ಆಸ್ತಿಗಾಗಿ ನಡೆದಿದ್ದ ಕೊಲೆಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಕ್ಕೆ ಪತ್ನಿ ಹಾಗೂ ಮೂವರು ಮಕ್ಕಳು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯದ ಕೆಲವೊಂದು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿರುವುದು ವರದಿಯಾಗಿದೆ.
ಬೀದರ್ ತಾಲೂಕಿನ ಮನ್ನಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾತೋಳಿ ಗ್ರಾಮದಲ್ಲಿ ನ.8ರಂದು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಿವುಡ ಹಾಗೂ ಮೂಕ ವ್ಯಕ್ತಿ ಬಸವರಾಜ ನರಸಪ್ಪ ಶೇರಿಕಾರ್ (52) ಎಂಬವರನ್ನು ಆತನ ಪತ್ನಿ ಮತ್ತು ಮೂವರು ಮಕ್ಕಳು ಸೇರಿ ಮನೆಯಲ್ಲಿ ಕೈ ಕಾಲು ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿತ್ತು.
ಈ ಕೊಲೆಗೆ ಕೋಮುಬಣ್ಣ ಬಳಿಯುವ ಉದ್ದೇಶದಿಂದ ಕೆಲವು ಖಾಸಗಿ ಸುದ್ದಿ ಮಾಧ್ಯಮಗಳು ಮತಾಂತರಕ್ಕೆ ಒಪ್ಪದಿದ್ದಕ್ಕೆ ಮೂಗ ತಂದೆಯನ್ನೇ ಕೊಲೆ ಮಾಡಲಾಗಿದೆ ಎಂದು ವಿವಿಧ ಶೀರ್ಷಿಕೆಯಡಿ ಸುಳ್ಳು ಸುದ್ದಿ ಪ್ರಕಟಿಸಿದವು ಎನ್ನಲಾಗಿದೆ.
ನ.8 ರಂದು ಬೆಳಗ್ಗೆ ಬಸವರಾಜ್ ನರಸಪ್ಪ ಮನೆಗೆ ಹೋಗಿದ್ದಾಗ ಮನೆಯರ ಮಾತು ಕೇಳದ ಕಾರಣಕ್ಕಾಗಿ ಪತ್ನಿ ಅಡೇಮಾ (45) ಪುತ್ರರಾದ ಪ್ರಭಾಕರ್ (25), ಹಣಮಂತ್ (22) ಹಾಗೂ ಪುತ್ರಿ ರತ್ನಮ್ಮಾ (28) ಮನೆಯ ಕೋಣೆಯಲ್ಲಿ ಆತನ ಕೈ ಕಾಲು ಕಟ್ಟಿಹಾಕಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಹೋದರ ಮಲ್ಲಿಕಾರ್ಜುನ್ ನರಸಪ್ಪಅವರು ಮನ್ನಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ಸತ್ಯಶೋಧನೆಗಾಗಿ ʼಈದಿನ.ಕಾಮ್ʼ ಮೀಡಿಯಾ ತಂಡ ಘಟನೆ ಜರುಗಿದ ಸಾತೋಳಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಾಗ ಇದು ಮತಾಂತರಕ್ಕೆ ಸಂಬಂಧಿಸಿದ ಕೊಲೆ ಅಲ್ಲ ಎಂದು ತಿಳಿದು ಬಂದಿದೆ.
ಕೌಟುಂಬಿಕ ಆಸ್ತಿ ವಿಚಾರಕ್ಕಾಗಿ ನಡೆದ ಕೊಲೆಯನ್ನು ಕೆಲವು ಮಾಧ್ಯಮಗಳು ಮತಾಂತರಕ್ಕೆ ಒಪ್ಪದ ಕೊಲೆ ಎಂದು ಬಿಂಬಿಸಿ ಸುಳ್ಳು ಸುದ್ದಿ ವರದಿ ಮಾಡಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.