ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಬಿಸಿ ಗಾಳಿ ಬೀಸಲಾರಂಭಿಸಿದೆ. ಎಲ್-ನೀನೊ ಮತ್ತೆ-ಮತ್ತೆ ಎದುರಾಗುತ್ತಿದೆ. ತೀವ್ರವಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಇದು ಅತಿಯಾದ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು, ಒಣ ಹವೆಗಳಿಗೆ ಕಾರಣವಾಗುತ್ತಿದೆ. ಜಗತ್ತನ್ನು ಕೆಟ್ಟ ಸ್ಥಿತಿಗೆ ದೂಡುತ್ತಿದೆ. ಹವಾಮಾನ ಬದಲಾವಣೆಯಲ್ಲಿ ಮಾನವ ಪ್ರಾಣಿಯ ಕೊಡುಗೆ ಅಪಾರ. ಇದರ ಪರಿಣಾಮವನ್ನು ಇಡೀ ಜೀವ ಸಂಕುಲವೇ ಎದುರಿಸುತ್ತಿದೆ. ಆದರೆ, ತನ್ನಿಂದಲೇ ಪ್ರಾಕೃತಿಕ ವಿಪತ್ತುಗಳನ್ನು ನಿರ್ವಹಿಸಲು, ಎದುರಿಸಲು ಮಾನವ ಜಗತ್ತಿಗೆ ಸಾಧ್ಯವಾಗುತ್ತಿಲ್ಲ.
ಈ ವರ್ಷದ ಅಕ್ಟೋಬರ್ 24ರಂದು ಬಿಡುಗಡೆಯಾದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಭಾಗವಾದ ‘ಹೊರಸೂಸುವಿಕೆ ಅಂತರ’ದ ವರದಿಯು, 2015ರ ಪ್ಯಾರಿಸ್ ಒಪ್ಪಂದದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸಲು ಮತ್ತು ಆ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಸಂಸ್ಥೆಯ ರಾಷ್ಟ್ರಗಳು ಗುರಿಯನ್ನು ಹಾಕಿಕೊಂಡಿದ್ದವು. ಆದರೆ, ಈ ಒಪ್ಪಂದದ ಬಳಿಕವೂ ಗುರಿಯನ್ನು ಸಾಧಿಸಲಾಗಿಲ್ಲ. ತಾಪಮಾನ ಏರಿಕೆಯ ಪ್ರಮಾಣವನ್ನು 1.5° ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಕೆಲಸವಾಗಿಲ್ಲ ಎಂಬುದನ್ನು ತೋರಿಸಿದೆ.
ವಾಸ್ತವವಾಗಿ, ಈ ಶತಮಾನ ಆರಂಭದ ದಶಕಗಳಲ್ಲಿಯೇ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣವು 2.6°ಯಿಂದ 2.8° ಸೆಲ್ಸಿಯಸ್‌ಗೆ ಜಿಗಿದಿದೆ. ಈ ತಾಪಮಾನದಲ್ಲಿ ಇಡೀ ಪರಿಸರ ವ್ಯವಸ್ಥೆ ಕುಸಿಯುತ್ತದೆ. ಪ್ರಪಂಚದ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ. ಮೀನುಗಳ ಉಳಿವಿಗೆ ನಿರ್ಣಾಯಕವಾಗಿರುವ ಸಮುದ್ರದಲ್ಲಿನ ಹವಳದ ಬಂಡೆಗಳು ನಶಿಸುತ್ತಿವೆ. ಅವು ನಾಶವಾದಂತೆ ಮೀನಿನ ಸಂಕುಲವೂ ಕಾಣೆಯಾಗುವ ಆತಂಕವಿದೆ.
UNEP ವರದಿಯ ಪ್ರಕಾರ, ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯು 2023ರಲ್ಲಿ 57.1 ಗಿಗಾಟನ್ ವರ್ತ್ ಕಾರ್ಬನ್ ಡೈಆಕ್ಸೈಡ್ ಇಕ್ವಿವ್ಯಾಲೆಟ್‌ನಷ್ಟಿತ್ತು (GtCO2e). ಇದು 2022ಕ್ಕಿಂತ 1.3% ಹೆಚ್ಚಳವಾಗಿದೆ. ಜಾಗತಿಕ ಹೊರಸೂಸುವಿಕೆಯಲ್ಲಿ ವಿದ್ಯುತ್ ವಲಯದ್ದೇ ಪಾತ್ರ ಹೆಚ್ಚಿದೆ. ವಿದ್ಯುತ್ ವಲಯದಿಂದ 15.1 GtCO2e ಹೊರಸೂಸುವಿಕೆ ಇದೆ. ನಂತರದ ಸ್ಥಾನದಲ್ಲಿ ಸಾರಿಗೆ (8.4 GtCO2e), ಕೃಷಿ (6.5 GtCO2e) ಹಾಗೂ ಉದ್ಯಮಗಳಿವೆ (6.5 GtCO2e).
ವಿಶ್ವಸಂಸ್ಥೆಯ 29ನೇ ಕಾನ್ಫರೆನ್ಸ್ ಆಫ್ ಪಾರ್ಟಿಟೀಸ್ (COP) ಸಭೆಯು ಇಂದು (ನ.11) ಅಜೆರ್ಬೈಜಾನ್‌ನ ಬಾಕುದಲ್ಲಿ ಆರಂಭವಾಗಿದೆ. ಚರ್ಚೆಯು ‘ನೋ ಮೋರ್ ಹಾಟ್ ಏರ್.. ಪ್ಲೀಸ್’ ಎಂಬ ವಿಚಾರದಡಿ ನಡೆಯುತ್ತಿದೆ. ಎಲ್ಲ ರಾಷ್ಟ್ರಗಳು ತಾಪಮಾನ, ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಮಾರ್ಗಗಳ ಕುರಿತು ಚರ್ಚಿಸುತ್ತಿವೆ.
ಪ್ಯಾರಿಸ್ ಒಪ್ಪಂದದ ಮುಂದುವರಿದ ಭಾಗವಾಗಿ ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವು 2° ಸೆಲ್ಸಿಯಸ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗದಂತೆ ತಡೆಯಲು ಏನೆಲ್ಲ ಮಾಡಬೇಕೆಂಬ ಹುಡುಕಾಟದಲ್ಲಿವೆ. ಆದರೆ, ಈಗಾಗಲೇ ತಾಪಮಾನವು 2° ಸೆಲ್ಸಿಯಸ್‌ಗಿಂತ ಹೆಚ್ಚಾಗಿಯೇ ಏರಿಕೆಯಾಗಿದೆ. 20ರ ದಶಕದಲ್ಲಿ ತಾಪಮಾನವು 2.6° ಸೆಲ್ಸಿಯಸ್ ಏರಿಕೆಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಅಂದರೆ, ಎಲ್ಲ ರಾಷ್ಟ್ರಗಳಿಗೂ ತಾಪಮಾನವನ್ನು ನಿಭಾಯಿಸುವುದು ಮಾತ್ರವಲ್ಲ, ಕಡಿಮೆ ಮಾಡುವುದೂ ಅತ್ಯಗತ್ಯವಾಗಿದೆ. ಆದರೆ, ಇದು ಸಾಧ್ಯವೇ? ಜಗತ್ತು ಓಡುತ್ತಿರುವ ವೇಗವನ್ನು ಗಮನಿಸಿದರೆ, ಕೆಲವೇ ವರ್ಷಗಳಲ್ಲಿ ತಾಪಮಾನವು 3.1° ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.
2019ರ ತಾಪಮಾನವನ್ನು ಅಳತೆಗೋಲಾಗಿ ಇಟ್ಟುಕೊಂಡು, ತಾಪಮಾನ ಏರಿಕೆಯನ್ನು 2° ಸೆಲ್ಸಿಯಸ್‌ಗಿಂತ ಕಡಿಮೆಗೆ ಮಿತಿಗೊಳಿಸಬೇಕೆಂದರೆ, ಜಾಗತಿಕ ಹೊರಸೂಸುವಿಕೆಯು 2030ರ ವೇಳೆಗೆ 28% ಮತ್ತು 2035ರ ವೇಳೆಗೆ 37% ರಷ್ಟು ಕಡಿಮೆಯಾಗಬೇಕು. ಇದು ಅಷ್ಟು ಸುಲಭದ ಮಾತಲ್ಲ.
ಹೆಚ್ಚುತ್ತಿರುವ ಹೊರಸೂಸುವಿಕೆ ಮತ್ತು ತೀವ್ರವಾದ ಹವಾಮಾನ ವಿಪತ್ತುಗಳ ನಡುವೆ ನೇರ ಸಂಪರ್ಕವಿದೆ. ತಾಪಮಾನ ಏರಿಕೆ ಮತ್ತು ವಿಪತ್ತಿಗೆ ಪ್ರಪಂಚದಾದ್ಯಂತ ಜನರು ಭಯಾನಕ ಬೆಲೆ ತೆರುತ್ತಿದ್ದಾರೆ. ಶಾಖವು ಸಮುದ್ರದಿಂದ ದೈತ್ಯಾಕಾರದ ಚಂಡಮಾರುತಗಳನ್ನು ಎಬ್ಬಿಸುತ್ತದೆ, ಕಾಡುಗಳನ್ನು ಉರಿವ ಒಲೆಗಳಾಗಿ ಪರಿವರ್ತಿಸುತ್ತದೆ, ಮಳೆಯಿಂದ ಪ್ರವಾಹವನ್ನು ಸೃಷ್ಟಿಸುತ್ತವೆ, ನಗರಗಳನ್ನು ಧ್ವಂಸಗೊಳಿಸುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?
”ನಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆ; ಆದರೆ, ಹೆಚ್ಚು ಆಟವಾಡಲು ಸಾಧ್ಯವಿಲ್ಲ. ನಮಗೆ ಸಮಯ ಮೀರಿದೆ. ಹೊರಸೂಸುವಿಕೆಯ ಅಂತರವನ್ನು ನಿಯಂತ್ರಿಸುವುದು ಅತೀ ತುರ್ತಿನ ಸಂದರ್ಭವಾಗಿದೆ. ಅದಕ್ಕಾಗಿ, COP29 ಮುಂದಡಿ ಇಡಬೇಕಿದೆ” ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರೆಸ್ ಹೇಳಿದ್ದಾರೆ.
ಗಂಭೀರ ವಿಚಾರವೆಂದರೆ, ಜಿ20 ದೇಶಗಳಿಂದಲೇ ಹಸಿರುಮನೆ ಅನಿಲದ ಹೊರಸೂಸುವಿಕೆ ಹೆಚ್ಚಿದೆ. 2023ರಲ್ಲಿ ಕಂಡುಬಂದ ಜಾಗತೀಕ ಹೊರಸೂಸುವಿಕೆಯಲ್ಲಿ 77% ಪಾಲು ಈ ಜಿ20 ರಾಷ್ಟ್ರಗಳದ್ದೇ ಆಗಿದೆ. ಭಾರತ ಕೂಡ ಜಿ20ಯ ಭಾಗವಾಗಿದೆ. ಆದ್ದರಿಂದ, ಹೊರಸೂಸುವಿಕೆ ತಡೆಯುವಲ್ಲಿ ಭಾರತದ ಪಾತ್ರವೂ ನಿರ್ಣಾಯಕವಾಗಿದೆ.
2023ರಲ್ಲಿ, ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ 4,140 MtCO2e ಇದೆ. ಇದು, ವಿಶ್ವದ ಒಟ್ಟು ಹೊರಸೂಸುವಿಕೆಯಲ್ಲಿ 8% ರಷ್ಟಿದೆ. ಮತ್ತೊಂದೆಡೆ, ಚೀನಾದ ಪಾಲು 16,000 MtCO2e ಇದ್ದು, 30% ರಷ್ಟಿದೆ. ಆದಾಗ್ಯೂ, 2022ಕ್ಕೆ ಹೋಲಿಸಿದರೆ, 2023ರಲ್ಲಿ ಚೀನಾಕ್ಕೆ ಹೋಲಿಸಿದರೆ, ಭಾರತದಲ್ಲಿ ಹೊರಸೂಸುವಿಕೆ ಪ್ರಮಾಣ ಹೆಚ್ಚಾಗಿದೆ. ಚೀನಾದಲ್ಲಿ 5.2% ಹೆಚ್ಚಾಗಿದ್ದರೆ, ಭಾರತದಲ್ಲಿ ಬರೋಬ್ಬರಿ 6.1%ರಷ್ಟು ಹೆಚ್ಚಾಗಿದೆ.
ಹೊರಸೂಸುವಿಕೆಯನ್ನು ತಡೆಯಲು, ತಾಪಮಾನವನ್ನು ನಿಯಂತ್ರಿಸಲು ಹಾಗೂ ಹವಾಮಾನ ಬದಲಾವಣೆಯಲ್ಲಿ ಹತೋಟಿಗೆ ತರಲು ಇಡೀ ಜಗತ್ತು ಹೆಚ್ಚು ಸೌರ ದ್ಯುತಿವಿದ್ಯುಜ್ಜನಕ ಮತ್ತು ಪವನ ಶಕ್ತಿಯನ್ನು ಅವಲಂಬಿಸಬೇಕಿದೆ. ಈ ಎರಡು ಆಯ್ಕೆಗಳಿಂದ ಒಟ್ಟು ಹೊರಸೂಸುವಿಕೆಯನ್ನು 2030ರ ವೇಳೆಗೆ 27% ಮತ್ತು 2035ರ ವೇಳೆಗೆ 38%ರಷ್ಟು ಕಡಿಮೆ ಮಾಡಬಹುದು. ಜೊತೆಗೆ, ಅರಣ್ಯನಾಶವನ್ನು ಕಡಿಮೆ ಮಾಡುವುದು, ಮರು ಅರಣ್ಯೀಕರಣವನ್ನು ಹೆಚ್ಚಿಸುವುದು ಹಾಗೂ ಸುಧಾರಿತ ಅರಣ್ಯ ನಿರ್ವಹಣೆಯನ್ನು ಅನುಷ್ಠಾನಗೊಳಿಸುವುದರಿಂದ 2030 ಮತ್ತು 2035ರ ವೇಳೆಗೆ ಕ್ರಮವಾಗಿ 19% ಮತ್ತು 20%ರಷ್ಟು ಹೊರಸೂಸುವಿಕೆಯನ್ನು ಕಡಿತಗೊಳಿಸಬಹುದು ಎಂದು ವರದಿ ಹೇಳುತ್ತದೆ. ಆದರೆ, ಇದೆಲ್ಲವನ್ನೂ ಎಲ್ಲ ರಾಷ್ಟ್ರಗಳು ದಕ್ಷತೆಯಿಂದ ಮಾಡಬೇಕಿದೆ.
ಇದೆಲ್ಲವೂ ಸಾಧ್ಯವಾದರೆ, ಪ್ಯಾರಿಸ್ ಒಪ್ಪಂದದ ಗುರಿಯಂತೆ ತಾಪಮಾನವನ್ನು 1.5° ಸೆಲ್ಸಿಯಸ್‌ಗೆ ಸೀಮಿತಗೊಳಿಸಬಹುದು. ಅದಕ್ಕಾಗಿ, ಪ್ರತಿ ರಾಷ್ಟ್ರವು ‘ಬಿಸಿ ಗಾಳಿ ಬೇಡ, ಪ್ಲೀಸ್’ ಎಂಬ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಅಜೆರ್ಬೈಜಾನ್‌ನಲ್ಲಿ ನಡೆಯುವ COP29 ತಾಪಮಾನದ ಕುರಿತು ಗಂಭೀರವಾಗಿ ಚಿಂತಿಸಬೇಕು. ಚರ್ಚಿಸಬೇಕು. ಕ್ರಮಗಳನ್ನು ನಿರ್ಣಯಿಸಬೇಕು. ಜಾರಿಗೊಳಿಸಬೇಕು. ಮುಖ್ಯವಾಗಿ, ಜಗತ್ತಿನ ಮೇಲೆ ಪ್ರಕೃತಿ ತಿರುಗಿ ಬೀಳುವ ಮುನ್ನ, ಪ್ರಕೃತಿಯ ಮೇಲಿನ ಮಾನವ ದಾಳಿಯನ್ನು ನಿಲ್ಲಿಸಬೇಕು.