ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪು ರಾಜಕೀಯ ಪ್ರೇರಿತ ತೀರ್ಪು ಎಂಬುದಾಗಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ ಎನ್ನಲಾದ ಆರೋಪ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಮ್ ದೂರಿನ ಮೇರೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಸಂಬಂಧ ಅಡ್ವೋಕೇಟ್ ಜನರಲ್‌ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಪತ್ರ ಬರೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
“ಕರ್ನಾಟಕ ಹೈಕೋರ್ಟ್‌ನ ಆದೇಶದ ವಿರುದ್ಧ ಸಚಿವರು ಗಂಭೀರ ಆರೋಪ ಮಾಡಿದ್ದು, ಆ ಮೂಲಕ ನ್ಯಾಯಾಲಯದ ಬಗೆಗಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಸಲ್ಲಿಸಿರುವ ಮನವಿಯ ಪ್ರತಿಯನ್ನು ಪತ್ರದೊಂದಿಗೆ ಲಗತ್ತಿಸಿದ್ದೇನೆ. ಈ ಸಂಬಂಧ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ” ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋವಿಡ್ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ
ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಸಂಬಂಧ ವಿಚಾರಣೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿತ್ತು. ಬಳಿಕ ಜಮೀರ್ ಅಹಮದ್ ಖಾನ್ ಅವರು ನ್ಯಾಯಾಲಯದ ತೀರ್ಪನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು ಎಂದು ಟಿ ಜೆ ಅಬ್ರಹಾಂ ಆರೋಪಿಸಿ ರಾಜ್ಯಪಾಲರಿಗೆ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದರು.