ಕನ್ನಡ ಭಾಷೆ ನಮ್ಮ ಹೃದಯದ ಭಾಷೆ. ಹಾಗೆಯೇ ಸಂವಹನದ ಭಾಷೆಯ ಜೊತೆಗೆ ಅನ್ನದ ಭಾಷೆಯೂ ಆಗಿದೆ. ನಮ್ಮ ಭಾವನೆ ಮತ್ತು ವಿಚಾರಗಳ ಪರಿಣಾಮಕಾರಿ ಅಭಿವ್ಯಕ್ತಿಗೆ ಸಹಕಾರಿಯಾದ ಪ್ರಬಲ ಮಾಧ್ಯಮವೂ ಆಗಿದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ಮೈಸೂರು ನಗರದ ದೇವರಾಜ ಮೊಹಲ್ಲಾದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅದಮ್ಯ ರಂಗಶಾಲೆಯ ವತಿಯಿಂದ ನಡೆದ ಪಿಯುಸಿ ಪಠ್ಯಾಧಾರಿತ ರಂಗ ಪ್ರದರ್ಶನದಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ‘ಅದಮ್ಯ ಕನ್ನಡ ಪ್ರೇಮಿ – ಚಿಗುರು ಪ್ರತಿಭಾ ಪುರಸ್ಕಾರ’ ಪ್ರದಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅನಾದರ ಭಾವವನ್ನಾಗಲಿ, ಕೀಳರಿಮೆಯ ಭಾವವನ್ನಾಗಲಿ ಬೆಳಸಿಕೊಳ್ಳಬಾರದು. ಬದಲಿಗೆ ‘ನಮ್ಮ ಬದುಕನ್ನು ಕಟ್ಟಿಕೊಡುವ ಭಾಷೆ’ ಎಂಬ ಪ್ರೀತಿ ಮತ್ತು ಅಭಿಮಾನವಿಟ್ಟುಕೊಳ್ಳಬೇಕು. ದಿನನಿತ್ಯದ ಎಲ್ಲಾ ರೀತಿಯ ಸಂವಹನವನ್ನು ಕನ್ನಡ ಭಾಷೆಯಲ್ಲಿಯೇ ಮಾಡಬೇಕು. ಆಗ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಹೇಳಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಒಂದು ತಲೆಮಾರಿನ ಅನುಭವಗಳಿರುತ್ತವೆ. ಇಂತಹ ಪುಸ್ತಕಗಳನ್ನು ಓದುವ ಮೂಲಕ ಅದನ್ನು ತಮ್ಮದಾಗಿಸಿಕೊಂಡು, ಜ್ಞಾನವನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ. ಅದರೊಂದಿಗೆ ಕನ್ನಡ ದಿನಪತ್ರಿಕೆಗಳನ್ನೂ ಓದುವ ಹವ್ಯಾಸ ಮೈಗೂಡಿಸಿಕೊಂಡು ಮುನ್ನಡೆದಾಗ ಪ್ರಚಲಿತ ವಿಷಯ ಜ್ಞಾನ ಲಭಿಸಲು ಸಾಧ್ಯ. ಆದ್ದರಿಂದ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಉಪನ್ಯಾಸಕ ಎಂ. ಬಾಲರಾಜ್ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಎಂಬ ಹಿರಿಮೆಯನ್ನು ಹೊಂದಿದೆ. ಇಲ್ಲಿ ಸಾಹಿತಿಗಳು, ವಿಚಾರವಂತರು, ಮೇಧಾವಿಗಳು, ಬುದ್ಧಿಜೀವಿಗಳಿದ್ದಾರೆ. ಅವರ ಒಡನಾಟವನ್ನು ವಿದ್ಯಾರ್ಥಿಗಳು ಹೊಂದುವ ಮೂಲಕ, ತಾವು ಅವರಂತೆಯೇ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ‘ಬುಲ್ಡೋಜರ್ ನ್ಯಾಯ’ ನಿಷೇಧ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ರಮಾನಂದ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಜಿ. ಮಹೇಶ್, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಹಾಗೂ ಕಾಲೇಜಿನ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಥಮ ಪಿಯುಸಿಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿನಿಯರಾದ ಆರ್. ಅಮೃತಾ, ಸಂಜನಾ ಮತ್ತು ಮಾನಸ ಅವರಿಗೆ ‘ಅದಮ್ಯ ಕನ್ನಡ ಪ್ರೇಮಿ – ಚಿಗುರು ಪ್ರತಿಭಾ ಪುರಸ್ಕಾರ’ ಪ್ರದಾನ ಮಾಡಲಾಯಿತು.