ಕನ್ನಡ ಸಾಹಿತ್ಯ ಪರಿಷತ್ತು ಯುವ ಜನಾಂಗವನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡಲು ನವೀನ ವಿಷಯಗಳನ್ನು ಚರ್ಚೆಗೆ ಒಳಪಡಿಸಬೇಕು. ಯುವ ಜನರ ಪಾಲ್ಗೊಳ್ಳುವಿಕೆಯಿಂದ ಪರಿಷತ್ತು ಇನ್ನೂ ಹೆಚ್ಚು ಜನಮಾನಸವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಹಾವೇರಿ ಪಟ್ಟಣದ ಗೆಳೆಯರ ಬಳಗ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿರೂಪಾಕ್ಷಪ್ಪ ದ್ಯಾಮಣ್ಣನವರ, ದಿ. ಗದಿಗೆಪ್ಪ ಸಿದ್ದಮ್ಮನವರ, ಸಿ.ಸಿ.ಪ್ರಭುಗೌಡರ, ದಿ. ರುದ್ರಪ್ಪ ಕದರಮಂಡಲಗಿ, ಮತ್ತು ದಿ. ಚನ್ನಪ್ಪ ಚೌಶೆಟ್ಟಿ ಇವರ ದತ್ತಿನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಕನ್ನಡ ಸಾಹಿತ್ಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವುದು ಸರ್ವವಿಧಿತ. ಆದರೆ ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ, ನೆಲ, ಜಲ ವಿಷಯಗಳಲ್ಲಿ ಅನ್ಯಾಯವಾಗುತ್ತಿರುವದು ಸಹ ಖಂಡನೀಯ. ಈ ಹಿನ್ನೆಲೆಯಲ್ಲಿ ಕಸಾಪವು ಹೊಸ ಸ್ಥಿತ್ಯಂತರಗಳನ್ನು ಎದುರಿಬೇಕಾಗಿದೆ. ನಾಡಿನ ಯುವ ಜನತೆ, ಹೊಸ ಪ್ರತಿಭೆಗಳು ಈ ಅನ್ಯಾಯದ ವಿರುದ್ಧ ಎದ್ದು ನಿಲ್ಲಬೇಕಾಗಿದೆ” ಎಂದು ಕರೆ ನೀಡಿದರು.
ದತ್ತಿ ಉಪನ್ಯಾಸ ನೀಡಿದ ಸಾಹಿತಿ ಸಿ.ಎಸ್. ಮರಳಿಹಳ್ಳಿ ಮಾತನಾಡಿ, “ಕನ್ನಡ ಸಾಹಿತ್ಯವು ಪಂಪನ ಕಾಲದಿಂದಲೂ ರಾಜಾಶ್ರಯದಲ್ಲಿ ಬೆಳೆಯಿತು. ಆದರೆ 12ನೇ ಶತಮಾನದ ವಚನ ಸಾಹಿತ್ಯವು ಯಾವದೇ ಆಶ್ರಯವಿಲ್ಲದೇ ಬೆಳೆದು, ಸರ್ವಜನಾಂಗದ ಪ್ರೀತಿಗೆ ಪಾತ್ರವಾಯಿತು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯವು ಅತೀ ಶ್ರೇಷ್ಠ ಕೊಡುಗೆ ನೀಡಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಆಳಂದ | ಈ ದಿನ ಫಲಶೃತಿ: ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ₹1.80 ಕೋಟಿ ಅನುದಾನ ಬಿಡುಗಡೆ
ದತ್ತಿದಾನಿಗಳಾದ ವಿರೂಪಾಕ್ಷಪ್ಪ ದ್ಯಾಮಣ್ಣನವರ ಮತ್ತು ಸಿ.ಸಿ. ಪ್ರಭುಗೌಡರ ಮಾತನಾಡಿದರು. ತಾಲೂಕ ಕಸಾಪ ಅಧ್ಯಕ್ಷ ವಾಯ್.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಂ. ಓಕಾರಣ್ಣನವರ ದತ್ತಿದಾನಿಗಳ ಪರಿಚಯ ಮಾಡಿದರು. ಕೆ.ಆರ್. ಹಿರೇಮಠ ವಚನಗಳನ್ನು ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಎಸ್.ಜಿ. ಸಿದ್ದಮ್ಮನವರ, ಈರಣ್ಣ ಬೆಳವಡಿ, ಹನುಮಂತಗೌಡ ಗೊಲ್ಲರ, ರೇಣುಕಾ ಗುಡಿಮನಿ ಹಾಗೂ ಸಾಹಿತ್ಯಸಕ್ತರು ಉಪಸ್ಥಿತರಿದ್ದರು.
