ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಯನ್ನು ಮಟ್ಟ ಹಾಕಲು ನಿರ್ದಿಷ್ಟವಾದ ಕಾಯಿದೆ ಇಲ್ಲ. ಈಗಿರುವ ಕಾನೂನು 1886ರಲ್ಲಿ ಬ್ರಿಟೀಷರು ರಚಿಸಿದ್ದು, ಇದು ಹಲ್ಲಿಲ್ಲದ ಹಾವಿನಂತ ಕಾನೂನು . ಏನು ಉಪಯೋಗ ಇಲ್ಲ. ಶೀಘ್ರವಾಗಿ ಕಾಯಿದೆಗೆ ತಿದ್ದುಪಡಿ ಆಗಬೇಕೆಂದು ನ್ಯಾಯವಾದಿ ಬಿ.ಟಿ ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಎಐಎಲ್‌ಯು ಬೆಟ್ಟಿಂಗ್ ದಂಧೆ ವಿರುದ್ಧ ಪ್ರಗತಿಪರ ಸಂಘಟನೆಗಳು ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮತ್ತು ಸಭೆಯ ಅಹವಾಲು ಪರಿಗಣಿಸಿ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದೆ. ಸಭೆಯಲ್ಲಿ ಪೊಲೀಸ್ ಇಲಾಖೆ ಕೂಡ ಭಾಗವಹಿಸಿತ್ತು. ಬೆಟ್ಟಿಂಗ್ ದಂಧೆಯ ಜನರ ವಿರುದ್ಧ ಇನ್ನು ಮುಂದೆ ಕಲಿಸಲು ಜನರಿಗೆ ಸಹಾಯ ಮಾಡುವುದಾಗಿ ಪೊಲೀಸ್ ಇಲಾಖೆ ಸಭೆಯಲ್ಲಿ ಆಶ್ವಾಸನೆ ಇತ್ತಿತ್ತು ಎಂದರು.
ನಿರ್ದಿಷ್ಟ ಪ್ರಕರಣ ಒಂದರಲ್ಲಿ ಆ ದಿನ ಎಫ್‌ಐಆರ್ ದಾಖಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸರಿಗೆ ಆದೇಶವನ್ನು ಮಾಡಿದ್ದರು. ಆನಂತರ ವಕೀಲರು ಒಬ್ಬರು ನನಗೆ ಕರೆ ಮಾಡಿ ಸದರಿ ಎಫ್ಐಆರ್ ಮಾಡಲು ಯಾವ ಯಾವ ಕಲಂಗಳಡಿ ಕೇಸು ದಾಖಲು ಮಾಡಬೇಕು ಗೊತ್ತಾಗ್ತಿಲ್ಲ, ಸ್ವಲ್ಪ ನೋಡಿ ಹೇಳಿ ಸರ್ ಅಂದಿದ್ದರು. ಬೆಟ್ಟಿಂಗ್ ಸಂಬಂಧದ ಕಾನೂನುಗಳ ಕುರಿತು ನಾನು ಹುಡುಕಾಡಲು ಶುರು ಮಾಡಿದಾಗಲಷ್ಟೇ ನನಗೆ ಗೊತ್ತಾಗಿದ್ದು ಬೆಟ್ಟಿಂಗ್ ಸಂಬಂಧ ದೇಶದಲ್ಲಿ ಒಂದು ಸಮಗ್ರ ಕಾನೂನೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಬೆಟ್ಟಿಂಗ್ ಸಂಬಂಧ ಅತ್ಯಂತ ಹಳೆಯ ಕಾನೂನು ಇರುವುದು 1886ರಲ್ಲಿ ಬ್ರಿಟಿಷರು ರಚಿಸಿದ್ದು. ನೂರಿನ್ನೂರು ರೂಪಾಯಿ ದಂಡ ಹಾಕುವಂಥದ್ದು. ಹಾಗೆ ನೋಡಿದರೆ 2021ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ಒಂದು ತಿದ್ದುಪಡಿ ಮಾಡಿ ಬೆಟ್ಟಿಂಗ್ ವಿರುದ್ಧ ಸಮರ ಸಾರಲು ಪ್ರಯತ್ನ ಮಾಡಿತ್ತು. ಆದರೆ ಕರ್ನಾಟಕ ಉಚ್ಛ ನ್ಯಾಯಾಲಯ ಆ ತಿದ್ದುಪಡಿಗಳು ಸಂವಿಧಾನ ವಿರೋಧಿಯಾಗಿ ಇವೆ ಎಂದು ಆದೇಶ ಒಂದರ ಮೂಲಕ ರದ್ದು ಮಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮರಕುಂಬಿ ಪ್ರಕರಣ | ಜೀವಾವಧಿ ಶಿಕ್ಷೆಗೊಳಗಾಗಿದ್ದ 98 ಅಪರಾಧಿಗಳ ಪೈಕಿ 97 ಜನರಿಗೆ ಹೈಕೋರ್ಟ್ ಜಾಮೀನು
ಪ್ರಕರಣದ ಸಮಗ್ರ ಕಥೆ ಕೇಳಿಸಿಕೊಂಡ ನಾನು ಪ್ರಕರಣಕ್ಕೆ ಹೊಂದುವಂತೆ ಭಾರತೀಯ ನ್ಯಾಯ ಸಂಹಿತೆಯ ಇತರ ಕಲಂಗಳನ್ನು ಬಳಸಿ ದೂರನ್ನು ಸಿದ್ಧಪಡಿಸಿ ಕೊಟ್ಟಿದ್ದೆ. ಬೆಟ್ಟಿಂಗ್‌ನಂತಹ ಜ್ವಲಂತ ಸಮಸ್ಯೆಯ ಬಗ್ಗೆ ಸರಕಾರಗಳು ಕಾಯ್ದೆ ಕಾನೂನುಗಳನ್ನು ತ್ವರಿತವಾಗಿ ರಚಿಸಬೇಕಾಗಿದೆ. ಬೆಟ್ಟಿಂಗ್, ಜೂಜು, ಕೆಸಿನೋಗಳಿಂದ ಹಣ ಮಾಡಿದವರೆ ರಾಜಕೀಯ ಪ್ರವೇಶಿಸುತ್ತಿದ್ದು, ಸರಕಾರದ ಭಾಗವಾಗಿ ಬಿಡುತ್ತಿರುವುದರಿಂದ ಇಂತಹ ಕಾನೂನುಗಳು ಜಾರಿಯಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುತ್ತದೆ. ಅಷ್ಟು ಹೊತ್ತಿಗೆ ಈ ಹುಚ್ಚು ಹಿಡಿಸಿಕೊಂಡ ನಮ್ಮ ಹಳ್ಳಿಗಳ ಯುವಕರು ಆದೆಷ್ಟು ಜನ ರೈಲಿಗೆ ತಲೆ ಕೊಡಲಿದ್ದಾರೋ ಗೊತ್ತಿಲ್ಲ ಎಂದು ನ್ಯಾಯವಾದಿ ಬಿ.ಟಿ ವಿಶ್ವನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
