ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಸ್ಥಾಪಿತ ಹಕ್ಕಲ್ಲ. ಮಾತ್ರವಲ್ಲದೆ, ಸೇವೆಯಲ್ಲಿ ಇದ್ದಾಗಲೇ ಮೃತಪಡುವ ನೌಕರ ಹೊಂದಿರುವ ಸೇವಾ ಷರತ್ತು ಕೂಡ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
1997ರಲ್ಲಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಪುತ್ರನಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲು ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಅರ್ಜಿಯನ್ನು ವಜಾಗೊಳಿಸಿದೆ. “ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದು ಸ್ಥಾಪಿತ ಹಕ್ಕಲ್ಲ. ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ, ಅದನ್ನು ಪರಿಗಣಿಸಲಾಗುತ್ತದೆ” ಎಂದು ಹೇಳಿದೆ.
“ನೇಮಕಾತಿ ನೀತಿಗೆ ವಿರುದ್ದವಾಗಿ ಮತ್ತು ಕಾನೂನು ಬಾಹಿರವಾಗಿ ಒಬ್ಬರ ಪರವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅನುಕಂಪ ಆಧಾರಿತ ನೇಮಕಾತಿಯು, ಮೃತರ ಕುಟುಂಬಕ್ಕೆ ಆ ಸಮಯದಲ್ಲಿ ತುರ್ತು ಆರ್ಥಿಕ ಸಹಾಯ ಮಾಡಲು ಇರುವುದೇ ಹೊರತು, ಅದು ಅವರ ಪರಿಪೂರ್ಣ ಹಕ್ಕಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
1997ರಲ್ಲಿ ಪಂಜಾಬ್ ಮೂಲದ ಜೈ ಪ್ರಕಾಶ್ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯದ ವೇಳೆ ಸಾವನ್ನಪ್ಪಿದ್ದರು. ಆಗ ಅವರ ಮಗ ಟಿಂಕು ಕೇವಲ 7 ವರ್ಷದವನಾಗಿದ್ದ. ಪ್ರಕಾಶ್ ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ, ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಕೊಡುವಂತೆ ಅವರು ಅರ್ಜಿ ಸಲ್ಲಿಸಿರಲಿಲ್ಲ. ಬದಲಾಗಿ, ಅಪ್ರಾಪ್ತ ಮಗ ವಯಸ್ಸಿಗೆ ಬಂದ ಬಳಿಕ ಆತನಿಗೆ ಉದ್ಯೋಗ ಕೊಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು.
ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಅಧಿಕಾರಿಗಳು, ‘ನೌಕರ ಸಾವನ್ನಪ್ಪಿದ 3 ವರ್ಷದೊಳಗೆ ಅರ್ಜಿ ಸಲ್ಲಿಸಬಹದು. ಆಗ ಮಾತ್ರವೇ ಪರಿಗಣಿಸಲಾಗುತ್ತದೆ’ ಎಂದಿದ್ದರು. ಸರ್ಕಾರ ಕೂಡ ಉದ್ಯೋಗ ಕೋರಿದ್ದ ಮನವಿ ತಿರಸ್ಕರಿಸಿತ್ತು. ಹಾಗಾಗಿ, ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿದೆ. ಆದಾಗ್ಯೂ, ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.