ಹೊನವಾಡದಲ್ಲಿ ಮುಸ್ಲಿಮ್ ದ್ವೇಷದ ಬೀಜ ನೆಟ್ಟು ರಾಜ್ಯಾದ್ಯಂತ ಬೆಳೆ ತೆಗೆಯುವ ಬಿಜೆಪಿ ಹುನ್ನಾರ

Date:

Advertisements

ವಿಜಯಪುರ ಜಿಲ್ಲೆಯ ಇತರೆಡೆ 124 ನೋಟಿಸ್‌ಗಳನ್ನು ನೀಡಿರುವುದು ಹೌದಾದರೂ ಹೊನವಾಡ ಗ್ರಾಮದಲ್ಲಿ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧದ ದಾಖಲೆಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ತುಕಾರಾಂ ಧಡ್ಕೆ ಅವರೂ ಈ ವಿಷಯವನ್ನು ‘ದಿ ಹಿಂದೂ’ ಪತ್ರಿಕೆಗೆ ಖಚಿತಪಡಿಸಿದ್ದಾರೆ. (ವರದಿ- ಹೃಷಿಕೇಶ ಬಹದ್ದೂರ ದೇಸಾಯಿ)

ಎಲ್ ಡೊರ್ಯಾಡೋ (El Dorado)ಎಂಬುದು ದಕ್ಷಿಣ ಅಮೆರಿಕದಲ್ಲೆಲ್ಲೋ ಅಸ್ತಿತ್ವದಲ್ಲಿ ಇದ್ದಿರಬಹುದಾದ ಪೌರಾಣಿಕ ಚಿನ್ನದ ನಗರ. ಈ ನಗರದ ರಾಜ ಅತ್ಯಂತ ಸಿರಿವಂತ. ಅಡಿಯಿಂದ ಮುಡಿಯವರೆಗೆ ಚಿನ್ನದ ಪುಡಿಯಲ್ಲೇ ಮೈಮುಚ್ಚಿಕೊಳ್ಳುತ್ತಿದ್ದನಂತೆ. ಅವನ ಹೆಸರು ಎಲ್ ಡೊರ್ಯಾಡೋ. ಅವನದೇ ಹೆಸರನ್ನು ನಗರಕ್ಕೂ ಇಟ್ಟರಂತೆ.
 
ಹೊನವಾಡ ಎಂಬುದು ಚಿನ್ನದಿಂದ ಕೂಡಿದ ಊರು ಎಂಬರ್ಥ ಬರುತ್ತೆ. ಯಾಕೆಂದರೆ ಊರಿನ ಆರಂಭವೇ ಹೊನ್ನಿನಿಂದ ಇದೆ. ಕನ್ನಡದಲ್ಲಿ ‘ಹೊನ್ನು’ ಎಂದರೆ ಚಿನ್ನ, ಸಂಪತ್ತು ಎಂಬ ಅರ್ಥ ಬರುತ್ತದೆ  ಆದರೆ,  ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿರುವ ಈ ಹೊನವಾಡ ಊರಿನ ಪರಿಸ್ಥಿತಿಗೂ ಅದರ ಹೆಸರಿಗೂ ಒಂದಕ್ಕೊಂದು ಸಂಬಂಧ ಇಲ್ಲ. ಈ ಊರಿನ ಬಹುಪಾಲು ಜನ ಆತಂಕಿತರಾಗಿದ್ದಾರೆ. ತಮ್ಮ ಊರಿನ ಹೆಸರು ಯಾಕೆ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ ಎಂದು ಮಾತಾಡಲು ಮುಂದೆ ಬರುವವರು ಕೆಲವೇ ಕೆಲವರು.

‘ಹೊನವಾಡದ 1500 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ವಕ್ಫ್ ಮಂಡಳಿ ಸಂಚು ಹೂಡಿದೆ’ ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ ಇತ್ತೀಚೆಗೆ ಆಪಾದಿಸಿದರು.

Advertisements

“ರೈತರು ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನುಗಳು‌‌. ಜಮೀನಿನ ಒಡೆತನದ ಎಲ್ಲ ದಾಖಲೆಗಳೂ ಈ ರೈತರ ಬಳಿ ಇವೆ. ಆದರೂ ನೂರಾರು ರೈತರಿಗೆ ನೋಟಿಸ್ ಜಾರಿ ಮಾಡಿದ್ದು, ಅವುಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಕರ್ನಾಟಕದಲ್ಲಿನ ಇಂತಹ ಎಲ್ಲ ರೈತರಿಗೆ ವಕ್ಫ್ ಮಂಡಳಿ ವಿರುದ್ಧ ಉಚಿತವಾಗಿ ಕಾನೂನು ನೆರವು ಒದಗಿಸಲು ತಮ್ಮ ಕಚೇರಿಯ ಬಾಗಿಲುಗಳು ಸದಾ ತೆರೆದಿವೆ” ಎಂದು ವಕೀಲರೂ ಆಗಿರುವ ತೇಜಸ್ವಿ ಸೂರ್ಯ ಹೇಳಿದ್ದರು.

ಆದರೆ, ಕೈಗಾರಿಕಾ ಸಚಿವ ಮತ್ತು ಹೊನವಾಡದ ಬಬಲೇಶ್ವರ ಕ್ಷೇತ್ರದ ಶಾಸಕರಾದ ಎಂ.ಬಿ. ಪಾಟೀಲ್‌ ಅವರು ಸೂರ್ಯ ಅವರ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಹೊನವಾಡ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಜಿಲ್ಲೆಯ ಇತರೆಡೆ 124 ನೋಟಿಸ್‌ಗಳನ್ನು ನೀಡಿರುವುದು ಹೌದಾದರೂ ಹೊನವಾಡ ಗ್ರಾಮದಲ್ಲಿ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧದ ದಾಖಲೆಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ತುಕಾರಾಂ ಧಡ್ಕೆ ಅವರೂ ಈ ವಿಷಯವನ್ನು ‘ದಿ ಹಿಂದೂ’ ಪತ್ರಿಕೆಗೆ ಖಚಿತಪಡಿಸಿದ್ದಾರೆ.

“ಕಳೆದ ಕೆಲವು ದಿನಗಳಲ್ಲಿ ಹೊನವಾಡದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ, ಬಿಜೆಪಿಯೊಂದಿಗೆ ಹಾಗೂ ನಮ್ಮ ಗ್ರಾಮದ ಹಿರಿಯರೊಂದಿಗೆ ಒಟ್ಟು ಮೂರು ಸಭೆಗಳನ್ನು ನಡೆಸಿದ್ದೇವೆ. ಈ ಸಂದರ್ಭದಲ್ಲಿ ಇಲ್ಲಿನ ಯಾವುದಾದರೂ ರೈತರಿಗೆ ನೋಟಿಸ್ ಬಂದಿದ್ದರೆ ತೋರಿಸಲು ಕೇಳಿಕೊಂಡಿದ್ದೇವೆ, ಆದರೆ ಇಲ್ಲಿನ ಯಾರಿಗೂ ನೋಟಿಸ್‌ ಲಭಿಸಿಲ್ಲವಾದ್ದರಿಂದ ಯಾರೂ ಮುಂದೆ ಬಂದಿಲ್ಲ. ವಿಜಯಪುರದ ತಕ್ಕೆ ಪ್ರದೇಶದ ಹೆಸರಲ್ಲಿ ಹೊನವಾಡ ಎಂದು ತಪ್ಪಾಗಿ ಆವರಣದಲ್ಲಿ ನಮೂದಿಸಿರುವುದು ಎಲ್ಲ ಗೊಂದಲಗಳ ಮೂಲ ಎಂದು ಪಾಟೀಲ್ ಆರೋಪಿಸಿದ್ದಾರೆ.

honaawada 1

ಹೊನವಾಡ ಗ್ರಾಮದಲ್ಲಿ ಸಿದ್ದರಾಮಯ್ಯ ಸರ್ಕಾರ ಯಾವುದೇ ಮ್ಯುಟೇಶನ್ ಮಾಡಿಲ್ಲ ಎಂಬ ಪಾಟೀಲ್ ಹೇಳಿಕೆಯನ್ನು ತೇಜಸ್ವಿ ಸೂರ್ಯ ಅಲ್ಲಗಳೆದಿದ್ದಾರೆ. 9.14 ಎಕರೆ ಭೂಮಿಯನ್ನು ಮ್ಯುಟೇಶನ್ ಮಾಡಲಾಗಿದೆ ಎಂದು ಹಿಡುವಳಿ ಮತ್ತು ಬೆಳೆಗಳ (ಆರ್‌ಟಿಸಿ) ದಾಖಲೆಗಳ ಚಿತ್ರವನ್ನು ಹಂಚಿಕೊಳ್ಳುವ ಮೂಲಕ 9.14 ಎಕರೆ ಸ್ಮಶಾನ ಭೂಮಿಯನ್ನು ರಾಜ್ಯ ಸರ್ಕಾರವು ರೂಪಾಂತರಗೊಳಿಸಿದೆ ಎಂದು ಆರೋಪಿಸಿದ್ದಾರೆ.  ಆದರೆ, ಈ ಮ್ಯುಟೇಷನ್ ಆದದ್ದು 2022ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ ಎಂದು ಪಾಟೀಲ್‌ರವರು  ಪ್ರತ್ಯುತ್ತರ ನೀಡಿದ್ದರು‌.

ವಿಷಯವೇನೆಂದರೆ, ಹೊನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 1,100 ಎಕರೆಗಳಿಗೂ ಕಡಿಮೆ ಕೃಷಿ ಭೂಮಿ ಸುಮಾರು 900 ಕುಟುಂಬಗಳಿಗೆ ಸೇರಿದೆ. 2020ರ ಗೆಜೆಟ್ ನಲ್ಲಿ ನಮೂದಿಸಲಾಗಿರುವ ಪ್ರಕಾರ ಈ ಗ್ರಾಮದಲ್ಲಿನ ವಕ್ಫ್ ಭೂಮಿ 14 ಎಕರೆಗಳು ಮಾತ್ರ.

ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ಮಾತ್ರವೇ 124 ನೋಟಿಸ್‌ಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಬೇರೆ ಎಲ್ಲಿಯೂ ಒಂದೇ ಒಂದು ನೋಟಿಸ್ ನೀಡಿಲ್ಲ. ಆದರೆ, 21,000ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ ಎಂಬ ಬಿಜೆಪಿ  ಆರೋಪ ಸುಳ್ಳು ಎಂದು ಜಮೀರ್ ಹೇಳಿದ್ದಾರೆ. ಜನರ ಕುಂದುಕೊರತೆಗಳನ್ನು ಆಲಿಸಲು ಹಾಗೂ ಒತ್ತುವರಿ ತೆರವಿಗೆ ನಾನಾ ಜಿಲ್ಲೆಗಳಲ್ಲಿ 10 ವಕ್ಫ್ ಅದಾಲತ್‌ಗಳನ್ನು ನಡೆಸಿದ್ದೇವೆ. ಈ ಅದಾಲತ್‌ಗಳು  ಯಾವತ್ತೂ ರೈತರ ವಿರುದ್ಧವಲ್ಲ, ಆದರೆ ಅತಿಕ್ರಮಣಗಳನ್ನು ತೆರವುಗೊಳಿಸುವ ಗುರಿಯನ್ನು ಹೊಂದಿವೆ. ಒಟ್ಟು ವಕ್ಫ್‌ ಆಸ್ತಿಯ ಹೆಚ್ಚಿನ ಪಾಲು ವಿಜಯಪುರದಲ್ಲೇ ಇರುವುದರಿಂದ ನೋಟಿಸ್ ನೀಡಿದ್ದೇವೆ.‌ ಬಿಜೆಪಿ ಸರ್ಕಾರವು ತನ್ನ ಅಧಿಕಾರವಧಿಯಲ್ಲಿ ರೈತರಿಗೆ ಯಾವುದೇ ನೋಟಿಸ್‌ ನೀಡದೇ 140ಕ್ಕೂ ಹೆಚ್ಚು ಮ್ಯುಟೇಶನ್ ಮಾಡಿದೆ ಎಂದು ಅವರು ಹೇಳಿದ್ದಾರೆ.

ಮಾಡಿದ್ದು ಯಾರು?

ಬೆಳಗಾವಿ ಜಿಲ್ಲೆಯಲ್ಲಿ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಅಣ್ಣಾ ಸಾಹೇಬ್ ಜೊಲ್ಲೆ ತಮ್ಮ ಜಮೀನನ್ನು ವಕ್ಫ್ ಮಂಡಳಿ ತನ್ನದೆಂದು ಹಕ್ಕು ಸಾಧಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಗೆ ಹಕ್ಕುಪತ್ರವನ್ನೂ ನೀಡಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತನ್ನ ಆರ್‌ಟಿಸಿಯ ಕಾಲಂ II ರಲ್ಲಿ ಮಂಡಳಿಯ ಹೆಸರನ್ನು ನಮೂದಿಸಿದೆ ಎಂದು ಅವರು ಆರೋಪಿಸಿದ್ದಾರೆ. ಜೊಲ್ಲೆ ಜಮೀನನ್ನು ವಕ್ಫ್ ಹೆಸರಿಗೆ ಮ್ಯುಟೇಷನ್ ಮಾಡಿರುವುದು 2021ರಲ್ಲಿ. ಆಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎಂದು ಪತ್ರಕರ್ತರು ಸೂಚಿಸಿದಾಗ, ಅವರು “ಪತ್ರಿಕಾಗೋಷ್ಠಿಗೆ ಕೆಲವೇ ಗಂಟೆಗಳ ಮೊದಲು ಅದನ್ನು ಗಮನಿಸಿದ್ದೇನೆ” ಎಂದು ಒಪ್ಪಿಕೊಂಡಿದ್ದರು.

“ಕಾಲಂ ಎರಡರಲ್ಲಿ ಕ್ಲೈಮ್‌ಗಳನ್ನು ಸೇರಿಸುವ ಸೂಚನೆಗಳು ಮತ್ತು ಎಚ್ಚರಿಕೆಯ ಮ್ಯುಟೇಶನ್‌ಗಳನ್ನು 1995ರಿಂದ ಮಾಡಲಾಗುತ್ತಿದೆ. ಪ್ರತಿ ವರ್ಷ “ಸರಾಸರಿ 100-200 ನೋಟಿಸ್‌ಗಳನ್ನು ನೀಡಲಾಗಿದೆ ಮತ್ತು ಕಾಲಂ ಎರಡರಲ್ಲಿ ಪ್ರತಿ ವರ್ಷ ಸುಮಾರು 50 ಮ್ಯುಟೇಶನ್‌ಗಳು ಸೇರಿಸಲಾಗುತ್ತದೆ” ಎಂದು ಕಂದಾಯ ಆಯುಕ್ತರ ಕಚೇರಿಯ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 1.12 ಲಕ್ಷ ಎಕರೆ ವಕ್ಫ್ ಭೂಮಿ ಇದೆ. ಇವುಗಳಲ್ಲಿ 75,000 ಎಕರೆ ಭೂಸುಧಾರಣೆ ಮತ್ತು ಇನಾಮ್ ರದ್ದು ಕಾಯ್ದೆಗಳ ಅಡಿಯಲ್ಲಿ ನಷ್ಟವಾಗಿದೆ. ಅವುಗಳನ್ನು ಭೂರಹಿತ ರೈತರು ಮತ್ತು ಗೇಣಿದಾರರಿಗೆ ವಿತರಿಸಲಾಯಿತು. ಉಳಿದಂತೆ ಅಂದಾಜು ಸುಮಾರು 20 ಸಾವಿರ ಎಕರೆ ಒತ್ತುವರಿಯಾಗಿದೆ ಎಂದು ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

21,767 ಆರ್‌ಟಿಸಿಗಳ ಮ್ಯುಟೇಷನ್ ಮಾಡಲು ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರ ಕಚೇರಿಯಿಂದ ಬಂದ ಪತ್ರದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇವೆಲ್ಲವೂ ವಕ್ಫ್ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದ ಪ್ರಕರಣಗಳು. ಆದಾಗ್ಯೂ, ಅವುಗಳನ್ನು ಏಕಪಕ್ಷೀಯವಾಗಿ ಮ್ಯುಟೇಷನ್ ಮಾಡಲಾಗುವುದಿಲ್ಲ. ಸೂಕ್ತ ಕಾನೂನುಬದ್ಧ ಕಾರ್ಯವಿಧಾನವನ್ನು ಅನುಸರಿಸಿ ಮಾಡಬೇಕಾಗಿದೆ. ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಆದರೆ, ರೈತರು ಮತ್ತು ವಿರೋಧ ಪಕ್ಷಗಳ ಪ್ರತಿರೋಧದ ನಂತರ ನಿಲ್ಲಿಸಲಾಗಿದೆ ” ಎಂದು ಮತ್ತೊಬ್ಬ ಕಂದಾಯ ಅಧಿಕಾರಿ ಹೇಳಿದ್ದಾರೆ.

Anwar Honawada
ಅನ್ವರ್ ಬಾಗವಾನ್

ನವೆಂಬರ್ 13ರಂದು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನೀಡಲಾಗಿದ್ದ ಎಲ್ಲಾ ನೋಟಿಸ್‌ಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೂ, ಬಿಜೆಪಿಯ ಪ್ರತಿಭಟನೆ ಮುಂದುವರೆದಿದೆ.

ಹೊನವಾಡದಲ್ಲಿ ಕೋಪ ಮತ್ತು ಭಯದ ಮನಸ್ಥಿತಿ ನೆಲೆಸಿದೆ. “ಹೊನವಾಡದಲ್ಲಿ ಹಿಂದೂಗಳ ಕೃಷಿ ಭೂಮಿಯನ್ನು ಮುಸ್ಲಿಮರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಇದು ನಿಜವಲ್ಲ ಎಂಬುದು ಗ್ರಾಮದ ನಮ್ಮ ಹಿಂದೂ ಸಹೋದರರಿಗೂ ತಿಳಿದಿದೆ. ಆದರೆ ಹೊರಗಿನವರು ನಾವು ಭೂಗಳ್ಳರೆಂದು ಭಾವಿಸುತ್ತಿದ್ದಾರೆ. ಹೊರಗಿನವರಿಗೆ ಮನವರಿಕೆ ಮಾಡುವುದು ಕಷ್ಟ” ಎಂದು ಗ್ರಾಮದ ಸಣ್ಣ ರೈತ ಮತ್ತು ಹಣ್ಣಿನ ವ್ಯಾಪಾರಿ ಅನ್ವರ್ ಬಾಗವಾನ್ ಹೇಳುತ್ತಾರೆ. ಈ ಗ್ರಾಮದಲ್ಲಿ ಮುಸಲ್ಮಾನರ ಸಂಖ್ಯೆ ಸುಮಾರು 12 ಸಾವಿರದಷ್ಟಿದ್ದು, ಈ ಪೈಕಿ ಮತದಾರರ ಸಂಖ್ಯೆ 1,700.

ಹೊನವಾಡ
ಮೆಹಬೂಬ್ ಸುಭಾನಿಯವರ ದರ್ಗಾ

ಈಗ ಕುಖ್ಯಾತಗೊಳಿಸಲಾಗಿರುವ ಸ್ಮಶಾನ ಅಥವಾ ಕಬರಸ್ತಾನ್ ಗ್ರಾಮದ ಇನ್ನೊಂದು ಬದಿಯಲ್ಲಿದೆ. ಇದು ಎಲ್ಲ ಧರ್ಮಗಳ ಅನುಯಾಯಿಗಳನ್ನು ಹೊಂದಿರುವ ಮಧ್ಯಕಾಲೀನ ಯುಗದ ಸೂಫಿ ಸಂತ ಮೆಹಬೂಬ್ ಸುಭಾನಿಯವರ ದರ್ಗಾ. ಈ ದರ್ಗಾದ ಸುತ್ತಮುತ್ತಲ ಒಟ್ಟು 23 ಎಕರೆ ಭೂಮಿಯಲ್ಲಿ ಸುಮಾರು ಎಂಟು ಸ್ಮಶಾನಗಳಿವೆ. ಈ 23 ಎಕರೆಯಲ್ಲಿ ಎಲ್ಲ ಎಂಟು ಪ್ರಮುಖ ಸಮುದಾಯಗಳು ತಮ್ಮ ತಮ್ಮಲ್ಲಿ ಸತ್ತವರನ್ನು ಹೂಳುತ್ತಾರೆ ಅಥವಾ ಸುಡುತ್ತಾರೆ. ಲಿಂಗಾಯತರು ಮತ್ತು ಕುರುಬರಂತೆ ಪ್ರಭಾವ ಹೊಂದಿರುವ ಸಮುದಾಯಗಳು ತಮ್ಮ ಸ್ಮಶಾನಗಳಿಗೆ ಬೇಲಿ ಹಾಕಿಕೊಂಡಿವೆ.

ಈ 23 ಎಕರೆಯಲ್ಲಿ 9.14 ಎಕರೆ ಮಾತ್ರ ವಕ್ಫ್ ಮಂಡಳಿಯ ಆಸ್ತಿಯಾಗಿ ಉಳಿದಿದೆ ಎಂದು ಗೆಜೆಟ್ ಸಾರುತ್ತದೆ ಆದರೆ. ಈ 9.14 ಎಕರೆಗಳಲ್ಲಿ ಅರ್ಧದಷ್ಟು ಮಾತ್ರ ಮುಸ್ಲಿಮರಿಗೆ ಹೂಳಲು ಸ್ಮಶಾನ ಭೂಮಿಯಾಗಿ ಲಭ್ಯವಿದೆ. ಉಳಿದಂತೆ ಒಂದೆಡೆ ಗ್ರಾಮ ಪಂಚಾಯಿತಿ ನಿರ್ಮಿಸಿದ ಧೋಬಿ ಘಾಟ್, ಇನ್ನೊಂದೆಡೆ ಗ್ರಾಮದ ರಸ್ತೆ, ಮತ್ತೊಂದೆಡೆ ಮಹಿಳೆಯರಿಗಾಗಿ ಬಯಲು ಶೌಚ ಭೂಮಿಯಾಗಿ ವಕ್ಫ್‌ ಆಸ್ತಿಯನ್ನು ಮೂರು ಕಡೆ ಒತ್ತುವರಿ ಮಾಡಲಾಗಿದೆ.

“ಕಬರಸ್ತಾನದ ಜಮೀನಾಗಿ 4.5 ಎಕರೆ ಈಗ ಉಳಿದಿದೆ. ಆದರೆ ಈ ಭಾಗಕ್ಕೂ ಬೇಲಿ ಹಾಕಲು ಮತ್ತು ರಕ್ಷಿಸಲು ಕೆಲವು ಗ್ರಾಮಸ್ಥರು ನಮಗೆ ಅವಕಾಶ ನೀಡುತ್ತಿಲ್ಲ” ಎಂದು ಸಾರ್ವಜನಿಕ ಭೂಮಿಯನ್ನು ಕಾಪಾಡುವ ಅಂಜುಮನ್ ಸಮಿತಿಯ ಸದಸ್ಯ ಫಕ್ರುದ್ದೀನ್ ಮುಲ್ಲಾ ಹೇಳುತ್ತಾರೆ.

Fakruddin
ಫಕ್ರುದ್ದೀನ್ ಮುಲ್ಲಾ

ಫಕ್ರುದ್ದೀನ್ ಮುಲ್ಲಾ ಖುದ್ದು ಬಿಜೆಪಿ ಮುಖಂಡ. ತಮ್ಮ ಪೂರ್ವಜರ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. 1990ರ ದಶಕದವರೆಗೂ ಹಿಂದೂ-ಮುಸ್ಲಿಮರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. “ಆದರೆ ಬಾಬರಿ ಮಸೀದಿ ನೆಲಸಮದ ನಂತರ ಸಮಸ್ಯೆಗಳು, ಗಲಭೆಗಳು ಪ್ರಾರಂಭವಾದವು” ಎಂದು ಅವರು ಹೇಳುತ್ತಾರೆ, ಮೊದಲಿನಿಂದಲೂ ಇದುವರೆಗೆ ನಡೆಯುತ್ತಾ ಬಂದಿರುವ ಮಾತಿನ ಚಕಮಕಿಗಳ ನಡುವೆ ತಾನು ಮಧ್ಯಪ್ರವೇಶಿಸಿ ರಾಜಿ ಮಾಡಿಸಲು ಮುಂದಾಗಿದ್ದೇನೆ” ಎನ್ನುತ್ತಾರೆ.

ವಕ್ಫ್ ಬೋರ್ಡ್ ನೋಟಿಸ್ ನೀಡಿಕೆಯ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಹೊನವಾಡದಿಂದ ಆರಂಭವಾದ ಅಭಿಯಾನ ಇದೀಗ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಕಲಬುರಗಿ, ಬೀದರ್, ಶಿವಮೊಗ್ಗ ಮತ್ತು ಇತರ ಹಲವು ಜಿಲ್ಲೆಗಳ ರೈತರೂ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ, ಏಕೆಂದರೆ ಅವರ ಆರ್‌ಟಿಸಿಗಳಲ್ಲಿ ಈಗ “ವಕ್ಫ್ ಆಸ್ತಿ, ವಹಿವಾಟು ನಿಷೇಧಿಸಲಾಗಿದೆ” ಎಂಬ ಉಲ್ಲೇಖವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಇದು ರಾಜ್ಯದಾದ್ಯಂತ ರೈತರಿಗೆ ತಮ್ಮ ಆರ್‌ಟಿಸಿಗಳನ್ನು ಪರಿಶೀಲಿಸಲು ಮತ್ತು ಸಂಬಂಧಪಟ್ಟ ಡೆಪ್ಯೂಟಿ ಕಮಿಷನರ್‌ಗಳಿಗೆ ದೂರು ನೀಡಲು ಕಾರಣವಾಗುತ್ತಿದ್ದು, ದಿಗಿಲಿನ ವಾತಾವರಣವನ್ನು ಸೃಷ್ಟಿಸಿದೆ. 

ಸದಾ ತೀವ್ರ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುವ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಕೆಲ ವಾರಗಳ ಹಿಂದೆ ಬಿಜೆಪಿಯಿಂದ ವಿಜಯಪುರದಲ್ಲಿ ವಕ್ಫ್ ವಿರೋಧಿ ರ್‍ಯಾಲಿಯನ್ನು ಆಯೋಜಿಸಿದ್ದರು, ಅಲ್ಲಿ ಹಲವಾರು ಮುಖಂಡರು ವಕ್ಫ್ ಮಂಡಳಿಯನ್ನು ರದ್ದುಗೊಳಿಸುವಂತೆ ಮತ್ತು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ವಕ್ಫ್ ಆಸ್ತಿಯನ್ನು “ಅಲ್ಲಾಹನ ಆಸ್ತಿ” ಎಂದು ವಿವರಿಸಿದ್ದಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಜಮೀರ್ ಅವರನ್ನು ಖಂಡಿಸಿದ್ದರು. ಬಿಜೆಪಿ ನಾಯಕರು ವಕ್ಫ್ ಮಂಡಳಿ ನೋಟಿಸ್ ನೀಡಿಕೆಯನ್ನು “ಲ್ಯಾಂಡ್ ಜಿಹಾದ್” ಎಂದು ಬಣ್ಣಿಸಿದ್ದರು.

ಈಗಾಗಲೆ ತೀವ್ರ ವಿವಾದಕ್ಕೆ ತುತ್ತಾಗಿರುವ 2024ರ ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿ ನೊಂದ ರೈತರನ್ನು ಭೇಟಿ ಮಾಡಿದ್ದರು. ರೈತರಿಗೆ ಅನ್ಯಾಯ ಆಗಲು ಕೇಂದ್ರ ಎನ್.ಡಿ.ಎ. ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ‘ವಕ್ಫ್ ಕಾಯ್ದೆಯ ನಿಯಮಗಳು ದುರುಪಯೋಗವಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ತಿದ್ದುಪಡಿ ಮಸೂದೆಯನ್ನು ತರುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದು ಸೂರ್ಯ ಜೆಪಿಸಿಗೆ ಪತ್ರ ಬರೆದು ಭೇಟಿ ನೀಡುವಂತೆ ಒತ್ತಾಯಿಸಿದ ನಂತರ ನಡೆದ ಪ್ರಕ್ರಿಯೆಯಾಗಿತ್ತು.

ಅಥಣಿ ಮೂಲದ ವಕೀಲ ಸಂಪತ್ ಕುಮಾರ್ ಶೆಟ್ಟಿ ಅವರು ‘ವಕ್ಫ್ ಸಮಸ್ಯೆಯಿಂದ ಸಂತ್ರಸ್ತರಾದ’ ರೈತರ ಪರ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. “ನಾನು ಈಗ ಸುಮಾರು 20 ರೈತರ ಭೂ ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಹೆಚ್ಚಿನದನ್ನು ಹುಡುಕುತ್ತೇನೆ ಮತ್ತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇನೆ” ಎಂದು ಅವರು ಹೇಳುತ್ತಾರೆ. ಶೆಟ್ಟಿ ಅವರು ಪಡೆದಿರುವ ಬಹುತೇಕ ಆರ್‌ಟಿಸಿಗಳು 2018-2023ರ ನಡುವೆ ಮ್ಯುಟೇಷನ್ ಆಗಿವೆ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ, ಅದನ್ನು ಯಾವ ಪಕ್ಷ ಮಾಡಿದೆ ಎಂಬುದು ಮುಖ್ಯವಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. 2018-2023ರ ನಡುವೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು ಎಂಬುದು ಇಲ್ಲಿ ಗಮನಾರ್ಹ.

“ಇಂತಹ ತಾರತಮ್ಯವನ್ನು ಅನುಮತಿಸುವ ವ್ಯವಸ್ಥೆಯೇ ಒಂದು ಸಮಸ್ಯೆಯಾಗಿದೆ. ನಮ್ಮ ಹೋರಾಟವು ವಕ್ಫ್ ಮಂಡಳಿಗೆ ನೀಡಲಾದ ಅನಿಯಂತ್ರಿತ ಮತ್ತು ಮಿತಿಮೀರಿದ ಅಧಿಕಾರಗಳ ವಿರುದ್ಧವಾಗಿದೆ, ವ್ಯತಿರಿಕ್ತ ಸ್ವಾಧೀನ ಹಕ್ಕುಗಳಿಂದ ವಿನಾಯಿತಿ, ಬಳಕೆ, ಮೌಖಿಕ ದೇಣಿಗೆಗಳು ಹಾಗೂ ಮಾಲೀಕತ್ವವನ್ನು ಸಾಬೀತುಪಡಿಸುವುದು ವಕ್ಫ್ ಅಲ್ಲದಿರುವ ಇತರರ ಜವಾಬ್ದಾರಿ ಎಂಬ ಅಂಶಗಳು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಯೋಗಿಕವಾಗಿ ರೂಪಿಸಿದ ವಕ್ಫ್ ಕಾಯಿದೆಗಳನ್ನು ತಿದ್ದುಪಡಿ ಮಸೂದೆಯು ಈ ಎಲ್ಲ ತಾರತಮ್ಯದ ನಿಬಂಧನೆಗಳನ್ನು ರದ್ದು ಮಾಡುತ್ತದೆ ಎಂಬುದು ನಮ್ಮ ನಿರೀಕ್ಷೆ” ಎನ್ನುತ್ತಾರೆ.

ಆದರೆ “ಬಿಜೆಪಿಯು ಮುಸ್ಲಿಮರ ವಿರುದ್ಧ ಪಿತೂರಿ ನಡೆಸುತ್ತಿದೆ” ಎಂದು ವಕೀಲ, ಆರ್‌ಟಿಐ ಕಾರ್ಯಕರ್ತ ಮತ್ತು ಕಾಂಗ್ರೆಸ್ ಕಾನೂನು ಕೋಶದ ಕಾರ್ಯದರ್ಶಿ ಭೀಮಗೌಡ ಪರಗೊಂಡ ಅವರು ಆರೋಪಿಸಿದ್ದಾರೆ. “ವಕ್ಫ್ ಬೋರ್ಡ್ ವಿಚಾರವು ಬಿಜೆಪಿಯ ಚುನಾವಣೆ ಮತ್ತು ಉಪಚುನಾವಣೆ ಪ್ರಚಾರದ ಒಂದು ಭಾಗವಾಗಿದೆ. ಇದು ಬಿಜೆಪಿಯ ಮುಸ್ಲಿಮ್ ದ್ವೇಷದ ಇಸ್ಲಾಮೋಫೋಬಿಕ್ ಪ್ರಚಾರವಲ್ಲದೆ ಬೇರೇನೂ ಅಲ್ಲ. ಆದರೆ, ಮುಖ್ಯಮಂತ್ರಿಗಳು ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳಲು ಮತ್ತು ಕಲಂ ಎರಡರ ಮ್ಯುಟೇಷನ್ ಗಳನ್ನು ರದ್ದುಗೊಳಿಸಲು ಆದೇಶ ನೀಡಿದ್ದಾರೆ” ಎಂದಿದ್ದಾರೆ. ಅಲ್ಲದೇ ವಕ್ಫ್ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರವನ್ನು ಹುಡುಕುವ ರೈತರಿಗೆ ಪರಗೊಂಡ ಸಹಾಯ ಮಾಡುತ್ತಿದ್ದಾರೆ.

Lawyer
ವಕೀಲ ಭೀಮಗೌಡ ಪರಗೊಂಡ

“ವಕ್ಫ್ ಬೋರ್ಡ್ ಮತ್ತು ವಕ್ಫ್ ನ್ಯಾಯಮಂಡಳಿಗಳು ಭಾರತೀಯ ಸಂವಿಧಾನದ ಮೂರನೆಯ ಭಾಗದಿಂದ ರಕ್ಷಿಸಲ್ಪಟ್ಟ ಶಾಸನಬದ್ಧ ಸಂಸ್ಥೆಗಳಾಗಿವೆ. ನೋಟಿಸ್‌ಗಳ ಸಮಸ್ಯೆ, ಆರ್‌ಟಿಸಿಗಳ ರೂಪಾಂತರದ ಮೂಲಕ ವಕ್ಫ್ ಮಂಡಳಿಯಿಂದ ಹಕ್ಕು ಸಾಧನೆ, ಕಾನೂನು ಮತ್ತು ಸರ್ಕಾರಿ ಕ್ರಮಗಳ ಮೂಲಕ ಅತಿಕ್ರಮಣಗಳ ತೆರವಿಗೆ ಕ್ರಮ ಕೈಗೊಳ್ಳುವುದು, ಮತ್ತು ಅದರ ಆಸ್ತಿಗಳನ್ನು ರಕ್ಷಿಸಲು ಮಂಡಳಿಯು ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸುವುದು ವಾಡಿಕೆಯ ಪ್ರಕ್ರಿಯೆಗಳಾಗಿವೆ.  ನೋಟಿಸ್ ನೀಡುವುದು ಮತ್ತು ಮ್ಯುಟೇಶನ್ ಮಾಡುವುದು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ, ಎಲ್ಲ ಕಾಲದಲ್ಲೂ, ಎಲ್ಲಾ ಪಕ್ಷಗಳ ಆಡಳಿತದಲ್ಲಿಯೂ ನಡೆದುಕೊಂಡು ಬರುತ್ತಿರುವ ವಾಡಿಕೆಯ ಪ್ರಕ್ರಿಯೆಯಾಗಿದೆ” ಎಂದು ಪರಗೊಂಡ ಹೇಳಿದರು.

“ಪ್ರತಿಕೂಲ ಸ್ವಾಧೀನ ಹಕ್ಕುಗಳಿಂದ ವಿನಾಯಿತಿ, ಕಾಲ್ಪನಿಕ ಮಾಲೀಕತ್ವ, ಬಳಕೆಯಿಂದ ಸೂಚಿತ ದೇಣಿಗೆ, ಮೌಖಿಕ ದೇಣಿಗೆ ಮತ್ತು ಇತರರಿಂದ ಮಾಲೀಕತ್ವವನ್ನು ಸಾಬೀತುಪಡಿಸುವ ಜವಾಬ್ದಾರಿಯಂತಹ ನಿಬಂಧನೆಗಳು ಎಲ್ಲಾ ರೀತಿಯ ಧಾರ್ಮಿಕ ಆಸ್ತಿಗಳಿಗೆ ರಕ್ಷಣೆ ನೀಡುತ್ತವೆ. ಕೇವಲ ಇಸ್ಲಾಮಿಕ್ ಮಾತ್ರವಲ್ಲ  ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳ ಆಸ್ತಿಪಾಸ್ತಿಗಳಿಗೂ ಈ ರಕ್ಷಣೆ ನೀಡಲಾಗಿದೆ. ಭಾರತೀಯ ಸೇನೆಯಂತಹ ಕೆಲವು ಸರ್ಕಾರಿ ಆಸ್ತಿಗಳಿಗೂ ಇಂತಹುದೇ ಕಾನೂನಾತ್ಮಕ ರಕ್ಷಣೆಗಳನ್ನು ಒದಗಿಸಲಾಗಿದೆ. ನಾವು ಒಂದು ಧರ್ಮಕ್ಕೆ ಒಂದು ಮತ್ತು ಇನ್ನೊಂದು ಧರ್ಮಕ್ಕೆ ಮತ್ತೊಂದು ಕಾನೂನು ಹೊಂದಲು ಸಾಧ್ಯವಿಲ್ಲ. ಹೀಗೆ ಬೇರೆ ಬೇರೆ ಕಾನೂನು ಹೊಂದುವುದು ಸಂವಿಧಾನ ವಿರೋಧಿಯಾದ, ತಾರತಮ್ಯದಿಂದ ಕೂಡಿದ ಹಾಗೂ ಮನಸೋ ಇಚ್ಛೆಯ ಕಾನೂನು ಎನಿಸಿಕೊಳ್ಳಲಿದೆ. ಆದ್ದರಿಂದಲೇ ಹಿಂದೂ ದೇವಾಲಯಗಳಿಗೆ ಸ್ವಾಯತ್ತತೆ ನೀಡಬೇಕು ಎಂದು ಹಿಂದುತ್ವದ ನಾಯಕರು ಮತ್ತು ಇಸ್ಲಾಮಿಕ್ ಸಂಸ್ಥೆಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಆಗ್ರಹಿಸುತ್ತಾರೆ. ಈ ವಾದ ಸರ್ವಥಾ ಸಮರ್ಥನೀಯವಲ್ಲ” ಎಂಬುದು ಪರಗೊಂಡ ಅವರ ಅನಿಸಿಕೆ. (ಕೃಪೆ-The Hindu)
ವಕ್ಫ್‌ ವಿವಾದ ಕುರಿತ ನಮ್ಮ ಎಲ್ಲ ಬರಹಗಳು ಈ ಲಿಂಕ್‌ನಲ್ಲಿ ಲಭ್ಯವಿದೆ… https://eedina.com/tag/waqf-property-controversy/

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X