಕ್ಕುದಾಗಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಬುಡಕಟ್ಟು ಸಮುದಾಯದ ಓಲೈಕೆಯಲ್ಲಿ ಸಫಲವಾದಂತಿದೆ. ಹರಿಯಾಣದಂತೆ ಜಾರ್ಖಂಡ್‌ನಲ್ಲಿಯೂ ಜಾತಿ ಲೆಕ್ಕಾಚಾರದಲ್ಲಿ ನೋಡಿದಾಗ ಬುಡಕಟ್ಟು ಜನರು ಮತ್ತು ಮಹಿಳೆಯರ ಮತಗಳೇ ನಿರ್ಣಾಯಕ. ಕರ್ನಾಟಕದಲ್ಲಿ ಗ್ಯಾರಂಟಿಗಳು ಕಾಂಗ್ರೆಸ್‌ನ ಕೈ ಹಿಡಿದಂತೆ ಜಾರ್ಖಂಡ್‌ನಲ್ಲಿ ’25 ಗ್ಯಾರಂಟಿಗಳು’ ಬಿಜೆಪಿಗೆ ಅದೃಷ್ಟ ಕುದುರಿಸುತ್ತಾ ಅಥವಾ ಮತಗಳು ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟದ ‘7 ಗ್ಯಾರಂಟಿಗಳ’ ತೆಕ್ಕೆಗೆ ಸೇರುತ್ತಾ ಕಾದುನೋಡಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.