ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಬೀಗ ಜಡೆದು ಪ್ರತಿಭಟನೆ ನಡೆಸಿದರು.
ʼ2021-22ರಲ್ಲಿ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರು ಕೆಕೆಆರ್‌ಡಿಬಿ ಯೋಜನೆಯಡಿ 5 ಶಾಲಾ ಕೋಣೆಗಳ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಮಂಜೂರು ಮಾಡಿದ್ದರು. ಜಿಲ್ಲಾ ಪಂಚಾಯತಿಯಿಂದ ಗುತ್ತಿಗೆ ಪಡೆದ ಅಮರಗುಂಡಪ್ಪ ಮೇಟಿ ಎಂಬುವರು 2 ವರ್ಷ ಕಳೆದರೂ 3 ಕೊಠಡಿ ನಿರ್ಮಿಸಿ ಉಳಿದ 2 ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿದ್ದಾರೆʼ ಎಂದು ಆರೋಪಿಸಿದರು.
ʼಎರಡು ವರ್ಷ ಕಳೆದರೂ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಾಮಸ್ಥರು ಜಿಲ್ಲಾ ಪಂಚಾಯತಿ ಉಪವಿಭಾಗದ ಎಇಇ ಅವರನ್ನು ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ನಾನೇನು ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆʼ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪೋಕ್ಸೊ ಪ್ರಕರಣ | ಮಂಜಪ್ಪನಂಥವರು ಶಾಲೆ ನಡೆಸಲು ಯೋಗ್ಯರೇ?; ಸರ್ಕಾರ ʼವನಶ್ರೀ ವಿದ್ಯಾಲಯʼಕ್ಕೆ ಶಾಶ್ವತ ಬೀಗ ಹಾಕಲಿ
ವಿದ್ಯಾರ್ಥಿಗಳಿಗೆ ಕೂರಲು ತರಗತಿ ಕೋಣೆ ಇಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆಗೆ ಬೀಗ ಜಡೆದು ಪ್ರತಿಭಟಿಸಿದರು. ಶೀಘ್ರವೇ ಅಪೂರ್ಣ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಅಪೂರ್ಣ ಕುರಿತು ತನಿಖೆ ನಡೆಸಿ ಗುತ್ತಿಗೆದಾರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.