ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಮತ್ತು ಮಾನಸಿಕವಾಗಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ್ ಹೇಳಿದರು.
ಬೀದರ ವಿಶ್ವವಿದ್ಯಾಲಯ ವತಿಯಿಂದ 2024-25ನೇ ಸಾಲಿನ ಏಕವಲಯ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ
ಸ್ಪರ್ಧೆ ಮತ್ತು ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ವಿಶ್ವವಿದ್ಯಾಲಯದ ಬೆಳವಣಿಗೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಅನೇಕ ಅನಾನುಕೂಲತೆ ಇದ್ದರೂ ಸ್ಪರ್ಧೆಗಳು ಯಶಸ್ವಿಗೊಂಡಿವೆ. ಗುಡ್ಡಗಾಡು ಓಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ʼಡಿಸೆಂಬರ್ ತಿಂಗಳಲ್ಲಿ ಕ್ರಿಕೆಟ್ ಟೂರ್ನಮೆಂಟ್ ಕೂಡಾ ಆಯೋಜನೆ ಮಾಡುವ ಚಿಂತನೆ ನಡೆದಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಸೋಲು ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯʼ ಎಂದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಾಂತಲಿಂಗ ಸಾವಳಗಿ ಮಾತನಾಡಿ, ʼಆರೋಗ್ಯ ಚೆನ್ನಾಗಿದ್ದರೆ ಮಾತ್ರ
ಶೈಕ್ಷಣಿಕವಾಗಿ ಬೆಳವಣಿಗೆ ಕಾಣಲು ಸಾಧ್ಯ. ದೇವರ ಮೇಲೆ ಭರವಸೆಯಿಟ್ಟು, ಪಾಲಕರ ಸಹಕಾರದಿಂದ, ಶಿಕ್ಷಕರ ಮೇಲೆ
ಭಕ್ತಿಯಿಟ್ಟು ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ. ಪುಸ್ತಕಗಳನ್ನು ಪ್ರೀತಿಸಲು ಕಲಿತರೆ ಜೀವನದಲ್ಲಿ ಯಶಸ್ವಿಗೆ ಅವಕಾಶ ಮಾಡಿಕೊಡುತ್ತದೆʼ ಎಂದು ನುಡಿದರು.
ವಿಜೇತರಿಗೆ ಬಹುಮಾನ ವಿತರಣೆ: ಕೊಳಾರ (ಕೆ) ಗ್ರಾಮದಿಂದ ಬೀದರ ವಿಶ್ವವಿದ್ಯಾಲಯ ಹಾಲಹಳ್ಳಿವರೆಗೆ ಸುಮಾರು 10 ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪುರುಷರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನೌಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವಿಶಾಲ ಎ (ಪ್ರಥಮ ಸ್ಥಾನ), ಬಸವಕಲ್ಯಾಣ ಸ.ಪ್ರ.ದ. ಕಾಲೇಜಿನ ವಿದ್ಯಾರ್ಥಿ ಸುಮಿತ್ ರಾಜು (ದ್ವಿತೀಯ ಸ್ಥಾನ), ಎಸ್.ವಿ.ಟಿ. ಹುಮನಾಬಾದನ ಉಲ್ಲಾಸ ಡಿ (ತೃತೀಯ ಸ್ಥಾನ), ಎಸ್.ವಿ.ಟಿ. ಹುಮನಾಬಾದನ ಕಪಿಲ್ ಆರ್ (ನಾಲ್ಕನೇ ಸ್ಥಾನ) ಹಾಗೂ ಕರ್ನಾಟಕ ಪದವಿ ಕಾಲೇಜಿನ ವಿದ್ಯಾರ್ಥಿ ಪಪ್ಪು ಪಂಢರಿ (ಐದನೇ ಸ್ಥಾನ) ಹಾಗೂ ನೌಬಾದ ಸ.ಪ್ರ.ದ.ಕಾಲೇಜಿನ ರಮೇಶ ರಾಜಕುಮಾರ (ಆರನೇ ಸ್ಥಾನ) ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭಾಲ್ಕಿಯ ಸಿ.ಬಿ. ಪದವಿ ಕಾಲೇಜಿನ ಪ್ರತೀಕ್ಷಾ ಪಿ, ದ್ವಿತೀಯ ಸ್ಥಾನವನ್ನು ಮನ್ನಳ್ಳಿ ಸ.ಪ್ರ.ದ.ಕಾಲೇಜಿನ ರೂಪಾ, ತೃತೀಯ ಸ್ಥಾನವನ್ನು ನೌಬಾದ ಸ.ಪ್ರ.ದ.ಕಾಲೇಜಿನ ಸುಜಾತಾ ವಿ, ನಾಲ್ಕನೇ ಸ್ಥಾನವನ್ನು ಔರಾದ ಸ.ಪ್ರ.ದ.ಕಾಲೇಜಿನ ಪ್ರೀತಿ ಇ, ಐದನೇ ಸ್ಥಾನವನ್ನು ಹುಮನಾಬಾದ ಸ.ಪ್ರ.ದ.ಕಾಲೇಜಿನ ಮಹೇಶ್ವರಿ ಎಸ್ ಹಾಗೂ ಆರನೇ ಸ್ಥಾನವನ್ನು ಮನ್ನಳ್ಳಿ ಸ.ಪ್ರ.ದ.ಕಾಲೇಜಿನ ಶಿಲ್ಪಾರಾಣಿ ಪಡೆದುಕೊಂಡಿದ್ಧಾರೆ.
ಪುರುಷ ವಿಭಾಗದ ಸಮಗ್ರ ಚಾಂಪಿಯನ್‌ಶಿಪ್‌ನಲ್ಲಿ ಸ.ಪ್ರ.ದ.ಕಾಲೇಜು ನೌಬಾದ್ ತಂಡ ಪ್ರಥಮ ಸ್ಥಾನ, ಕರ್ನಾಟಕ ಪದವಿ ಕಾಲೇಜು ದ್ವಿತೀಯ ಸ್ಥಾನ. ತೃತೀಯ ಸ್ಥಾನವನ್ನು ಸಿ.ಬಿ.ಪದವಿ ಕಾಲೇಜು ಭಾಲ್ಕಿ ಪಡೆದಿದೆ. ಮಹಿಳಾ ವಿಭಾಗದಲ್ಲಿ ಮನ್ನಳ್ಳಿ ಸ.ಪ್ರ.ದ.ಕಾಲೇಜು ಸಮಗ್ರ ಚಾಂಪಿಯನ್‌ಶಿಪ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಔರಾದ ಸ.ಪ್ರ.ದ.ಕಾಲೇಜು ಗಳಿಸಿತು. ತೃತೀಯ ಸ್ಥಾನವನ್ನು ಭಾಲ್ಕಿಯ ಸಿ.ಬಿ.ಪದವಿ ಕಾಲೇಜು ಪಡೆದಿದೆ.
ಈ ಸುದ್ದಿ ಓದಿದ್ದೀರಾ? ಒಳಮೀಸಲಾತಿ | ನ್ಯಾ. ನಾಗಮೋಹನದಾಸ್ ಆಯೋಗ ರಚಿಸಿದ ರಾಜ್ಯ ಸರ್ಕಾರ
ಕಾರ್ಯಕ್ರಮದಲ್ಲಿ ಕಾಶಿನಾಥ ಗಾಂವಕರ್, ಸಂಜುಕುಮಾರ ಅಪ್ಪೆ, ಊರ್ವಶಿ ಕೊಡ್ಲಿ, ಡಾ. ಮಾದಯ್ಯ ಸ್ವಾಮಿ,
ಮಂಜುನಾಥ, ಬಾಲಸುಬ್ರಹ್ಮಣ್ಯಂ ಚಾಲಕ್, ರವಿ ನಾಯಕ್, ಬಸವರಾಜ ಪಾಟೀಲ, ಸತೀಶ ಡೊಂಗ್ರಿ, ಪುನೀತ್, ರಾಮ್ ಜಾಧವ್ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಪ್ರಾಧ್ಯಾಪಕ ಡಾ.ರಾಮಚಂದ್ರ ಗಣಾಪುರ ನಿರೂಪಿಸಿದರು, ಓಂಕಾರ ಮಹಾಶೆಟ್ಟಿ ಸ್ವಾಗತಿಸಿದರು. ಶಿವರಾಜ ಪಾಟೀಲ್ ವಂದಿಸಿದರು.