ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಶಾಂತಿ ಕದಡಲು ಬಿಜೆಪಿ ಷಡ್ಯಂತ್ರ ಹೂಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರಾ ಧರ್ಮಜಾ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿಯ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಬಿಜೆಪಿ ಷಡ್ಯಂತ್ರ ಹೂಡಿದೆ” ಎಂದು ಆರೋಪಿಸಿದರು.
“ಕುಶಾಲನಗರದ ಮಹಿಳೆಯೊಬ್ಬರನ್ನು ಪ್ರಚೋದನೆಗೊಳಪಡಿಸಿ, ಕೊಡಗು ಜಿಲ್ಲೆಯಲ್ಲಿ ಮತೀಯ ಕಿಚ್ಚು ಹತ್ತಿಸಿ ಶಾಂತಿ ಕದಡಲು ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿದ್ದು, ಪೋಲೀಸ್ ಇಲಾಖೆಯ ಸ್ಪಷ್ಟನೆಯಿಂದ ವಿಫಲವಾಗಿದೆ.
ಅಕ್ಟೋಬರ್ 25ರಂದು ಮಹಿಳೆಯ ಮನೆಗೆ ಹೋಗಿ ʼನಿಮ್ಮ ಮನೆ ವಕ್ಪ್ ಬೋರ್ಡ್ ಆಸ್ತಿಯಾಗಿದೆʼಯೆಂದು ಆಗುಂತಕರು ಬೆದರಿಸಿದ್ದಾಗಿ, ನವೆಂಬರ್ 6ರಂದು ಮಹಿಳೆ ಕೊಡವ ಸಮಾಜಕ್ಕೆ ದೂರು ಸಲ್ಲಿದ್ದಾರೆ. ನವೆಂಬರ್ 9ರಂದು ಮಾಜಿ ಸಂಸದ ಪ್ರತಾಪ್ ಸಿಂಹ ಪೊನ್ನಂಪೇಟೆಯಲ್ಲಿ ಸದರಿ ಮಹಿಳೆಯನ್ನು ಅಲ್ಲಿಗೆ ಕರೆಸಿ ಭಾವನಾತ್ಮಕವಾಗಿ ಪ್ರತಿಭಟನೆ ನಡೆಸಿ ಜಿಲ್ಲೆಯಲ್ಲಿ ಕಿಚ್ಚು ಹಚ್ಚಿಸಲು ಪ್ರಯತ್ನಿಸಿದ್ದಾರೆ” ಎಂದು ಆರೋಪಿಸಿದರು.
“ಪೊಲೀಸ್ ಇಲಾಖೆ ತನಿಖಾ ಪ್ರಕಟಣೆ ಹೊರಡಿಸಿದ್ದು, ʼಇದು ಸುಳ್ಳು ಪ್ರಕರಣʼವೆಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ರೂಪಿಸಿದ ಸಂಚು ವಿಫಲವಾಗಿದೆ” ಎಂದು ಲೇವಡಿ ಮಾಡಿದರು.
“ಪ್ರತಾಪ್ ಸಿಂಹ ತಮ್ಮ ದುರ್ನಡತೆಯಿಂದ ಅವರದ್ದೇ ಪಕ್ಷದಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ. ಇಂತಹವರು ಕೊಡಗಿನ ಶಾಸಕರ ಬಗ್ಗೆ ಮಾತನಾಡುವುದು ಮಾತ್ರವಲ್ಲ, ಕೊಡಗು ಜಿಲ್ಲೆಗೆ ಬರುವ ಅಗತ್ಯವೂ ಇಲ್ಲ” ಎಂದು ಕಿಡಿಕಾರಿದರು.
“2014ರಿಂದಲೇ ಬಿಜೆಪಿ ತನ್ನ ರಾಷ್ಟ್ರೀಯ ಪ್ರಣಾಳಿಕೆಯಲ್ಲಿ ಮುಸಲ್ಮಾನರ ಓಲೈಕೆಗಾಗಿ ವಕ್ಪ್ ಜಮೀನು ವಶಪಡಿಸುವಿಕೆ, ಉರ್ದು ಭಾಷೆಗೆ ಪ್ರೋತ್ಸಾಹ, ಅಂತರ್ಜಾತಿ ವಿವಾಹಗಳನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ಆಶ್ವಾಸನೆ ನೀಡಿದೆ” ಎಂದು ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರದರ್ಶನ ಮಾಡಿದ ಧರ್ಮಜ ಉತ್ತಪ್ಪ, ಬಿಜೆಪಿಯವರ ದ್ವಂದ ನಿಲುವನ್ನು ಪ್ರಶ್ನೆ ಮಾಡಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ, “ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಗಿದ್ದು, ಅದನ್ನೇ ಬುಡಮೇಲು ಮಾಡಲು ಈಗ ಬಿಜೆಪಿ ಹಿಂದೂ ಮುಸ್ಲಿಂ ಭಾಂದವ್ಯದ ನಡುವೆ ದ್ವೇಷ ಬಿತ್ತುವ ಮೂಲಕ ಸಮ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಜನರು ಜಾಗೃತರಾಗಿ ಇಂತಹ ಸಮಾಜ ದ್ರೋಹಿಗಳನ್ನು ಧಿಕ್ಕರಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ, ಕಾನೂನು ಜ್ಞಾನ ಎಲ್ಲರಿಗೂ ಅತ್ಯಗತ್ಯ: ನ್ಯಾ. ಶುಭ
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, “2010ರಲ್ಲಿ ಅಂದಿನ ಬಿಜೆಪಿ ಸರ್ಕಾರ ಅನ್ವರ್ ಮಾನಂಪಾಡಿಯವರಿಂದ ವಕ್ಪ್ ಆಸ್ತಿಯ ವಶಪಡಿಕೆ ಬಗ್ಗೆ ವರದಿ ತಯಾರಿಸಿದೆ. 2012ರಲ್ಲಿ ವರದಿ ಸಿದ್ದಪಡಿಸಿದ 10 ವರ್ಷಗಳ ನಂತರ ಅಂದರೆ 2022ರಲ್ಲಿ ಅದನ್ನು ಸ್ವೀಕರಿಸಿದ ಪರಿಣಾಮ ರೈತರಿಗೆ ನೋಟಿಸ್ ಹೋಗುವಂತಾಯಿತು. ಇದೆಲ್ಲವನ್ನೂ ಮಾಡಿದ್ದು ಬಿಜೆಪಿ. ಈಗ ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಟಿ ಪಿ ರಮೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್ ಇದ್ದರು.