ಗ್ರಾನೈಟ್ ತುಂಬಿದ್ದ ಲಾರಿಯೊಂದು ಹಿಂದಕ್ಕೆ ಚಲಿಸಿ, ಏಕಾಏಕಿ ಗ್ಯಾರೇಜಿಗೆ ನುಗ್ಗಿದ ವೇಳೆ ಮೆಕ್ಯಾನಿಕ್ ಸಹಿತ ಇಬ್ಬರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಜೀವಾಪಾಯದಿಂದ ಪಾರಾದ ವ್ಯಕ್ತಿಗಳನ್ನು ಮೆಕ್ಯಾನಿಕ್ ಗಣಪತಿ ನಾಯಕ್ ಹಾಗೂ ವಿಶೇಷ ಚೇತನ ವ್ಯಕ್ತಿ ಸರ್ವೋತ್ತಮ ಎಚ್ ಅಮೀನ್ ಎಂದು ಗುರುತಿಸಲಾಗಿದೆ.
ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿಯ ಹಳೆಯ ರಸ್ತೆಯಲ್ಲಿ ಗಣಪತಿ ನಾಯಕ್ ಎಂಬುವವರಿಗೆ ಸೇರಿದ ಗ್ಯಾರೇಜಿಗೆ ಗ್ರಾನೈಟ್ ತುಂಬಿದ್ದ ಲಾರಿ ಏಕಾಏಕಿ ನುಗ್ಗಿದೆ. ಈ ವೇಳೆ ಗ್ಯಾರೇಜಿಗೆ ದುರಸ್ತಿಗೆ ಬಂದಿದ್ದ ನಾಲ್ಕೈದು ವಾಹನ ಲಾರಿ ಅಡಿಗೆ ಸಿಲುಕಿದೆ. ಇದೇ ವೇಳೆ ಗ್ಯಾರೇಜಿನಲ್ಲಿ ತನ್ನ ದ್ವಿಚಕ್ರ ವಾಹನದ ಕೆಲಸ ಮಾಡಿಸಲೆಂದು ಬಂದಿದ್ದ ಗ್ರಾಹಕ ಹೆರ್ಗಾದ ನಿವಾಸಿ, ಸರ್ವೋತ್ತಮ ಎಚ್ ಅಮೀನ್ ಕೂಡ ಜೀವಾಪಾಯದಿಂದ ಪಾರಾಗಿದ್ದಾರೆ.

ಹೆರ್ಗಾದಲ್ಲಿರುವ ಮನೆಯೊಂದರ ಕಾಮಗಾರಿಗಾಗಿ ಬೆಂಗಳೂರಿನಿಂದ ಗ್ರಾನೆಟ್ ತುಂಬಿಕೊಂಡು ಲಾರಿ ಹೆರ್ಗಾದ ಕಡೆಗೆ ಸಾಗುತ್ತಿತ್ತು. ಈ ವೇಳೆ ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿದ್ದ ರಸ್ತೆಯ ದಿಣ್ಣೆಯನ್ನು ಏರಲಾಗದೆ ಲಾರಿಯು ಏಕಾಎಕಿ ಹಿಂದಕ್ಕೆ ಲಾರಿ ಚಲಿಸಿ, ಗ್ಯಾರೇಜಿಗೆ ನುಗ್ಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸರ್ವೋತ್ತಮ ಅಮೀನ್ ಹಾಗೂ ಗಣಪತಿ ನಾಯಕ್ ಅವರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ವಾಹನ ಸೇರಿದಂತೆ ಗ್ಯಾರೇಜಿಗೆ ಹಾನಿಯುಂಟಾಗಿದೆ. ಅಲ್ಲದೇ, ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಾನೈಟ್ ಕೂಡ ಹಾನಿಗೊಳಗಾಗಿದೆ.
ಅವೈಜ್ಞಾನಿಕ ಏರುದಿಣ್ಣೆ ರಾಷ್ಟ್ರೀಯ ಹೆದ್ದಾರಿ 169Aನಲ್ಲಿದ್ದು, ಹೆಚ್ಚಿನ ಘನವಾಹನಗಳು ಹಿಂದಕ್ಕೆ ಚಲಿಸಿದ ಉದಾಹರಣೆಗಳಿವೆ. ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ನಾಲ್ಕೈದು ತಿಂಗಳ ಹಿಂದೆ ಉಡುಪಿಯ ಸಿಟಿ ಬಸ್ ಒಂದು ಕೂಡ ಹಿಂದಕ್ಕೆ ಚಲಿಸಿ ಅಪಾಯ ತಪ್ಪಿತ್ತು. ಇಲ್ಲಿ ವಾಹನ ಏರಲಾಗದೆ ಕ್ರೇನ್ ಮೂಲಕ ಅರ್ಧದಲ್ಲಿ ನಿಂತ ಲಾರಿಯನ್ನು ಮೇಲಕ್ಕೆ ಎತ್ತುವ ಪ್ರಕ್ರಿಯೆ ದಿನನಿತ್ಯ ನಡೆಯುತ್ತದೆ. ಈ ರಸ್ತೆಯಲ್ಲಿ ರೆಡಿ ಮಿಕ್ಸ್ ವಾಹನದಿಂದ ಹೊರಚಿಮ್ಮಿದ ಸಿಮೆಂಟ್ ಮಿಶ್ರಣ ಇಲ್ಲಿ ರಸ್ತೆ ಉದ್ದಕ್ಕೂ ಬಿದ್ದಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಉಡುಪಿ ನಗರಸಭೆಯ ನಿವೃತ್ತ ಪೌರಾಯುಕ್ತರು ಈ ರಸ್ತೆಯನ್ನ ಸ್ವಲ್ಪಮಟ್ಟಿಗೆ ಅವರೇ ಅಲ್ಲಿ ನಿಂತು ಸ್ವಚ್ಛಗೊಳಿಸುವಲ್ಲಿ ಸಹಕರಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾತ್ರ ತಮಗೆ ಸಂಬಂಧ ಇಲ್ಲವೇ ಎಂಬಂತೆ ವರ್ತಿಸುತ್ತಿದ್ದಾರೆ. ಒಂದು ನಗರಸಭೆಯ ಪಂಪ್‌ಹೌಸಿನ ಬಳಿ ಪ್ರತಿನಿತ್ಯ ವಾಹನ ಅಪಘಾತವಾಗುತ್ತದೆ. ಅದೇ ರೀತಿ ಇನ್ನೊಂದು ಮಗ್ಗಿಲಿನಲ್ಲಿ ಇದೇ ರೀತಿ ವಾಹನ ಏರಲಿ ವಾಪಸ್ ಬರುವ ಪ್ರಕ್ರಿಯೆ ಹೆಚ್ಚಾಗಿದೆ. ಇದಕ್ಕೊಂದು ಪೂರ್ಣ ಪ್ರಮಾಣದ ಕಾಮಗಾರಿ ನಡೆಯಬೇಕಾಗಿದೆ ಎಂದು ಕೆಳಪರ್ಕಲದ ನಿವಾಸಿಗಳು ಒತ್ತಾಯಿಸಿದ್ದಾರೆ.


