ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ
ನಿಜವನರಿದ ನಿಶ್ಚಿಂತನೆ
ಮರಣವ ಗೆಲಿದ ಮಹಂತನೆ
ಘನವ ಕಂಡ ಮಹಿಮನೆ
ಪರವನೊಳಕೊಂಡ ಪರಿಣಾಮಿಯೆ
ಬಯಲಲೊದಗಿದ ಭರಿತನೆ
ಗುಹೇಶ್ವರಲಿಂಗ
ನಿರಾಳವನೊಳಕೊಂಡ ಸಹಜನೆ
ಪದಾರ್ಥ:
ನಿಜ = ಸತ್ಯ
ಅರಿದ = ತಿಳಿದ
ನಿಶ್ಚಿಂತ = ಶಾಂತ, ಪ್ರಶಾಂತ
ಘನ = ಪರಿಪೂರ್ಣತೆ
ಪರಿಣಾಮಿ = ಪರಮತೃಪ್ತ
ವಚನಾರ್ಥ:
ಶರಣ ವ್ಯಕ್ತಿತ್ವಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಉದ್ದೇಶದಲ್ಲಿ ಈ ವಚನ ರಚನೆಯಾದಂತೆ ಕಂಡುಬರುತ್ತದೆ. ಶರಣ ವ್ಯಕ್ತಿತ್ವ ಹೇಗಿರುತ್ತದೆ ಎಂಬ ವಿವರಣೆಯನ್ನು ಆರು ತೆರನಾಗಿ ಅಲ್ಲಮ ವಿವರಿಸುತ್ತಾರೆ. ಶರಣನು ಅಂತಿಮ ಸತ್ಯವನ್ನು ಅರಿತವನಾಗಿದ್ದರಿಂದ ಜೀವನ್ಮಾರ್ಗ ಮಧ್ಯದಲ್ಲಿ ಬರುವ ಯಾವ ಸುಖ ದುಃಖಗಳ ಗೋಜಿಗೂ ಲೆಕ್ಕಿಸದೆ ನಿಶ್ಚಿಂತನಾಗಿರುತ್ತಾನೆ. ಆತ ಜನನ ಮರಣಗಳ ಚಕ್ರಕ್ಕೆ ಸಿಲುಕದ ಮರಣ ಭಯವನ್ನು ಮೀರಿ ನಿಂತ ಮಹಾ ಮನುಷ್ಯ. ಹಾಗಾಗಿ ಅವನು ಮಹಾಂತ. ಮೃತ್ಯುಂಜಯ. ಮರಣವನ್ನು ಗೆದ್ದು ನಿಂತ ಮನಸ್ಥಿತಿಯುಳ್ಳವ. ಜೀವನದ ಪ್ರತಿ ಘಟ್ಟದಲ್ಲೂ ಪರಿಪೂರ್ಣತೆಯನ್ನು ಕಂಡ ಅಥವಾ ಕಾಣಲೆತ್ನಿಸುವ ನಿರಂತರ ಸಾಧಕ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಘನ ಮಹಿಮ. ಪರ ಅಂದರೆ ಪರವಸ್ತುವನ್ನೇ ತನ್ನ ಅಂತರಂಗದೊಳಗೆ ಅಳವಡಿಸಿಕೊಂಡಿರುವ ಅದ್ವೈತಿ ಮತ್ತು ಅದರ ಅಪೂರ್ವ ಪರಿಣಾಮವನ್ನು ತನ್ನಲ್ಲಿಯೇ ತಾನು ಆನಂದಿಸುವ ಪರಿಣಾಮಿ ಅಂದರೆ ಆತ್ಮತೃಪ್ತ. ಕಡೆಗೊಂದು ದಿನ ವಿಶ್ವದ ಅನಂತ ವಿಸ್ತಾರದ ಬಯಲಿನಲ್ಲಿ ಒಂದಾಗಿ ಬಯಲಾಗುವ ಸಂಪದ್ಭರಿತ ಬಯಕೆಯುಳ್ಳ ಸಜ್ಜನ. ಆತನದು ನಿರಾಳತೆಯೇ ಸಾಕಾರಗೊಂಡ ಸರಳ ಸಹಜ ಸುಂದರ ಮನಸ್ಸು.
ಪದಪ್ರಯೋಗಾರ್ಥ:
ನಿಜವನರಿದ ನಿಶ್ಚಿಂತ ಎಂಬ ಪದ ಪ್ರಯೋಗವೇ ಇಡೀ ವಚನಕ್ಕೆ ಕಳಸಪ್ರಾಯವಾಗಿದೆ. ಜೀವನದಲ್ಲಿ ನಿಶ್ಚಿಂತತೆ ಪ್ರಾಪ್ತವಾಗುವುದು ನಿಜವನ್ನು ಅರಿತರೆ ಮಾತ್ರ. ಇಲ್ಲದಿದ್ದಲ್ಲಿ ಸತ್ಯ ಅಸತ್ಯಗಳ ತಾಕಲಾಟದಲ್ಲಿ ಚಿಂತೆ ಆವರಿಸುತ್ತದೆ. ಜೀವನದಲ್ಲಿ ಚಿಂತೆ ಚಿತೆಯಾಗಿ ಕಾಡುವ ಬಗೆಯಿದು. “ನಿರ್ಣಯವನರಿಯದ ಮನವೇ ದುಗುಡವನೆ ಆಹಾರಗೊಂಡೆಯಲ್ಲ” ಎಂದು ಅಲ್ಲಮ ಇನ್ನೊಂದು ವಚನದಲ್ಲಿ ಪ್ರಶ್ನಿಸುವ ಪ್ರಸಂಗ ಬರುತ್ತದೆ. ಈ ವಚನದಲ್ಲಿ ಬರುವ ಆರೂ ಸಾಲುಗಳಲ್ಲಿ ಅಲ್ಲಮ ಮಾಡಿರುವ ಪದಪ್ರಯೋಗಗಳಿಗೆ ಅಪೂರ್ವವಾದ ಕಾವ್ಯಗುಣವಿದೆ. ಪ್ರಾಸಬದ್ಧತೆಯಿದೆ. ಶರಣರ ಕ್ಲಿಷ್ಟಕರ ವ್ಯಕ್ತಿತ್ವವನ್ನು ಸರಳವಾಗಿ ಪ್ರತಿಪಾದಿಸುವ ಅಲ್ಲಮನ ಪದತಂತ್ರಗಾರಿಕೆ ಅತ್ಯಂತ ನಿಖರವಾಗಿ ನಿರೂಪಣೆಯಾಗಿದೆ.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಸರ್,ಅಲ್ಲಮಪ್ರಭುಗಳ ವ್ಯಕ್ತಿತ್ವ ಎಷ್ಟು ಆಳವೋ,ಅವರ ವಚನಗಳೂ ಅಷ್ಟೇ, ಅರ್ಥಗರ್ಭಿತ ಮತ್ತು ಕ್ಲಿಷ್ಟಕರ. ನೀವು ಸರಳ ಭಾಷೆಯಲ್ಲಿ ತಿಳಿಸಿದ್ದೀರಿ. ಧನ್ಯವಾದಗಳು,ನಿಮ್ಮ ಬಹುಮುಖ ಪ್ರತಿಭೆಗೆ. ನಾನು ತಿಳಿದುಕೊಂಡ ಹೊಸ ಶಬ್ದ, ಘನ=ಪರಿಪೂರ್ಣ.
ಸರಳ ಸುಂದರ ನಿರೂಪಣೆ. ಅಭಿನಂದನೆ…ವಂದನೆಗಳು.