ಬಾಲಕಿಯನ್ನು ಪುಸಲಾಯಿಸಿ ಮುಂಬೈಗೆ ಅಪಹರಿಸಿಕೊಂಡು ಹೋಗಿ ನಿರಂತರ ಅತ್ಯಾಚಾರ ಮಾಡಿರುವುದು ಸಾಬೀತಾಗಿದ್ದರಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮುರಡಿ ಗ್ರಾಮದ ಶಿವಾನಂದ ಸುಭಾಷ ಧನ್ನೂರೆ ಎಂಬಾತನಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ, 28 ಸಾವಿರ ರೂ. ದಂಡ ವಿಧಿಸಿದೆ.
ಮಹಾಗಾಂವ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 2022ರ ಮಾರ್ಚ್ 11ರಂದು ಶಿವಾನಂದ ಎಂಬಾತ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆಕೆಯನ್ನು ಬೈಕ್ ಮೇಲೆ ಕೂರಿಸಿಕೊಂಡು ಮಹಾರಾಷ್ಟ್ರದ ಉಮರ್ಗಾಕ್ಕೆ ಕರೆದುಕೊಂಡು ಹೋಗಿದ್ದ, ಅಲ್ಲಿಂದ ಬಸ್ ಮೂಲಕ ಮುಂಬೈಗೆ ಕರೆದೊಯ್ದು, ಅಲ್ಲಿ ಗಂಡ-ಹೆಂಡತಿ ಎಂದು ಹೇಳಿ ಮನೆ ಬಾಡಿಗೆಗೆ ಪಡೆದು ಅಕ್ರಮ ಬಂಧನದಲ್ಲಿಟ್ಟು 2022ರ ಮಾರ್ಚ್ 12ರಿಂದ ಡಿಸೆಂಬರ್ 11ರವರೆಗೆ ಸತತ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಅಪರಾಧಿಗೆ ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಕಲಂಗಳಡಿ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದರು.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.