ಬಿಹಾರದ ಸಂಸದ ಪಪ್ಪು ಯಾದವ್ ಅವರಿಗೆ ಮತ್ತೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಜೀವ ಬೆದರಿಕೆ ಬಂದಿದೆ. ಪಪ್ಪು ಯಾದವ್ ಅವರ ವೈಯಕ್ತಿಕ ಕಾರ್ಯದರ್ಶಿ ಮೊಹಮ್ಮದ್ ಸಾಧಿಕ್ ಅಲಾಂ ಅವರ ವಾಟ್ಸಾಪ್‌ಗೆ ಈ ಜೀವ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ.
ಮೊಹಮ್ಮದ್ ಸಾಧಿಕ್ ದೆಹಲಿಯ ಕಾನೌಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ವ್ಯಕ್ತಿಯೋರ್ವ ಪಪ್ಪು ಯಾದವ್ ಅವರಿಗೆ ಇದೇ ರೀತಿಯ ಬೆದರಿಕೆಯನ್ನು ಹಾಕಿದ್ದ. ಅದಾದ ಬಳಿಕ ಬಿಹಾರದ ಪೂರ್ಣಿಯಾ ಪೊಲೀಸರು ಆರೋಪಿ ಮಹೇಶ್ ಪಾಂಡೆಯನ್ನು ಬಂಧಿಸಿದ್ದರು.
ಪಪ್ಪು ಯಾದವ್ ಹತ್ಯೆಗಾಗಿ ಆರು ವ್ಯಕ್ತಿಗಳ ಸಂಪರ್ಕ ಮಾಡಲಾಗಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಇನ್ನು ಎರಡನೇ ಬಾರಿಗೆ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯು ವಾಟ್ಸಾಪ್ ಚಾಟ್‌ನಲ್ಲಿ ಟರ್ಕಿಶ್ ನಿರ್ಮಿತ ಪಿಸ್ತೂಲ್‌ನ ಚಿತ್ರವನ್ನು ಸಹ ಹಂಚಿಕೊಂಡಿದ್ದಾನೆ. ಯಾದವ್ ಹತ್ಯೆಗೆ ಈ ಈ ಪಿಸ್ತೂಲ್ ಅನ್ನು ಬಳಸಲಾಗುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ; ಝಡ್ ಭದ್ರತೆ ಕೋರಿದ ಬಿಹಾರ ಸಂಸದ ಪಪ್ಪು ಯಾದವ್
ಶುಕ್ರವಾರ ಪೂರ್ಣಿಯಾದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಪಪ್ಪು ಯಾದವ್, “ಇದು ಮೊದಲ ಘಟನೆಯಲ್ಲ ಮತ್ತು ಪದೇ ಪದೇ ಬೆದರಿಕೆ ಬಂದಿದ್ದು, ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ. ಹಾಗೆಯೇ ಸಮಗ್ರ ತನಿಖೆಗೆ ಕರೆ ನೀಡಿದರು.
“ನಾವು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ಇನ್ಸ್‌ಪೆಕ್ಟರ್ ಜನರಲ್ (ಐಜಿ), ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಗೃಹ ಸಚಿವರೂ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಆದರೂ ಬೆದರಿಕೆ ಬರುತ್ತಲೇ ಇದೆ. ಬೆದರಿಕೆ ಹಾಕಿದ ವ್ಯಕ್ತಿ ತನಗೆ ಯಾರು ಬೆಂಬಲ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ” ಎಂದು ಹೇಳಿದರು.
ಯಾವುದೇ ರಾಜಕೀಯ ಉದ್ದೇಶಗಳು ಇದರ ಹಿಂದೆ ಇದೆಯೇ ಎಂದು ತಿಳಿಯಲು ಸಮಗ್ರ ತನಿಖೆಗೆ ಕರೆ ನೀಡಿದರು. ಬೆದರಿಕೆ ಸಂಬಂಧಿಸಿ ಒಬ್ಬರ ಬಂಧನವಾಗಿದೆ, ಆದರೆ ಇನ್ನೂ ಕೂಡಾ ಬಂಧನವಾಗಿಲ್ಲ ಎಂದು ತಿಳಿಸಿದರು.
