ವೈದ್ಯರೊಬ್ಬರಿಗೆ ರೋಗಿಯ ಪುತ್ರ ಚಾಕುವಿನಿಂದ ಏಳು ಬಾರಿ ಇರಿದ ಘಟನೆ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ, ಚೆನ್ನೈ ನಿವಾಸಿ ವಿಘ್ನೇಶ್ ಎಂದು ಗುರುತಿಸಲಾಗಿದೆ. ವಿಘ್ನೇಶ್ ವೈದ್ಯ ಡಾ.ಬಾಲಾಜಿ ಅವರಿಗೆ ಚಾಕುವಿನಿಂದ ಇರಿದಿದ್ದು ಗಂಭೀರವಾಗಿ ಗಾಯಗೊಂಡ ವೈದ್ಯರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಘ್ನೇಶ್ ಅವರ ತಾಯಿ ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಕಲೈಂಜರ್ ಸೆಂಟಿನರಿ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್ನಲ್ಲಿ ಈ ಘಟನೆ ನಡೆದಿದೆ.
ದಾಳಿಯ ನಂತರ ವಿಘ್ನೇಶ್ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಆಸ್ಪತ್ರೆಯ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಚಾಕುವಿನಿಂದ ಇರಿದು, ಕತ್ತು ಹಿಚುಕಿ ಮಗನನ್ನು ಕೊಂದ ತಾಯಿ: ಆತ್ಮಹತ್ಯೆಗೆ ಯತ್ನ
ಈ ಘಟನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ವೈದ್ಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಮತ್ತು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
“ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಾಲಾಜಿ ಅವರಿಗೆ ರೋಗಿಯ ಕುಟುಂಬದ ಸದಸ್ಯರು ಚಾಕುವಿನಿಂದ ಇರಿದಿರುವುದು ಆಘಾತಕಾರಿಯಾಗಿದೆ. ಘಟನೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ತನಿಖೆಗೂ ಸೂಚಿಸಲಾಗಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇನ್ನು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಕೂಡಾ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. “ಇಬ್ಬರನ್ನು ಬಂಧಿಸಲಾಗಿದೆ, ಮತ್ತು ಇತರರನ್ನು ಬಂಧಿಸಲು ಪೊಲೀಸರು ತಕ್ಷಣ ಕ್ರಮಕೈಗೊಳ್ಳುತ್ತಾರೆ” ಎಂದು ಸಚಿವರು ಹೇಳಿದ್ದಾರೆ.
