- 2020ರ ಡಿಸೆಂಬರ್‌ನಲ್ಲಿ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದ ಮೋದಿ
- ಸುಮಾರು ₹970 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನ
ನೂತನ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಲೋಕಸಭೆ ಕಾರ್ಯಾಲಯ ತಿಳಿಸಿದೆ.
ಪ್ರಧಾನಿ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನ ಕಟ್ಟಡ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಬಳಿಕ, ಸಂಸತ್ ಭವನ ಉದ್ಘಾಟನೆ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಸಂಸತ್ ಭವನದ ಕಾಮಗಾರಿ ಪೂರ್ಣಗೊಂಡಿದೆ. ಈ ನೂತನ ಕಟ್ಟಡ ಸ್ವಾವಲಂಬಿ ಭಾರತದ ಪ್ರತೀಕವಾಗಿದೆ ಎಂದು ಲೋಕಸಭೆ ಕಾರ್ಯಾಲಯ ತಿಳಿಸಿದೆ.
ಸಂಸತ್ ಭವನವು 65 ಸಾವಿರ ಚದರ ಮೀಟರ್‌ಗಳಷ್ಟು ವಿಸ್ತಾರವಾಗಿದೆ. 2020ರ ಡಿಸೆಂಬರ್‌ನಲ್ಲಿ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದರು. 2021ರ ಜನವರಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು.
ಜುಲೈನಲ್ಲಿ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನ ನೂತನ ಕಟ್ಟಡದಲ್ಲಿ ನಡೆಯುವ ಸಾಧ್ಯತೆಯಿಲ್ಲ. ಆದರೆ, ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ, ಜಿ20 ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳ ಸಭೆಯು ಈ ವರ್ಷದ ಕೊನೆಯಲ್ಲಿ ಹೊಸ ಕಟ್ಟಡದಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಸುಮಾರು ₹970 ಕೋಟಿ ವೆಚ್ಚದಲ್ಲಿ ಈ ಸಂಸತ್ ಭವನ ನಿರ್ಮಿಸಲಾಗಿದೆ. ನಾಲ್ಕು ಅಂತಸ್ತಿನ ಸಂಸತ್ ಕಟ್ಟಡದಲ್ಲಿ 1,224 ಸಂಸದರು ಕುಳಿತುಕೊಳ್ಳಬಹುದಾಗಿದೆ. ಹೊಸ ಸಂಸತ್ತಿನ ಕಟ್ಟಡವು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ.
ಈ ಕಟ್ಟಡವು ಸಂಸದರು, ಗಣ್ಯರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಈ ಕಟ್ಟಡದಲ್ಲಿ ಸಂವಿಧಾನ ಭವನವೂ ಇದ್ದು, ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಆ ಸಭಾಂಗಣದಲ್ಲಿ ಇಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾನೂನು ಸಚಿವರಾಗಿ ಕಿರಣ್ ರಿಜಿಜು ಬದಲಿಗೆ ಅರ್ಜುನ್ ರಾಮ್ ಮೇಘವಾಲ್ ನೇಮಕ
ನೂತನ ಸಂಸತ್ ಭವನ ಕಟ್ಟಡವು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಹೊಂದಿದೆ. ಹೊಸ ಸಂಸತ್ ಕಟ್ಟಡವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಇತರ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹೊಂದಿರುತ್ತದೆ.