ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗೆ ಬೀದರ್ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ.
2016ರ ಜನವರಿ 11ರಂದು ಜಿಲ್ಲೆಯ ಔರಾದ್ ತಾಲ್ಲೂಕಿನ ಬೇಲೂರ (ಎನ್) ಗ್ರಾಮದಲ್ಲಿ ಶಿವಾಜಿ ವಗ್ಗೆನೋರ್ ಎಂಬಾತ ತನ್ನ ಪತ್ನಿ ಪೂಜಾಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಿಂದಿಸಿ, ಬಿದಿರಿನ ಬಡಿಗೆಯಿಂದ ಮನಬಂದಂತೆ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಬೀದರ್ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಕೌಶಿಕ್ ಆರ್.ಎನ್. ಅವರು ಅಪರಾಧಿ ಶಿವಾಜಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಕಲಂ 498 (ಎ) ಅಡಿ 2 ವರ್ಷ ಸಾದಾ ಕಾರಾಗೃಹ ಶಿಕ್ಷೆ, ₹3 ಸಾವಿರ ದಂಡ, ದಂಡ ನೀಡದಿದ್ದಲ್ಲಿ 2 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಬೇಕು. ಕಲಂ 324ರ ಅಡಿ 2 ವರ್ಷ ಸಾದಾ ಜೈಲು ಶಿಕ್ಷೆ, ₹3 ಸಾವಿರ ದಂಡ, ಕಲಂ 504ರ ಅಡಿ ಆರು ತಿಂಗಳು ಸಾದಾ ಜೈಲು ಶಿಕ್ಷೆ, ₹2 ಸಾವಿರ ದಂಡ, ಕಲಂ 506ರ ಅಡಿ ಆರು ತಿಂಗಳು ಸಾದಾ ಜೈಲು ಶಿಕ್ಷೆ, ₹2 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಕೇವಲ ₹12 ರೂಪಾಯಿಯಲ್ಲಿ ಬಡವರ ಹಸಿವು ನೀಗಿಸುತ್ತಿರುವ ಶಿಕ್ಷಕ ಬಸವರಾಜ್
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶರಣಗೌಡ ಅವರು ವಾದ ಮಂಡಿಸಿದ್ದಾರೆ.