ಕಲಬುರಗಿ ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಕಾಯಕ ರತ್ನ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ ಹಾಗೂ ಯುವ ಪತ್ರಕರ್ತ ವಿಜಯಕುಮಾರ ಜಿಡಗಿಯವರು ಭಾಜನರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಬಸವರಾಜ ತೋಟದ್ ಸಂತೋಷ ವ್ಯಕ್ತಪಡಿಸಿದರು.
ಕಲಬುರಗಿ ನಗರದಲ್ಲಿ ಪತ್ರಿಕಾ ಪ್ರಕಟಣೆ ತಿಳಿಸಿರುವ ಅವರು, “ಹೋರಾಟಕ್ಕೆ ಹೆಸರುವಾಸಿಯಾದ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಜನಸಿದ ವಿಜಯಕುಮಾರ ಅವರು ಚಿಕ್ಕವಯಸ್ಸಿನಿಂದಲೂ ಹೋರಾಟದ ಕಿಚ್ಚನ್ನು ಬೆಳೆಸಿಕೊಂಡವರಾಗಿದ್ದಾರೆ. ಬಿಎಸ್‌ಸಿ ಪದವಿ ವಿದ್ಯಾಭ್ಯಾಸದ ದಿನಗಳಲ್ಲೇ ಗ್ರಾಮದ ಯುವಕರನ್ನು ಸಂಘಟಿಸಿ ಉಪನ್ಯಾಸ ಮಾಲಿಕೆ, ವಿಚಾರ ಸಂಕಿರಣಗಳು, ಅಧ್ಯಾನ ಶಿಬಿರಗಳನ್ನು ಮಾಡಿ ಜಿಲ್ಲೆಯಲ್ಲಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹೋರಾಟಗಾರರು ಹಾಗೂ ಸಾಮಾಜಿಕ ಚಿಂತಕರನ್ನು ಕರೆದುಕೊಂಡು ಬಂದು ಗ್ರಾಮದ ಯುವಕರಿಗೆ ಮಹಾಪುರುಷರ ವಿಚಾರಗಳನ್ನು ತಿಳಿಸುವಂತಹ ಕಾರ್ಯಗಳನ್ನು ಮಾಡಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಶೋಷಿತ ಸಮುದಾಯಗಳ ಮೇಲೆ ಅನ್ಯಾಯ, ಅತ್ಯಾಚಾರ ಘಟನೆಗಳಾದಾಗ ಹೋರಾಟಗಳನ್ನು ಮಾಡಿದ್ದಾರೆ. ಜಿಲ್ಲೆಯ ವಿವಿಧ ಸಮುದಾಯದ ಪ್ರಮುಖರನ್ನು ಮಹಾಪುರುಷರ ವಿಚಾರ ವೇದಿಕೆಯಡೆಗೆ ಸೇರಿಸಿ ಕಲಬುರಗಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸದ್ದಿಲ್ಲದೆ ಎಲೆ ಮರೆಕಾಯಿಯಂತೆ ದುಡಿಯುತ್ತಿದ್ದಾರೆ. ಅದರಂತೆ ಪತ್ರಿಕೋದ್ಯಮ ಪದವಿ ಪಡೆದಿದ್ದು, ʼಕಲಬುರಗಿ ಪ್ರಭʼ ಪತ್ರಿಕೆಯ ಸಂಪಾದಕರಾಗಿ ಒಂದು ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಸಮಾಜದಲ್ಲಿನ ಮೌಢ್ಯಾಚರಣೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವರದಿಗಳನ್ನು ಮಾಡಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ l ಸಚಿವ ರಾಜಣ್ಣ ವಿರುದ್ಧ ಅವಹೇಳನ; ವಕೀಲ ದೇವರಾಜೇಗೌಡ ಮಾತಿಗೆ ಕಾಂಗ್ರೆಸ್ ಮುಖಂಡರ ಖಂಡನೆ
“ಅಷ್ಟೇ ಅಲ್ಲದೆ ಅವರು ಶಾಲೆ ವಿದ್ಯಾರ್ಥಿಗಳಿಗೆ ಆರೋಗ್ಯ, ಶೈಕ್ಷಣಿಕ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ನಾನಾ ಸಾಮಾಜಿಕ ಕಾರ್ಯಗಳನ್ನು ಕಲಬುರಗಿ ಪ್ರಭ ಪತ್ರಿಕೆಯ ಮೂಲಕ ಮಾಡಿ ನೊಂದವರ ಧ್ವನಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಕಲಬುರಗಿ ಪ್ರಭ ಪತ್ರಿಕೆಯ ಸಂಪಾದಕ ವಿಜಯಕುಮಾರ ಜಿಡಗಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಸಂಸ್ಥೆಯ ಕಿರ್ತಿ ಹೆಚ್ಚುಸುವಂತೆ ಮಾಡಿದೆ” ಎಂದು ಹೇಳಿದರು.
“ಕಲಬುರಗಿಯ ಕನ್ನಡ ಭವನದಲ್ಲಿ ಸೋಮವಾರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವದು” ಎಂದು ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಮುಖಂಡ ಬಸವರಾಜ ತೋಟದ್ ತಿಳಿಸಿದ್ದಾರೆ.