ʼಸ್ವಾಮಿ ನಿಷ್ಠೆʼಗೆ ಹೆಸರುವಾಸಿಯಾದ ಓಬವ್ವ ಕರ್ನಾಟಕದ ಹೆಮ್ಮೆ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಸಾಕ್ಷಿ ಪ್ರಜ್ಞೆಯ ಹೆಗ್ಗುರುತು ಒನಕೆ ಓಬವ್ವ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಸ್ಮರಿಸಿದರು.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಅದ್ದೂರಿಯಾಗಿ ಆಯೋಜಿಸಿದ್ದ ಚಿತ್ರದುರ್ಗದ ಹೆಮ್ಮೆ, ಮಹಿಳಾ ಇತಿಹಾಸದ ದಂತಕತೆ ವೀರ ವನಿತೆ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಾಜ್ಯ ರಕ್ಷಣೆಗಾಗಿ ಕರ್ತವ್ಯ ನಿಷ್ಠೆ ಮತ್ತು ಸ್ವಾಮಿ ನಿಷ್ಠೆಯಿಂದ ಒನಕೆಯನ್ನೇ ತನ್ನ ಆಯುಧವನ್ನಾಗಿ ಮಾಡಿಕೊಂಡು ಶತ್ರುಗಳನ್ನು ನಿರ್ನಾಮ ಮಾಡಿದ ಓಬ್ಬವ್ವ ಇತಿಹಾಸದಲ್ಲಿ ವೀರ ವನಿತೆಯಾಗಿ ಸ್ತ್ರೀಶಕ್ತಿಯ ಉದಾಹರಣೆಯಾಗಿ ಅಜರಾಮರವಾಗಿ ಉಳಿದಿದ್ದಾಳೆ” ಎಂದು ಸ್ಮರಿಸಿದರು.
“ಯುದ್ದದ ಬಗ್ಗೆ ಯಾವುದೇ ಅರಿವು ಇಲ್ಲದಿದ್ದರೂ ಸಮಯ ಪ್ರಜ್ಞೆ ಹಾಗೂ ಮಹಾಧೈರ್ಯದಿಂದ ರಾಜವೀರ ಮದಕರಿ ನಾಯಕರ ಆಳ್ವಿಕೆಯಲ್ಲಿ ಕೋಟೆಗೆ ಒದಗಿ ಬಂದ ಆಪತ್ತನ್ನು ಓರ್ವ ಸಾಮಾನ್ಯ ಹೆಂಗಸು ಮನೆಯ ಒನಕೆಯನ್ನೇ ಉಪಯೋಗಿಸಿ ಹೈದರಾಲಿಯ ಸೈನಿಕರ ವಿರುದ್ದ ಹೋರಾಡಿದ ಓಬವ್ವನ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಬೇಕು” ಎಂದು ಹೇಳಿದರು.
“ಕನ್ನಡ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ, ಅಬ್ಬಕ್ಕ, ದುರ್ಗದ ರಾಣಿ ಓಬವ್ವನಾಗತಿ ಇವರೆಲ್ಲರೂ ಶತ್ರುಗಳ ವಿರುದ್ಧ ಸೆಣಸಾಡಿದ ವೀರ ಮಹಿಳಾಮಣಿಗಳೇ. ಇಂಥ ವೀರ ವನಿತೆಯರ ಸಾಲಿಗೆ ಓಬವ್ವೆಯು ಸೇರುತ್ತಾಳೆಂಬುದು ಗರ್ವ, ಅಭಿಮಾನದ ಸಂಗತಿ. ಓಬವ್ವೆ ಸಾಮಾನ್ಯ ಹೆಣ್ಣು ಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೇ ಅಲ್ಲ, ಕನ್ನಡ ನಾಡಿಗೆ ಹೆಮ್ಮೆಯ ಮನೆಮಗಳಾಗಿದ್ದಾಳೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮಾತನಾಡಿ, “ಓಬವ್ವ ಒಬ್ಬ ಸಾಮಾನ್ಯ ಮಹಿಳೆಯಾಗಿ, ಕಾವಲುಗಾರನ ಹೆಂಡತಿಯಾಗಿ ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕೋಟೆನಾಡು ದುರ್ಗವನ್ನು ರಕ್ಷಿಸಿ ಉಳಿಸಿಕೊಳ್ಳಲು ಹೋರಾಡಿದ ವೀರ ಮಹಿಳೆ ಒನಕೆ ಓಬವ್ವ. ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ದುರ್ಗದ ಎಲ್ಲ ಸಮುದಾಯದವರು ಒನಕೆ ಓಬವ್ವನನ್ನು ಸ್ಮರಿಸಬೇಕು” ಎಂದರು.
“ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಒನಕೆ ಓಬವ್ವ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಅಗತ್ಯವಿರುವ ಎಲ್ಲ ರೀತಿಯ ಸಹಕಾರ, ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವುದು” ಎಂದು ಶಾಸಕರು ಭರವಸೆ ನೀಡಿದರು.
ಡಾ.ತಿಪ್ಪೇಸ್ವಾಮಿ ಮತ್ಸಮುದ್ರ ಒನಕೆ ಓಬವ್ವ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಸಚಿವ ಎಚ್ ಆಂಜನೇಯ ಆಹ್ವಾನಿತರಾಗಿ ಮಾತನಾಡಿದರು.
ಇದಕ್ಕೂ ಮೊದಲು ಒನಕೆ ಓಬವ್ವ ಜಯಂತಿ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಮಾರಮ್ಮನ ದೇವಸ್ಥಾನದ ಸಮೀಪವಿರುವ ಒನಕೆ ಓಬವ್ವನ ದೇವಸ್ಥಾನದ ಮುಂಭಾಗದಲ್ಲಿ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿಗ್ಗಾವಿ ಉಪಚುನಾವಣೆ | ದೇಶದ ಬಹುತ್ವ ಸಂಸ್ಕೃತಿ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು: ಸಿಪಿಐಎಂ ಕರೆ
ನಗರದ ಹೊಳಲ್ಕೆರೆ ರಸ್ತೆಯ ಒನಕೆ ಓಬವ್ವ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ, ನೀಲಕಂಠೇಶ್ವರ ದೇವಸ್ಥಾನ, ಗಾಂಧಿವೃತ್ತ, ಪ್ರವಾಸಿ ಮಂದಿರ ಮಾರ್ಗದವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ತರಾಸು ರಂಗಮಂದಿರದವರೆಗೂ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ ಕೆ ತಾಜ್‍ಪೀರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜೆ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ ಕಾರ್ತಿಕ್, ತಹಶೀಲ್ದಾರ್ ಡಾ ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ ರೇಣುಕಾ ಸೇರಿದಂತೆ ಅಧಿಕಾರಿಗಳು, ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.