ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್‌ಸಿಬಿ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಹೈದರಾಬಾದ್‌ನ ರಾಜೀವ್‌ಗಾಂಧಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ʻಕಿಂಗ್ ಕೊಹ್ಲಿʼ ದಾಖಲಿಸಿದ ಅಮೋಘ ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ʻಕ್ಲಾಸಿಕ್ ಫಿಫ್ಟಿʼ ನೆರವಿನಿಂದ ಆರ್‌ಸಿಬಿ, ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಹೈದರಬಾದ್ ತಂಡ, ಹೆನ್ರಿಕ್ ಕ್ಲಾಸೆನ್ ಅಬ್ಬರದ ಶತಕದ ಬಲದಲ್ಲಿ 5 ವಿಕೆಟ್ ನಷ್ಟದಲ್ಲಿ 186 ರನ್‌ಗಳಿಸಿತ್ತು. 51 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 6 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 104 ರನ್‌ಗಳಿಸಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ ಕ್ಲಾಸೆನ್ ಅವರ ಸ್ಮರನೀಯ ಶತಕವು ಸೋಲಿನಲ್ಲಿ ಕೊನೆಯಾಯಿತು.
ದಾಖಲೆ ಸರಿಗಟ್ಟಿದ ಕೊಹ್ಲಿ!
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 6ನೇ ಶತಕವನ್ನು ಪೂರ್ತಿಗೊಳಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಶತಕದ ದಾಖಲೆ ಹೊಂದಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ನಾಯಕ ಫಾಫ್ ಡು ಪ್ಲೆಸಿಸ್ 47 ಎಸೆತಗಳಲ್ಲಿ 71 ರನ್ ಗಳಿಸಿದರು. 108 ಎಸೆತಗಳಲ್ಲಿ 172 ರನ್‌ಗಳ ಜೊತೆಯಾದಲ್ಲಿ ಭಾಗಿಯಾದ ಈ ಜೋಡಿ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು. ಆ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ.
14 ಪಂದ್ಯಗಳ ಪೈಕಿ 13 ಪಂದ್ಯಗಳನ್ನಾಡಿರುವ ಆರ್‌ಸಿಬಿ, 7 ಗೆಲುವು ಹಾಗೂ 6 ಸೋಲು ಕಂಡಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಪ್ರಸಕ್ತ ಆವೃತ್ತಿಯ ಲೀಗ್ ಹಂತದ ಒಟ್ಟು 70 ಪಂದ್ಯಗಳಲ್ಲಿ 65 ಪಂದ್ಯಗಳು ಮುಕ್ತಾಯ ಕಂಡಿದೆ. ಅದಾಗಿಯೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಮಾತ್ರವೇ ಕ್ವಾಲಿಫೈಯರ್ ಹಂತಕ್ಕೆ ತೇರ್ಗಡೆಯಾಗಿದೆ.
ಉಳಿದ ಮೂರು ಸ್ಥಾನಗಳಿಗಾಗಿ ನಾಲ್ಕು ತಂಡಗಳ ನಡುವೆ (ಸಿಎಸ್‌ಕೆ, ಮುಂಬೈ, ಲಕ್ನೋ, ಆರ್‌ಸಿಬಿ) ತೀವ್ರ ಪೈಪೋಟಿ ಎದುರಾಗಿದೆ.