ಈ ದಿನ ಸಂಪಾದಕೀಯ | ಮತ್ತೊಂದು ಮಹಾ ಮರಮೇಧಕ್ಕೆ ಕೇಂದ್ರದ ಅನುಮತಿ ಅಮಾನುಷ

Date:

Advertisements

ಆ ಪಕ್ಷ, ಈ ಪಕ್ಷ ಎಂಬ ಭೇದಭಾವವಿಲ್ಲದೆ ಎಲ್ಲ ಪಕ್ಷಗಳು- ಎಲ್ಲ ಸರ್ಕಾರಗಳೂ ಈ ಮರಮೇಧದ ನೆತ್ತರಿನಲ್ಲಿ ಕೈ ತೊಳೆದಿವೆ. ಕೆಲವು ಹೆಚ್ಚು, ಕೆಲವು ಕಡಿಮೆ ಅಷ್ಟೇ.

ಇಳೆಯ ಮೇಲೆ ಲಭ್ಯವಿರುವ ಶೇ.75ರಷ್ಟು ಸಿಹಿನೀರಿಗೆ ಅರಣ್ಯಗಳೇ ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಅಡವಿಗಳು ಗಾಳಿಯಲ್ಲಿನ ಮಾಲಿನ್ಯವನ್ನು ಸೋಸಿ ತೊಳೆಯುತ್ತವೆ. ವಿಷಾನಿಲಗಳಾದ ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್ ಹಾಗೂ ಅತಿ ಸೂಕ್ಷ್ಮ ಧೂಳಿನ ಕಣಗಳನ್ನು ಸೋಸಿ ಸ್ವಚ್ಛಗೊಳಿಸುತ್ತವೆ. ಸೌರಶಕ್ತಿಯನ್ನು ಹೀರಿ ತೇವಾಂಶವನ್ನು ಬಿಟ್ಟುಕೊಡುತ್ತವೆ. ಹೀಗಾಗಿಯೇ ಅರಣ್ಯಗಳ ಛತ್ರ ಛಾಯೆಗಳ ಅಡಿಯಲ್ಲಿನ ಉಷ್ಣಾಂಶ ನಗರಗಳಿಗಿಂತ ಅದೆಷ್ಟೋ ಪಾಲು ಕಡಿಮೆ ಇರುತ್ತದೆ. ಎರಡು ಸಾಧಾರಣ ಮನೆಗಳನ್ನು ತಂಪಾಗಿರಿಸಲು ಬಳಸಲಾಗುವ ಏರ್ ಕಂಡೀಷನರ್ ಸಾಧನಗಳಷ್ಟೇ ತಂಪನ್ನು ಅಡವಿಯಲ್ಲಿನ ಮರವೊಂದು ವಾತಾವರಣಕ್ಕೆ ಸೂಸುತ್ತದಂತೆ.

ಮಧ್ಯಭಾರತದ ಛತ್ತೀಸಗಢದ ಹಸದೇವ್ ಆರಂಡ್ ಘನದಟ್ಟ ಕಾನನ. ಏಷ್ಯಾದ ಶ್ವಾಸಕೋಶವೆಂದೇ ಪ್ರತೀತಿ. 1.70 ಲಕ್ಷ ಹೆಕ್ಟೇರುಗಳಲ್ಲಿ ಎದ್ದು ನಿಂತಿರುವ ಅಡವಿಯಿದು. ಗೊಂಡ್, ಓರಾನ್ ಮುಂತಾದ ಹಲವು ಆದಿವಾಸಿಗಳ ತವರು. ಸ್ಥಳೀಯ ಜನರ ಬದುಕಿನ ಶೇ.60-70ರಷ್ಟು ವರಮಾನದ ಮೂಲ. ಅಮೂಲ್ಯ ವನ್ಯಜೀವಿಗಳ ಧಾಮ. 1.369 ಶತಕೋಟಿ ಟನ್ನುಗಳಷ್ಟು ಕಲ್ಲಿದ್ದಿಲಿನ ಭಂಡಾರ ಇಲ್ಲಿದೆ. ಇದು ಖಚಿತವಾಗಿ ಕಂಡು ಹಿಡಿದಿರುವ ನಿಕ್ಷೇಪ. ಅಂದಾಜು ಮಾಡಲಾಗಿರುವ ಕಲ್ಲಿದ್ದಿಲು ನಿಕ್ಷೇಪ 5.179 ಶತಕೋಟಿ ಟನ್ನುಗಳು.

ಅಡವಿಯ ಅಡಿಯ ಭೂತಾಯಿಯ ಬಸಿರನ್ನು ಅಗೆದು ಅಲ್ಲಿನ ಈ ಸಮೃದ್ಧ ಕಲ್ಲಿದ್ದಿಲನ್ನು ಹೊರತೆಗೆದು ಲಾಭ ಗಳಿಸುವುದೇ ಈ ಮರಗಳ ಮಾರಣಹೋಮದ ಹಿಂದಿನ ಕಾರಣ. ಪ್ರಧಾನಿಯವರ ಮಿತ್ರ ಎಂದೇ ಹೆಸರಾಗಿರುವ ಗೌತಮ್ ಅದಾನಿ ಕಂಪನಿಗೆ ಕಲ್ಲಿದ್ದಿಲು ಗಣಿಗಾರಿಕೆ ಗುತ್ತಿಗೆಯನ್ನು ವಿಸ್ತರಿಸಲಾಗಿದೆ. ಯಾಂತ್ರಿಕ ಸರಪಳಿ ಗರಗಸಗಳನ್ನು ಹಿಡಿದಿದ್ದ 600 ಮಂದಿ ಕೂಲಿಯಾಳುಗಳು ನೂರಾರು ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳ ರಕ್ಷಣೆಯಲ್ಲಿ ನೋಡ ನೋಡುತ್ತಿದ್ದಂತೆ ಮೂರೇ ದಿನಗಳಲ್ಲಿ 15 ಸಾವಿರ ಮರಗಳನ್ನು ಕಡಿದು ನೆಲಕ್ಕೆ ಉರುಳಿಸಿದ್ದರು. ಈ ಕೃತ್ಯ ಜರುಗಿದ್ದು 2023ರ ಡಿಸೆಂಬರಿನಲ್ಲಿ. 2012ರಿಂದ 81 ಸಾವಿರ ಮರಗಳನ್ನು ಕಡಿಯುತ್ತ ಬರಲಾಗಿತ್ತು.

2010ರಿಂದ ಇಲ್ಲಿ ಆರಂಭವಾದ ಕಲ್ಲಿದ್ದಿಲು ಗಣಿಗಾರಿಕೆ ಇದೀಗ ಮುಗಿಲು ಮುಟ್ಟಿದೆ. 2013ರ ಏಪ್ರಿಲ್ ನಲ್ಲಿ ಅದಾನಿ ಕಂಪನಿ ಈ ಅರಣ್ಯಕ್ಕೆ ಅಡಿಯಿಟ್ಟಿತು. ಕಾಂಗ್ರೆಸ್ಸು ಬಿಜೆಪಿಯನ್ನೂ, ಬಿಜೆಪಿ ಕಾಂಗ್ರೆಸ್ಸನ್ನೂ ದೂಷಿಸುತ್ತ ಈ ಅರಣ್ಯನಾಶಕ್ಕೆ ಅನುಮತಿ ನೀಡುತ್ತ ಬಂದಿವೆ. ಈ ಹಿಂದೆ ಪಡೆದಿದ್ದ ಗಣಿಯು ಬರಿದಾಗಿದೆಯೆಂಬ ಕಾರಣಕ್ಕಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅದಾನಿ ಕಂಪನಿಗೆ ಕಲ್ಲಿದ್ದಿಲು ಗಣಿಗಾರಿಕೆಯ ಅನುಮತಿಯನ್ನು ವಿಸ್ತರಿಸಿದೆ. ಎರಡೂವರೆ ಲಕ್ಷದಿಂದ ಎಂಟು ಲಕ್ಷದಷ್ಟು ಮರಗಳನ್ನು ಕೆಡವಲಾಗುತ್ತಿದೆ ಎಂಬುದು ಆಂದೋಲನಕಾರರ ಆರೋಪ.

ಹಸದೇವ್ ಅರಣ್ಯದಲ್ಲಿ ಕಲ್ಲಿದ್ದಿಲು ಗಣಿಗಾರಿಕೆಗೆ ಗ್ರಾಮಪಂಚಾಯತಿಯ ಅನುಮತಿಯ ಹುಸಿ ಕಾಗದ ಪತ್ರಗಳ ಸೃಷ್ಟಿಯನ್ನು ಆಂದೋಲನಕಾರರು ಸಾಕ್ಷಿ ಪುರಾವೆಗಳ ಸಹಿತ ಇತ್ತೀಚೆಗೆ ಬಯಲಿಗೆಳೆದಿದ್ದರು. ಅಡವಿ ನಾಶದ ಈ ಗಣಿಗಾರಿಕೆಯ ವಿರುದ್ಧ ಜನಾಂದೋಲನ ಸಿಡಿದಿದೆ. ಆದರೆ ಪ್ರಭುತ್ವಗಳು ನಿರ್ದಯೆಯಿಂದ ಅದನ್ನು ಹೊಸಕಿ ಹಾಕುತ್ತಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಹತಾರುಗಳಾದ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಆಂದೋಲನಕಾರರ ಮೇಲೆ ಛೂ ಬಿಟ್ಟಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನ ತನಿಖಾ ವರದಿ ಹೇಳಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಲ್ಲ ಬುಡಕಟ್ಟುಗಳ ಜನರ ಪ್ರಮಾಣ ಶೇ.8.6 ಮಾತ್ರ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಒಕ್ಕಲೆಬ್ಬಿಸಿ ಹೊರಕ್ಕೆ ದಬ್ಬಲಾಗುತ್ತಿರುವ ಜನರ ಪೈಕಿ ಅವರ ಪ್ರಮಾಣ ಶೇ.40! ಅಣೆಕಟ್ಟುಗಳು, ವಿದ್ಯುಚ್ಛಕ್ತಿ ಯೋಜನೆಗಳು, ಗಣಿಗಾರಿಕೆ ಮುಂತಾದ ಅರಣ್ಯನಾಶದ ಕಾರಣ ತಾವು ತಮ್ಮ ಪೂರ್ವಜರು ಹುಟ್ಟಿ ಬೆಳೆದು ಬದುಕು ಕಟ್ಟಿಕೊಂಡ ನೆಲ ನೀರು ಅಡವಿಗಳ ಜೊತೆಗೆ ಘನತೆಯ ಬದುಕಿನಿಂದ ಹೊರದಬ್ಬಿಸಿಕೊಂಡು ಸ್ವತಂತ್ರ ಭಾರತದಲ್ಲಿ ತಬ್ಬಲಿಗಳಾಗಿ ಜೀವಿಸಿವೆ ಈ ಜನಸಮುದಾಯಗಳು. ಉಳಿದವರು ನಿರ್ಗತಿಕ ಕೂಲಿಕಾರರು, ಸಣ್ಣಪುಟ್ಟ ಹಿಡುವಳಿದಾರರು, ದುರ್ಬಲರು, ಅಸಹಾಯಕರು.

ಸ್ಥಳಾಂತರಗೊಳಿಸುವುದು ಎಂದರೆ ಸಾಮಾಜಿಕ, ಆರ್ಥಿಕ ಬದುಕುಗಳನ್ನು ಬುಡಮೇಲು ಮಾಡಿ ಛಿದ್ರವಿಚ್ಛಿದ್ರಗೊಳಿಸುವುದೇ ಆಗಿದೆ. ಜಮೀನು ಇಲ್ಲದ, ತಲೆಯ ಮೇಲೆ ಸೂರು ಇಲ್ಲದ, ಉದ್ಯೋಗವಿಲ್ಲದ, ತಿನ್ನಲು ಅನ್ನವಿಲ್ಲದ, ಬಡತನದಲ್ಲೇ ಮುಳುಗೆದ್ದು ಸಾಯುವ ಬದುಕುಗಳು. ಜಾಗತಿಕವಾಗಿ ಹೀಗೆ ನೆಲೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ 2007ರ ತನಕ ಈ ಕ್ರೂರ ಸ್ಥಳಾಂತರಕ್ಕೆ ತುತ್ತಾಗಿರುವವರ ಸಂಖ್ಯೆ ಸುಮಾರು ಆರು ಕೋಟಿ. ಕಳೆದ ಹದಿನೇಳು ವರ್ಷಗಳಲ್ಲಿ ಈ ಸಂಖ್ಯೆ ಅತಿ ವೇಗವಾಗಿ ಹಿಗ್ಗಿದೆಯೇ ವಿನಾ ಕುಗ್ಗಿಲ್ಲ. ಈ ನತದೃಷ್ಟರ ಪೈಕಿ ಅತ್ಯಧಿಕಾಂಶ ಜನರಿಗೆ ಉಪವಾಸದಲ್ಲಿ ಸಾಯುವ ಬದುಕನ್ನು ಕರುಣಿಸಿದೆ ನಮ್ಮ ವ್ಯವಸ್ಥೆ. ಅಂಕಿ ಅಂಶಗಳ ಹೊರಗೆ ಬದುಕಿನ ಬೇರು ಕಡಿದುಕೊಂಡವರ ಲೆಕ್ಕ ಇಟ್ಟವರಾರು?

ಆ ಪಕ್ಷ ಈ ಪಕ್ಷ ಎಂಬ ಭೇದಭಾವವಿಲ್ಲದೆ ಎಲ್ಲ ಪಕ್ಷಗಳು- ಎಲ್ಲ ಸರ್ಕಾರಗಳೂ ಈ ಮರಮೇಧದ ನೆತ್ತರಿನಲ್ಲಿ ಕೈ ತೊಳೆದಿವೆ. ಕೆಲವು ಹೆಚ್ಚು, ಕೆಲವು ಕಡಿಮೆ ಅಷ್ಟೇ. 2015-2020ರ ನಡುವಣ ಅವಧಿಯಲ್ಲಿ ಪ್ರಪಂಚದಲ್ಲೇ ಎರಡನೆಯ ಅತ್ಯಧಿಕ ಅರಣ್ಯನಾಶ ಜರುಗಿರುವುದು ಭಾರತದಲ್ಲಿ. ಈ ಪಂಕ್ತಿಯ ಮೊದಲ ಸ್ಥಾನ ಬ್ರೆಜಿಲ್ ದೇಶದ್ದು.

ಆದಿವಾಸಿಗಳ ಜಮೀನನ್ನು ಕಿತ್ತುಕೊಳ್ಳುವ ಭೂಪ ಇನ್ನೂ ಹುಟ್ಟಿಯೇ ಇಲ್ಲ ಎಂದು ಪ್ರಧಾನಿ ಮೋದಿಯವರು ಚುನಾವಣಾ ಭಾಷಣವೊಂದರಲ್ಲಿ ನೀಡಿದ್ದ ಭರವಸೆ ಮತ್ತೆ ಮತ್ತೆ ಸುಳ್ಳಾಗಿದೆ. ಆದಿವಾಸಿಗಳು ಅಥವಾ ಬುಡಕಟ್ಟು ಜನರ ಜಮೀನನ್ನು ಆದಿವಾಸಿಗಳಲ್ಲದವರಿಗೆ ಪರಭಾರೆ ಮಾಡುವುದನ್ನು ನಿಷೇಧಿಸಿದ್ದ ಛೋಟಾ ನಾಗಪುರ ಗೇಣಿ ಕಾಯಿದೆಗೆ ತಿದ್ದುಪಡಿ ಈ ಹಿಂದಿನ ಝಾರ್ಖಂಡ್ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು. ಬಿರ್ಸಾ ಮುಂಡಾನಂತಹ ಎಣೆಯಿಲ್ಲದ ಬಂಡುಕೋರ ಆದಿವಾಸಿ ನಾಯಕನಿಗೆ ಮಣಿದು ಬ್ರಿಟಿಷ್ ಸರ್ಕಾರ 1908ರಲ್ಲಿ ಆದಿವಾಸಿಗಳಿಗೆ ನೀಡಿದ್ದ ಈ ವರವನ್ನು ಸ್ವತಂತ್ರ ಭಾರತ ಕಿತ್ತುಕೊಂಡಿದೆ. 1949ರ ಸಂತಾಲ್ ಪರಗಣ ಕಾಯಿದೆಗೂ ಇಂತಹುದೇ ದುರ್ಗತಿ ಒದಗಿತು.

Advertisements

ಕೋಟಿ ಕೋಟಿ ಆದಿವಾಸಿಗಳನ್ನು ಶೋಷಣೆಯಿಂದ ಬಿಡುಗಡೆ ಮಾಡುವ ಮನಸ್ಸು ಭಾರತ ಸರ್ಕಾರಕ್ಕೆ ಇಲ್ಲ ಎಂಬುದು ವರ್ಷಗಳ ಹಿಂದೆ ವಿಕಿಲೀಕ್ಸ್ ದಾಖಲೆಗಳಿಂದ ಹೊರಬಿದ್ದಿದ್ದ ಅಂಶ.

‘ಅಭಿವೃದ್ಧಿ’ಗೆ ಅಡ್ಡಗಲ್ಲಾಗಿರುವ ಆದಿವಾಸಿಗಳನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಮುಖ್ಯವಾಹಿನಿಗೆ ಸೇರಿಸಬೇಕೆಂಬುದು ಭಾರತದಲ್ಲಿ ವ್ಯಾಪಕವಾಗಿ ಚಾಲ್ತಿಗೆ ಬರುತ್ತಿರುವ ಅಭಿಪ್ರಾಯ. ಈ ಅಮಾನವೀಯ ಆಲೋಚನೆಯು ಆದಿವಾಸಿಗಳನ್ನು ಕಟ್ಟಕಡೆಗೆ ಸಾಮಾಜಿಕ ಏಣಿಶ್ರೇಣಿಯ ತಳಾತಳಕ್ಕೆ ತುಳಿಯಲಿದೆ ಎಂಬ ಮಾತನ್ನೂ ಈ ದಾಖಲೆಗಳಲ್ಲಿ ಬರೆಯಲಾಗಿತ್ತು.

ತೀವ್ರ ವೇಗದಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹಿಗ್ಗುತ್ತಿರುವ ಅರ್ಥವ್ಯವಸ್ಥೆಯು ಬರಿದಾಗುತ್ತಿರುವ ಅರಣ್ಯಪ್ರದೇಶ ಮತ್ತು ಅವುಗಳ ಸಂಪನ್ಮೂಲಗಳ ಮೇಲೆ ಭಾರೀ ಒತ್ತಡ ಹೇರಿದೆ. ದೈತ್ಯ ಕಾರ್ಪೋರೇಟ್ ಕುಳಗಳ ಜೊತೆಗೆ ಪ್ರಭುತ್ವ ಮತ್ತು ಅದರ ಬಲಿಷ್ಠ ಬಾಹುಗಳಾದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಆದಿವಾಸಿಗಳ ಬೆನ್ನು ಬಿದ್ದಿವೆ. ಆದಿವಾಸಿ ಜನರು ಹೇಳತೀರದ ಸಂಕಟಕ್ಕೆ ಸಿಲುಕಿದ್ದಾರೆ. ಅವರನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಡಿ ಅಡಗಿರುವ ಖನಿಜ ಸಂಪನ್ಮೂಲಗಳನ್ನು ಕಾರ್ಪೊರೇಟುಗಳಿಗೆ ಬಿಡಿಸಿಕೊಡುವುದು ಸರ್ಕಾರದ ನಿರ್ಲಜ್ಜ ಮತ್ತು ಕ್ರೂರ ಕಾರ್ಯಸೂಚಿ. ದಟ್ಟ ಆದಿವಾಸಿ ಜನಸಾಂದ್ರತೆಯ ಪಟ್ಟಿಗೆ ಸೇರಿದ ಛತ್ತೀಸಗಢ, ಝಾರ್ಖಂಡ, ಒಡಿಶಾದಲ್ಲಿ ಈ ಜನರ ಬದುಕುಗಳು ಮೂರಾಬಟ್ಟೆ ಆಗುತ್ತಿವೆ. ಶೇ.90ರಷ್ಟು ಕಲ್ಲಿದ್ದಿಲು ಮತ್ತು ಶೇ.50ಕ್ಕೂ ಹೆಚ್ಚಿನ ಖನಿಜಗಳು ಮತ್ತು ಜಲಾಶಯಗಳನ್ನು ಕಟ್ಟಿರುವ ಜಾಗಗಳು ಇರುವುದು ಆದಿವಾಸಿಗಳು ಜೀವಿಸಿರುವ ಪ್ರದೇಶಗಳಲ್ಲೇ. ಆದಿವಾಸಿಗಳು ತಮ್ಮದೇ ನೆಲದಲ್ಲಿ ನಿರಾಶ್ರಿತರು. ಕಾಪಾಡಬೇಕಾದವರೇ ಕಾಡಿ ಕೊಲ್ಲುತ್ತಿದ್ದಾರೆ.

ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ ಅಭಿವೖದ್ಧಿಯ ಸವಾಲುಗಳು ಎಂಬ ವಿಷಯ ಕುರಿತು ನೀಡಿದ್ದ ವರದಿಯ ಮಾತುಗಳು ಸದಾಕಾಲಕ್ಕೂ ಪ್ರಸ್ತುತ ಎಂಬಂತಾಗಿದೆ- ” ಸ್ವಾತಂತ್ರ್ಯಾ ನಂತರ ಅಳವಡಿಸಿಕೊಂಡಿರುವ ಅಭಿವೖದ್ಧಿ ಮಾದರಿಯು ಆದಿವಾಸಿಗಳು ಮತ್ತು ಬುಡಕಟ್ಟು ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕೖತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ. ಪರಿಣಾಮವಾಗಿ ಈ ಸಮುದಾಯಗಳು ಹೆಚ್ಚು ಹೆಚ್ಚಾಗಿ ಶೋಷಣೆಗೆ ಬಲಿಯಾಗುವಂತೆ ಆಗಿದೆ. ಜೀವಿಯೊಂದು ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ (rapascious) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ ಆಸೆಬುರುಕ ವರ್ಗಗಳು ಆದಿವಾಸಿಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಅವರ ಬದುಕಿನ ಘನತೆಯನ್ನು ಉಲ್ಲಂಘಿಸಿವೆ”.

ಪ್ರಗತಿ ಮತ್ತು ಅಭಿವೖದ್ಧಿಯ ಹೆಸರಿನಲ್ಲಿ ಹೀಗೆ ಬುಡಕಟ್ಟು ಜನರ ಬೇರುಗಳನ್ನು ಕಡಿದು ಹಾಕುವ ಅಮಾನುಷ ಕೖತ್ಯವನ್ನು ರಾಜಕಾರಣಿಗಳು, ಅಧಿಕಾರಶಾಹಿ ಹಾಗೂ ಪೇಟೆ ಪಟ್ಟಣಿಗರು ಸರಿಯೆಂದು ಸಮಥಿ೯ಸಿಕೊಳ್ಳುತ್ತಾರೆ ಕೂಡ.

ಮೋದಿ ಸರ್ಕಾರ ಇದೇ ನವೆಂಬರ್ 15ರ ಬಿರ್ಸಾ ಮುಂಡಾ ಜಯಂತಿಯನ್ನು ವರ್ಷವಿಡೀ ಭಾರತೀಯ ಜನಜಾತೀಯ ಗೌರವ ದಿನವೆಂದು ಆಚರಿಸಲು ಮುಂದಾಗಿದೆ. ಮತ್ತೊಂದೆಡೆ ಆದಿವಾಸಿಗಳನ್ನು ಅವರ ಪ್ರಾಕೃತಿಕ ಸಂಪನ್ಮೂಲಗಳಿಂದ ಬೇರ್ಪಡಿಸಲಾಗುತ್ತಿದೆ. ಥೇಟ್ ತಾಯಿ ತೋಳುಗಳಿಂದ ಕಂದಮ್ಮನನ್ನು ಕಿತ್ತುಕೊಂಡಂತೆ. ಎಂತಹ ವಿಕೃತ ವ್ಯಂಗ್ಯವಿದು!

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X