ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಜಾತಿವಾರು ಜನಗಣತಿ ಜಾರಿಗಾಗಿ ಒತ್ತಾಯಿಸಲು ಮಾಜಿ ಶಾಸಕರಾದ ರಾಜು ಆಲಗೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಅಹಿಂದ ಮುಖಂಡರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ರಾಜ್ಯದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ಈ ಜಾತಿವಾರು ಗಣತಿ ಯಥಾವಾತ್ತಾಗಿ ಜಾರಿಯಾದಾಗ ಮಾತ್ರ ತಳ ಸಮುದಾಯಗಳಿಗೆ ಬಹಳ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.
ಇನ್ನೋರ್ವ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ ಮಾತನಾಡಿ, ಈ ಅಹಿಂದ ಒಕ್ಕೂಟವು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಪ್ರತಿ ತಾಲೂಕಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ಈ ಜಾತಿವಾರು ಜನಗಣತಿಯ ಮಹತ್ವವನ್ನು ತಿಳಿಸಲು ಒಂದು ತಂಡವನ್ನು ರಚಿಸಲಾಗುವದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜು ಆಲಗೂರ ಮಾತನಾಡಿ, ಈ ಅಹಿಂದ ಹೋರಾಟ ಪಕ್ಷಾತೀತವಾಗಿ ನಡೆಯಲಿದೆ ಮತ್ತು ಈ ಅಹಿಂದ ಚಳುವಳಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಅಹಿಂದ ಮುಖಂಡರು ತಮ್ಮ ಎಲ್ಲ ಭಿನ್ನಾಭಿಪ್ರಾಯ ಮರೆತು ಕಾಂತರಾಜು ವರದಿಯನ್ನು ಜಾರಿಗೊಳಿಸಲು ಭಾಗವಹಿಸಬೇಕು. ಜಿಲ್ಲೆಯ ಎಲ್ಲರೂ ತಮ್ಮ ಗ್ರಾಮಗಳಲ್ಲಿ ಜನತೆಗೆ ಕಾಂತರಾಜು ವರದಿಯು ಜಾರಿಗೆ ಬಂದರೆ ಏನೆಲ್ಲ ಅನುಕೂಲಗಳಾಗಲಿವೆ ಎಂದು ತಿಳಿಸಲು ಕೋರಿಕೊಂಡರು.
ಇದನ್ನು ಓದಿದ್ದಿರಾ? ಮಂಗಳೂರು | ಅಸಮರ್ಪಕ ರಸ್ತೆಯಿಂದಾಗಿ ಸ್ಕಿಡ್ ಆಗಿ ಬಿದ್ದ ಬೈಕ್: ಟ್ಯಾಂಕರ್ ಹರಿದು ಮಹಿಳೆ ಮೃತ್ಯು
ಸಭೆಯಲ್ಲಿ ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್, ದಸಸಂ ಜಿಲ್ಲಾ ಸಂಚಾಲಕರಾದ ಸಂಜು ಕಂಬಾಗಿ, ದಸಸಂ ಜಿಲ್ಲಾ ಸಂಘಟನಾ ಸಂಚಾಲಕರಾದ ಚನ್ನು ಕಟ್ಟಿಮನಿ, ಅನಿಲ ಹೊಸಮನಿ, ಹಿಂದುಳಿದ ವರ್ಗಗಳ ಮುಖಂಡರಾದ ಜಕ್ಕಪ್ಪ ಎಡವೆ, ಎಂ.ಸಿ. ಮುಲ್ಲಾ, ಹಮೀದ್ ಮುಷರಿಫ್, ಫಯಾಜ ಕಲಾದಗಿ, ಬಿ.ಎಸ್. ಗಸ್ತಿ, ದೇವಾನಂದ ಲಚ್ಯಾಣ, ಪ್ರಭುಗೌಡ ಪಾಟೀಲ, ಎಂ.ಬಿ. ಯಂಕಂಚಿ, ಮಲ್ಲು ಬಿದರಿ ಮತ್ತಿತರರು ಉಪಸ್ಥಿತರಿದ್ದರು.
