ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೆತ್ರಗಳಿಗೆ ಬುಧವಾರ ಉಪಚುನಾವಣೆ ನಡೆಯಲಿದೆ. ಈ ಪೈಕಿ ಶಿಗ್ಗಾಂವಿನಲ್ಲಿ ಕಾಂಗ್ರೆಸ್‌ಗೆ ಸೋಲಾದರೆ, ಚನ್ನಪಟ್ಟಣದಲ್ಲಿ 50-50, ಸಂಡೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗುತ್ತಿದೆ. ಆದರೆ, ಸಂಡೂರಿನ ವಾಸ್ತವವೇ ಬೇರೆ ಇದೆ. ಇಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವೇನಿಲ್ಲ. ಕಾಂಗ್ರೆಸ್ ಇಲ್ಲಿ ಗೆಲ್ಲಬೇಕಾದರೆ ಶತಾಯಗತಾಯ ಪ್ರಯತ್ನ ಅತ್ಯಗತ್ಯ. ಬೆವರು ಹರಿಸಿದರಷ್ಟೇ ಕಾಂಗ್ರೆಸ್‌ಗೆ ಇಲ್ಲಿ ಗೆಲುವು.
ಆರಂಭದಿಂದಲೂ ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಉಳಿದುಕೊಂಡಿದೆ. ಆದ್ದರಿಂದ ಇಲ್ಲಿ ಕಾಂಗ್ರೆಸ್‌ನಿಂದ ಕಣದಲ್ಲಿರುವ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಗೆಲುವು ನಿಶ್ಚಿತ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಸೋಲು ಖಚಿತ ಎಂಬ ಭಾವನೆಯಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಡೂರು ಕಡೆ ಹೆಚ್ಚು ಗಮನ ನೀಡಿರಲಿಲ್ಲ. ಆದರೆ, ಯಾವಾಗ ವಾಸ್ತವದ ಅರಿವು ಕಾಂಗ್ರೆಸ್ ನಾಯಕರಿಗೆ ಆಯಿತೋ ಅಂದಿನಿಂದ ಹಲವು ಪ್ರಬಲ ನಾಯಕರು ಸಂಡೂರಿನತ್ತ ಧಾವಿಸಿದ್ದಾರೆ. ಭಾರೀ ಪ್ರಚಾರ ಮಾಡಿದ್ದಾರೆ.
1957ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೂ ಒಂದು ಬಾರಿಯೂ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿಲ್ಲ. ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಇತಿಹಾಸ ಬರೆಯಬೇಕು ಎಂಬ ಇಂಗಿತ ಬಿಜೆಪಿಯದ್ದು. ಇಲ್ಲಿ ಕಾಂಗ್ರೆಸ್‌ನ ಎಂವೈ ಘೋರ್ಪಡೆ ಅವರು 30 ವರ್ಷ ಶಾಸಕರಾಗಿದ್ದರು. ಅವರನ್ನು ಬಿಟ್ಟರೆ ಈಗಿನ ತುಕಾರಾಂ 20 ವರ್ಷ ಅವಧಿಗೆ ಆಯ್ಕೆಯಾಗಿದ್ದರು. 1985ರಲ್ಲಿ ಜನತಾಪಾರ್ಟಿ, 2004ರಲ್ಲಿ ಜೆಡಿಎಸ್ ಇಲ್ಲಿ ಗೆದ್ದಿರುವುದು ಬಿಟ್ಟರೆ ಉಳಿದೆಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಈ ಬಾರಿಯೂ ತಾವೇ ಗೆಲ್ಲುತ್ತೇವೆಂಬ ವಿಶ್ವಾಸ ಕೈ ಕಾರ್ಯಕರ್ತರಲ್ಲಿದೆ. ಈ ಅತಿಯಾದ ಆತ್ಮವಿಶ್ವಾಸವನ್ನು ಬುಡಮೇಲು ಮಾಡಲು ಸಂಡೂರಿನಲ್ಲಿ ಗಣಿ ಕುಳ ಜನಾರ್ದನ ರೆಡ್ಡಿ, ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿದ್ದೀರಾ?: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಯಾರಿಗೆ ಒಲಿಯಲಿವೆ ಮೂರು ಕ್ಷೇತ್ರಗಳು?
ಸಂಡೂರು ಇತರ ಕ್ಷೇತ್ರಗಳಿಗಿಂತ ಭಿನ್ನವಾದ ಕ್ಷೇತ್ರ. ಸಚಿವರೊಬ್ಬರ ಕಚೇರಿಯ ನೌಕರನನ್ನೇ ಸಚಿವರನ್ನಾಗಿಸಿದ್ದು ಸಂಡೂರು ವಿಧಾನಸಭಾ ಕ್ಷೇತ್ರದ ವಿಶೇಷ. ರಾಜವಂಶಸ್ಥ ಘೋರ್ಪಡೆಯವರ ಕಚೇರಿಯಲ್ಲಿ ಕೆಲಸಕ್ಕಿದ್ದ ಸಂತೋಷ್ ಲಾಡ್ ರಾಜರನ್ನು ಸೋಲಿಸಿ ಶಾಸಕರಾದ ಕ್ಷೇತ್ರವಿದು. 2008ರ ಬಳಿಕ ಇದು ಎಸ್‌ಟಿ ಮೀಸಲು ಕ್ಷೇತ್ರವಾದಾಗ ಲಾಡ್ ತಮ್ಮ ನೌಕರನನ್ನೇ (ತುಕಾರಾಂ) ಕಣಕ್ಕಿಳಿಸಿ ಗೆಲ್ಲಿಸಿದ್ದರು. ಅದಾದ ಬಳಿಕ ತನ್ನ ಸರಳ ವ್ಯಕ್ತಿತ್ವ, ನಡೆ, ನುಡಿ, ಕೆಲಸದಿಂದ ಜನರೊಂದಿಗೆ ಬೆರೆತು ಈ ಕ್ಷೇತ್ರವನ್ನು ತುಕಾರಾಂ ತನ್ನ ಹಿಡಿತದಲ್ಲೇ ಇಟ್ಟುಕೊಂಡರು. ಆದರೆ, ಚುನಾವಣೆಗಳು ಕಳೆಯುತ್ತಿದ್ದಂತೆ ಸಂಡೂರಿನಲ್ಲಿ ಅವರ ಗೆಲುವಿನ ಅಂತರದಲ್ಲಿ ಏರಿಳಿತ ಕಾಣುತ್ತಿದೆ.
2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತುಕಾರಾಂ ಅವರು ಜೆಡಿಎಸ್‌ನ ಧನಂಜಯ ಆರ್ ಅವರನ್ನು ಬರೋಬ್ಬರಿ 34,631 ಮತಗಳ ಅಂತರದಿಂದ ಸೋಲಿಸಿದ್ದರು. 2018ರಲ್ಲಿ ತುಕಾರಾಂ ಅವರು ಮತ್ತೆ ಚುನಾವಣೆಯಲ್ಲಿ ಗೆದ್ದರೂ ಕೂಡಾ ಮತಗಳ ಅಂತರ 14,010 ಸಾವಿರಕ್ಕೆ ಬಂದಿಳಿಯಿತು. ತುಕಾರಾಂ 78,106 ಮತಗಳನ್ನ ಪಡೆದರೆ, ಬಿಜೆಪಿಯ ರಾಘವೇಂದ್ರ 64,096 ಮತಗಳನ್ನು ಪಡೆದು ಪರಾಭವಗೊಂಡರು. ಅದೇ ವರ್ಷದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಬಂಗಾರು ಹನುಮಂತು 7,191 ಮತಗಳನ್ನು ಪಡೆದಿದ್ದರು. ಅವರೇ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
2023ರಲ್ಲಿಯೂ ತುಕಾರಾಂ ಮತ್ತೆ ಸಂಡೂರಿನಲ್ಲಿ ಗೆದ್ದಿದ್ದಾರೆ. 85,223 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಶಿಲ್ಪಾ ರಾಘವೇಂದ್ರ ಅವರನ್ನು 35,532 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಆದರೆ ಅದಾಗಲೇ ಸಂಡೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದ್ದ ಸ್ಪರ್ಧೆಯು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹಣಾಹಣಿಯಾಗಿ ಬದಲಾಗಿದೆ. ಇದೀಗ ನಡೆಯುತ್ತಿರುವ ಉಪಚುನಾವಣೆಯೂ ಕೂಡಾ ಕಮಲ-ಕೈ ಕದನವಾಗಿದೆ.
ಕಾಂಗ್ರೆಸ್‌ಗೆ ಇರುವ ಹಲವು ಸವಾಲುಗಳು
ಮೇಲ್ನೋಟಕ್ಕೆ ಸಂಡೂರು ಸಂಪೂರ್ಣವಾಗಿ ಕಾಂಗ್ರೆಸ್ ತೆಕ್ಕೆಯಲ್ಲೇ ಇರುವಂತೆ ಕಂಡರೂ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಷ್ಟು ಸುಲಭವಾಗಿ ಗೆಲ್ಲಲಾಗದು. ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್‌ಗೆ ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ – ಮೂರೂ ಕೂಡಾ ಪ್ರತಿಷ್ಠೆಯ ಕಣ. ಚನ್ನಪಟ್ಟಣದಲ್ಲಿ ಸಿನಿಮಾ ಕೈಹಿಡಿಯದೆ ರಾಜಕೀಯಕ್ಕೆ ಇಳಿದ ಸಿಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಕದನ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಯಾಸೀರ್ ಅಹಮದ್ ಖಾನ್ ಪಠಾಣ್ ಸೆಣಸಾಟ. ಈ ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರುಗಳ ಘನತೆ ಅಡಗಿದೆ.
ಇದನ್ನು ಓದಿದ್ದೀರಾ? ಸಂಡೂರು | ಬಿಜೆಪಿಯ ಗಣಿ ಗಲಾಟೆ ಬೇಡ, ಶಾಂತಿ ಬೇಕು ಎಂದ ಜನ, ಕಾಂಗ್ರೆಸ್‌ನತ್ತ ಮನ
ಭರತ್ ಬೊಮ್ಮಾಯಿ ಸೋಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಹಿನ್ನೆಡೆಯಾದರೆ, ನಿಖಿಲ್ ಕುಮಾರಸ್ವಾಮಿ ಸೋಲು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಮುಖಭಂಗ. ಹೀಗಿರುವಾಗ ಸಂಡೂರು ಹೇಗೂ ನಮ್ಮ ಕೈಯಲ್ಲಿದೆ ಎಂಬ ವಿಶ್ವಾಸದಿಂದ ಚನ್ನಪಟ್ಟಣ ಮತ್ತು ಶಿಗ್ಗಾಂವಿಗೆ ಹೆಚ್ಚಿನ ಗಮನವನ್ನು ಕಾಂಗ್ರೆಸ್ ಹರಿಸಿದೆ. ಆದರೆ ಸಂಡೂರಿನಲ್ಲಿ ರೆಡ್ಡಿ ಕಾಸು ಝಳಪಿಸುತ್ತಿದ್ದಂತೆ ಎಚ್ಚೆತ್ತ ಕೈ ನಾಯಕರುಗಳು ಸಂಡೂರು ಕಡೆಗೂ ದೃಷ್ಟಿ ಹಾಯಿಸಿದ್ದಾರೆ. ಈಗ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಒದ್ದಾಟ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಎಸ್‌ಸಿ ಸಮುದಾಯದ ಒಂದು ವಿಭಾಗವು ಮೀಸಲಾತಿ ವಿಚಾರದಲ್ಲಿ ಕರ್ನಾಟಕ ಸರ್ಕಾರವು ನಿರ್ಧಾರಕ್ಕೆ ಬರುವುದಕ್ಕೂ ಮುನ್ನವೇ ನೋಟಾ ಮತ ಹಾಕುವ ನಿಲುವು ತಳೆದಿದೆ. ಎಸ್‌ಸಿ ಒಳಮೀಸಲಾತಿ ಜಾರಿಗೆ ಸಚಿವ ಸಂಪುಟ ಅಸ್ತು ಎನ್ನುವುದಕ್ಕೂ ಮುನ್ನ ಸಭೆ ನಡೆಸಿ ನೋಟಾ ಮತದ ತೀರ್ಮಾನಕ್ಕೆ ಸಮುದಾಯ ಬಂದಿದೆ. ಸಮುದಾಯದ ನಿರ್ಧಾರ ಬದಲಾಗದಿದ್ದರೆ ಕಾಂಗ್ರೆಸ್ ಮತ ಬ್ಯಾಂಕ್‌ಗೆ ಸ್ವಲ್ಪ ಏಟು ನೀಡುವ ಸಾಧ್ಯತೆಯಿದೆ.
ಇವೆಲ್ಲವುದರ ನಡುವೆ ಜನಾರ್ದನ ರೆಡ್ಡಿ ಅವರ ಹಣ ಬಲ ಸಂಡೂರಿನಲ್ಲಿ ಕೊಂಚ ಹೆಚ್ಚೇ ಪ್ರಾಬಲ್ಯವನ್ನು ಹೊಂದಿದೆ. ಗಣಿ ದೊರೆ ರೆಡ್ಡಿ ಹಲವು ವರ್ಷಗಳಿಂದ ಬಳ್ಳಾರಿ ರಾಜಕೀಯಕ್ಕೆ ಎಂಟ್ರಿ ನೀಡಿರಲಿಲ್ಲ. ಆದರೆ ಈ ಉಪಚುನಾವಣೆಯ ವೇಳೆಗೆ ಖಜಾನೆ ಸದ್ದು ಮಾಡುತ್ತಾ ಸಂಡೂರಿಗೆ ತಲುಪಿದ್ದಾರೆ. ಈ ಕ್ಷೇತ್ರದ ಗಣಿಗಾರಿಕೆಯಲ್ಲಿ ರೆಡ್ಡಿ-ವಿಜಯೇಂದ್ರ ಎಂಬ ಬಲವಾದ ಕೈಗಳು ಇರುವುದು ಜನಜನಿತ.
ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ಅನುಮಾನವಿಲ್ಲ. ಆದರೆ ಅಷ್ಟು ಸುಲಭದ ಗೆಲುವು ಇದಲ್ಲ. ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ತೀವ್ರ ಹಣಾಹಣಿ ಖಚಿತ. ಕಾಂಗ್ರೆಸ್‌ಗೆ ಇಲ್ಲಿ ಹಲವು ಸವಾಲು. ಗ್ಯಾರಂಟಿ ಮುಂದಿಟ್ಟು ವಿಧಾನಸಭೆ ಚುನಾವಣೆ ಗೆದ್ದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದಾಗಿ ಮುಖಭಂಗ ಕಂಡಿದೆ. ಈಗ ಮತ್ತೆ ಅದೇ ಆತ್ಮವಿಶ್ವಾಸ ಸಂಡೂರಿನಲ್ಲಿ ಒಳಿತಲ್ಲ. ಗೆದ್ದರೂ ನಮಗೆ ಪೈಪೋಟಿಯಿದೆ ಎಂಬುದು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಬೆವರು ಹರಿಸಿದರಷ್ಟೇ ಜಯ ಅನ್ನಪೂರ್ಣ ತುಕಾರಾಂ ‘ಕೈ’ ಸೇರಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.