ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು-ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಪ್ರಾಂಶುಪಾಲ ಚಂದ್ರಶೇಖರ್ ಒತ್ತಾಯಿಸಿರುವುದಾಗಿ ಹೇಳಿದ್ದಾರೆಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಆರೋಪಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು.
ನರ್ಸಿಂಗ್ ಕಾಲೇಜಿನ ಪ್ರಮುಖರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದು, ಗಡ್ಡ ವಿವಾದ ಸುಖಾಂತ್ಯ ಕಂಡಿದೆ. ಅದರ ಫಲವಾಗಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ಸಮಾಧಾನಗೊಂಡಿದ್ದಾರೆ.
“ನರ್ಸಿಂಗ್ ಕಾಲೇಜು ನಿಯಮಾವಳಿಯಂತೆ ಶಿಸ್ತಿನಿಂದ ಇರಬೇಕೆಂದು ಹೇಳಿದ್ದರೂ, ಅವರು ನೀಡಿದ ಸೂಚನೆ ಸೂಕ್ಷ್ಮವಾದ ವಿಚಾರವಾಗಿತ್ತು. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ, ಮುಂದೆ ನಿಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ, ಇಲ್ಲಿ ನೀವು ಸುರಕ್ಷಿತವಾಗಿದ್ದೀರಿ” ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದ್ದಾರೆ. ನರ್ಸಿಂಗ್ ಕಾಲೇಜು ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳ ನಡುವಿನ ವಿವಾದ ತಿಳಿಯಾಗಿದೆಯೆಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ನರ್ಸಿಂಗ್ ಕಾಲೇಜು ಪ್ರಾಂಶುಪಾಲರು ಗಡ್ಡ ಬೊಳಿಸುವಂತೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಹೇಳಿರುವ ಬಗ್ಗೆ ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು. ಪಿಎಂಎಸ್‌ಎಸ್ ಯೋಜನೆಯಡಿ ಜಮ್ಮು ಕಾಶ್ಮೀರದಿಂದ ಹೊಳೆನರಸೀಪುರಕ್ಕೆ ವ್ಯಾಸಂಗಕ್ಕಾಗಿ ಬಂದಿರುವ ಯುವಕರು ನಿನ್ನೆ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್‌ಗೆ ಪತ್ರ ಬರೆದು ತಮಗೆ ಗಡ್ಡಬೋಳಿಸಲು ಪ್ರಾಂಶುಪಾಲರು ಸೂಚಿಸಿರುವುದಾಗಿ ದೂರಿದ್ದು, ಪತ್ರದ ಪ್ರತಿಯನ್ನೂ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
“ನಮ್ಮ ಸಮುದಾಯದಲ್ಲಿ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಗಡ್ಡ ಬೋಳಿಸಿಕೊಂಡು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾಂಶುಪಾಲರು ಹೇಳಿರುವ ಕ್ರಮ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ” ಎಂದು 20 ಮಂದಿ ವಿದ್ಯಾರ್ಥಿಗಳು ಅವಲತ್ತುಕೊಂಡಿದ್ದಾರೆ.
ಈ ಸಂಬಂಧ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಕೂಡಲೇ ಮಧ್ಯಪ್ರವೇಶಿಸುವಂತೆ ಆಗ್ರಹಿಸಿತ್ತು. ಈ ಸಂಬಂಧ ಸಿಎಂ ಕಚೇರಿ ಕೂಡ ಕಾಲೇಜಿನಿಂದ ಮಾಹಿತಿ ನೀಡಲು ಸೂಚಿಸಿತ್ತು.
ಇದನ್ನೂ ಓದಿದ್ದೀರಾ?ಹಾಸನ l ಸಚಿವ ರಾಜಣ್ಣ ವಿರುದ್ಧ ಅವಹೇಳನ; ವಕೀಲ ದೇವರಾಜೇಗೌಡ ಮಾತಿಗೆ ಕಾಂಗ್ರೆಸ್ ಮುಖಂಡರ ಖಂಡನೆ
ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಪ್ರಾಂಶುಪಾಲ ಚಂದ್ರಶೇಖರ್, “ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡುತ್ತಿರಲಿಲ್ಲ. ಹೀಗಾಗಿ ಕಾಲೇಜಿನ ಶಿಸ್ತು, ನಿಯಮ ಪಾಲಿಸಲು ಹೇಳಿದ್ದೆವು” ಎಂದು ಹೇಳಿಕೆ ನೀಡಿದರು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು, “ನಾವೂ ಎಲ್ಲ ವಿದ್ಯಾರ್ಥಿಗಳಂತೆ ಶಿಸ್ತು ಪಾಲನೆ ಮಾಡುತ್ತಿದ್ದೇವೆ. ಸ್ವಚ್ಛ ಬಟ್ಟೆಗಳನ್ನೇ ಧರಿಸುತ್ತೇವೆ. ನಮ್ಮ ಕೊಠಡಿಗಳನ್ನು ಬೇಕಾದರೆ ಪರಿಶೀಲಿಸಲಿ” ಎಂದು ಎಲ್ಲರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಪ್ರತ್ಯುತ್ತರ ನೀಡಿದ್ದರು.