ಈ ಸಿನಿಮಾ | ʼಪೂಚಂತೇʼಯ ಪ್ರಸ್ತುತತೆ ಸಾರುವ ʼಡೇರ್‌‌ಡೆವಿಲ್ ಮುಸ್ತಾಫಾʼ

Date:

Advertisements

ಚಿತ್ರ: ಡೇರ್‌ಡೆವಿಲ್‌ ಮುಸ್ತಾಫಾ | ನಿರ್ದೇಶನ: ಶಶಾಂಕ್‌ ಸೋಗಾಲ್‌ | ತಾರಾಗಣ: ಶಿಶಿರಾ ಬೈಕಾಡಿ, ಆದಿತ್ಯ ಆಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ ಗೌಡ, ಎಂ.ಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್ | ಭಾಷೆ: ಕನ್ನಡ | ಸಂಗೀತ ನಿರ್ದೇಶನ: ನವನೀತ್‌ ಶ್ಯಾಮ್‌ | ನಿರ್ಮಾಪಕರು: ಲೇಖಕ ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು |

ಸರ್ವ ಜನಾಂಗದ ‌ತೋಟದಲ್ಲಿ‌ ಸದಾ ಕಾಲ ಶಾಂತಿ‌, ಸಹಬಾಳ್ವೆಯ ತಂಗಾಳಿ ಬೀಸಬೇಕೆಂದರೆ ಗುಜರಿ ಮುಸ್ತಾಫಾನೂ ಇರಬೇಕು. ಜನಿವಾರಧಾರಿ ರಾಮಾನುಜ ಅಯ್ಯಂಗಾರಿಯೂ ಬೇಕು. ಈ ಕಾಲಘಟ್ಟಕ್ಕೂ ಪೂಚಂತೇಯ ಪ್ರಸ್ತುತತೆಯನ್ನು ಸಾರಿ ಹೇಳುವ ಚಿತ್ರವಿದು.

ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಥೆ ‘ಡೇರ್‌‌ಡೆವಿಲ್ ಮುಸ್ತಫಾ’ ಸಿನಿಮಾ ರೂಪ ತಾಳಿದೆ. ಪೂಚಂತೇ ಅವರ ಅಭಿಮಾನಿ, ಯುವ ನಿರ್ದೇಶಕ ಶಶಾಂಕ್ ಈ ಕಿರುಕಥೆಯ ಮೂಲ ಆಶಯಕ್ಕೆ ಎಲ್ಲೂ ಧಕ್ಕೆಯಾಗದಂತೆ ಇಡೀ ಕಥೆಯನ್ನು ದೊಡ್ಡ ಪರದೆಗೆ ದಾಟಿಸಿರುವ ಪರಿ ನಿಜಕ್ಕೂ ಅಭಿನಂದನಾರ್ಹ. ಈಗಾಗಲೇ ‘ಡೇರ್ ಡೆವಿಲ್ ಮುಸ್ತಾಫಾ’ ಕಥೆ ಓದಿದವರಿಗೆ ಮತ್ತು ಸಾಮಾನ್ಯ ಸಿನಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಚಿತ್ರವಿದು. ಅರೆಕ್ಷಣಕ್ಕೂ ಇದು ಯುವ ನಿರ್ದೇಶಕರೊಬ್ಬರ ಚೊಚ್ಚಲ ಚಿತ್ರ ಎಂಬ ಭಾವ‌ ಎಲ್ಲೂ ಮೂಡುವುದಿಲ್ಲ.

Advertisements

ಸರಳವಾಗಿ‌ ಕಥೆಯ ಬಗ್ಗೆ ಸುಳಿವು ನೀಡಬೇಕೆಂದರೆ, ಯುವ ಜೋಡಿಗಳಿಬ್ಬರ ಅಂತರ್ಜಾತಿ ವಿವಾಹದ ಕಾರಣಕ್ಕೆ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಸಾಕ್ಷಿಯಾದ, ಬೂದಿ ಮುಚ್ಚಿದ ಕೆಂಡದಂತಿರುವ ಅಬಚೂರು, ಅಂತಹ ಊರಿಗೆ ಕಾಲೇಜು ಕಲಿಯಲು ಬರುವ ಮುಸ್ತಾಫಾ, ವಿನಾಕಾರಣ ಆತನನ್ನು ವೈರಿಯೆಂದು ಸ್ವಯಂ ಘೋಷಣೆ ಮಾಡಿಕೊಂಡು ಹಲ್ಲು ಕಡಿಯುವ ರಾಮಾನುಜ ಅಯ್ಯಂಗಾರಿ ಮತ್ತು ಆತನ ಪಟಾಲಂ. ಆಕಸ್ಮಿಕವಾಗಿ ಏರ್ಪಡುವ ಕ್ರಿಕೆಟ್ ಪಂದ್ಯಾವಳಿ ಇಡೀ ಚಿತ್ರಕತೆಗೆ ತಿರುವು ನೀಡುತ್ತದೆ.

ಶುರುವಿನಲ್ಲಿ ರಾಮಾನುಜ ಅಯ್ಯಂಗಾರಿಯ ಮನೆಯ ಪಡಸಾಲೆಯ ಗೋಡೆಯ ಮೇಲಿದ್ದ ಫ್ಯಾಮಿಲಿ ಫೋಟೋದಲ್ಲಿ ಮರೆಯಾಗಿದ್ದ ಅಕ್ಕನ ಭಾವಚಿತ್ರ ಕೊನೆಗೆ ಪ್ರತ್ಯಕ್ಷವಾಗುತ್ತದೆ. ಆರಂಭ ಮತ್ತು ಅಂತ್ಯದಲ್ಲಿ ಬರುವ ಈ ಎರಡು ಸೂಕ್ಷ್ಮ ಸನ್ನಿವೇಶಗಳು ಇಡೀ ಚಿತ್ರದ ಜೀವಾಳ. ಏನೂ ಹೇಳದೆ, ಎಲ್ಲವನ್ನೂ ದಾಟಿಸುವ ನಿರ್ದೇಶಕರ ಪ್ರಬುದ್ಧತೆಯನ್ನು ಮೆಚ್ಚಲೇಬೇಕು. ರಾಮಾನುಜನ ತಾಯಿ ಮುಸ್ತಫಾನ ಬಳಿ ರಫೀಕ್ ಬಗ್ಗೆ ವಿಚಾರಿಸುವ ಒಂದು ಸಾಲಿನ ಸಂಭಾಷಣೆ ಹಲವು ವಿಚಾರಗಳನ್ನು ಧ್ವನಿಸುತ್ತದೆ. ಅಂದಹಾಗೆ ತೇಜಸ್ವಿ ಅವರು ಅರ್ಧಕ್ಕೆ ನಿಲ್ಲಿಸಿದ್ದ ಮುಸ್ತಾಫಾನ ಕತೆಗೆ ಶಶಾಂಕ್ ಅತ್ಯುತ್ತಮ ಅಂತ್ಯ ನೀಡಿದ್ದಾರೆ. ಕಿರುಕತೆಯನ್ನು ಆಧರಿಸಿ ಕಮರ್ಷಿಯಲ್ ಸಿನಿಮಾ ಮಾಡಿದ ಈ ಸಾಹಸಿಗೆ ಶಹಬ್ಬಾಶ್ ಎನ್ನಲೇಬೇಕು.

‘ಡೇರ್‌‌ಡೆವಿಲ್ ಮುಸ್ತಾಫಾ’ ಸಿನಿಮಾ ನೋಡಿದ ಕೂಡಲೇ ನೆನಪಾಗುವುದು ಇತ್ತೀಚಿನ ‘ಹಿಜಾಬ್ ವಿವಾದ’. ಮುಸ್ಲಿಂ ವಿದ್ಯಾರ್ಥಿನಿಯರು ಅವರ ಆಯ್ಕೆಯ ಹಿಜಾಬ್ ಧರಿಸಿ ಶಾಲಾ, ಕಾಲೇಜುಗಳ ಮೆಟ್ಟಿಲೇರಬಾರದು ಎಂದು ಕಟ್ಟಪ್ಪಣೆ ಹೊರಡಿಸುವ, ಮಹಿಳೆಯರ ಆಯ್ಕೆ ಮತ್ತು ಅಭಿವ್ಯಕ್ತಿಯ ಹಕ್ಕುಗಳ ದಮನವಾಗುತ್ತಿರುವ ಈ ಹೊತ್ತಿನಲ್ಲಿ ತೆರೆಕಂಡಿರುವ ಈ ಚಿತ್ರ ಚಿಕಿತ್ಸಕ ಗುಣವುಳ್ಳದ್ದು. ಶಾಂತಿಯ ತೋಟಗಳಂತಿರುವ ನಮ್ಮ ಶಾಲೆ, ಕಾಲೇಜುಗಳಿಗೆ ಜಾತಿ, ಧರ್ಮಗಳ ಮೂಲಭೂತವಾದದ ಸೋಂಕು ಹರಡದಂತೆ ತಡೆಯುವ ಅಗತ್ಯವಿದೆ ಎಂಬುದನ್ನು ಸಾರಿ ಹೇಳುವ ಚಿತ್ರವಿದು.

ಮುಸ್ತಾಫಾನ ಪಾತ್ರಧಾರಿ ಶಿಶಿರಾ ಬೈಕಾಡಿ ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ಜೊತೆ ಸಾಗುತ್ತಾರೆ. ರಾಮಾನುಜ ಅಯ್ಯಂಗಾರಿಯ ಪಾತ್ರವನ್ನು ಆದಿತ್ಯ ಆಶ್ರೀ ಅದ್ಭುತವಾಗಿ ‌ನಿಭಾಯಿಸಿದ್ದಾರೆ. ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ ಎಲ್ಲರ ಪಾತ್ರಗಳು ಹಿಡಿಸುತ್ತವೆ. ಹಿರಿಯ ನಟ ಎಂ.ಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್ ಎಲ್ಲರೂ ಗಮನ ಸೆಳೆಯುತ್ತಾರೆ.

ಈ ಸುದ್ದಿ ಓದಿದ್ದೀರಾ? ʼದಹಾಡ್‌ʼ ವೆಬ್‌ ಸರಣಿಗೆ ಹಂತಕ ಸೈನೇಡ್ ಮೋಹನ್‌ ಕಥೆ ಸ್ಫೂರ್ತಿಯೇ?

ನವನೀತ್ ಶ್ಯಾಮ್ ಅವರ ಹಿನ್ನೆಲೆ ಸಂಗೀತ ಮತ್ತು ರಾಹುಲ್ ರಾಯ್ ಜಾನ್ ಅವರ ಛಾಯಾಗ್ರಹಣ ಚೆಂದದ ಕಥೆಯ ಅಂದವನ್ನು ಹೆಚ್ಚಿಸಿದೆ ಎನ್ನಬಹುದು. 90ರ ದಶಕದ ಕಥೆಯನ್ನು ಅದೇ ಕಾಲಘಟ್ಟಕ್ಕೆ ಹೋಲುವಂತೆ ಸೆರೆ ಹಿಡಿದಿರುವ ರಾಹುಲ್‌‌ ಮೆಚ್ಚುಗೆಗೆ‌ ಅರ್ಹರು.

ಕಲೆಯ ಹೆಸರಲ್ಲಿ ಕಾಶ್ಮೀರ್ ಫೈಲ್ಸ್‌‌, ಕೇರಳ ಸ್ಟೋರಿಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ದಶಕಗಳ ಹಿಂದೆಯೇ ತೇಜಸ್ವಿ ಅವರು ಬರೆದಿಟ್ಟ ಈ ‘ಕರ್ನಾಟಕ ಸ್ಟೋರಿ’ ಹೆಚ್ಚು ಪ್ರಸ್ತುತ ಎನ್ನಿಸುತ್ತೆ.

ವಿಶೇಷ ಏನು ಗೊತ್ತಾ? 100 ಮಂದಿ ತೇಜಸ್ವಿ‌ ಅವರ ಅಭಿಮಾನಿಗಳೇ ಸೇರಿ‌ ಹಣ ಹೂಡಿ ನಿರ್ಮಿಸಿರುವ ಚಿತ್ರವಿದು. ಸಾಹಿತ್ಯಾಸಕ್ತರು, ಸಿನಿಮಾ ಪ್ರೇಮಿಗಳು, ಸಹಬಾಳ್ವೆಯಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರೂ ಶಾಲಾ, ಕಾಲೇಜು ಹಂತದಲ್ಲಿರುವ ತಮ್ಮ ಮಕ್ಕಳೊಂದಿಗೆ ಚಿತ್ರಮಂದಿರಗಳಿಗೆ ತೆರಳಿ ನೋಡಬೇಕಾದ ಚಿತ್ರ ‘ಡೇರ್‌‌ಡೆವಿಲ್ ಮುಸ್ತಾಫಾ’

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X