ಗುಂಡ್ಲುಪೇಟೆ | ದಲಿತರ ಮೇಲಿನ ದಬ್ಬಾಳಿಕೆ ತಡೆಯಲು ಅಧಿಕಾರಿಗಳು ವಿಫಲ : ದಸಂಸ ಪ್ರತಿಭಟನೆ

Date:

Advertisements

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿರುವುದನ್ನು ಖಂಡಿಸಿ ಹಾಗೂ ಬಾಚಹಳ್ಳಿಯಲ್ಲಿ ಕುಡಿಯುವ ನೀರಿನ ವಿಚಾರವಾಗಿ ದೌರ್ಜನ್ಯವೆಸಗಿರುವ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ದಸಂಸ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತರ ಮೇಲೆ ಕುಡಿಯುವ ನೀರು, ಜಮೀನುಗಳ ತಿರುಗಾಡುವ ರಸ್ತೆ, ಹಣಕಾಸಿನ ವಿಚಾರ, ಹಾಲಿನ ಡೈರಿ, ಕೂಲಿ ಕೆಲಸ, ನ್ಯಾಯಬೆಲೆ ಅಂಗಡಿ, ದೇವಸ್ಥಾನ ಪ್ರವೇಶ, ಕ್ಷೌರ ಮಾಡುವ ವಿಚಾರ ಸೇರಿದಂತೆ ಒಟ್ಟಾರೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡುವುದು ಕಂಡು ಬಂದರೂ ಏನು ತಿಳಿಯದಂತೆ ತಾಲೂಕು ಆಡಳಿತ ಮೌನ ವಹಿಸಿರುವುದನ್ನು ಖಂಡಿಸಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿದೆ. ಸಂವಿಧಾನದಲ್ಲಿ ಸಮಾನತೆ, ಸೋದರತೆ, ಭಾತೃತ್ವ ಸಾರುವ ಅಂಶಗಳಿದ್ದರೂ ಕೂಡ ಅಸ್ಪೃಶ್ಯತೆ ಆಚರಣೆ ನಿರಂತರವಾಗಿದೆ. ಇದು ದುರಂತವೇ ಸರಿ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹೇಳಿದಂತೆ ಸಮಾನತೆ ಮತ್ತು ಕರ್ತವ್ಯದ ಹಕ್ಕುಗಳು ಯಥಾವತ್ತಾಗಿ ಜಾರಿಯಾಗಿದ್ದರೆ ಒಕ್ಕೂಟದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ, ನಡೆಯುತ್ತಿರಲಿಲ್ಲ ಎಂದರು.

Advertisements
IMG 20241114 WA0010

ಜಿಲ್ಲಾ ಸಂಚಾಲಕ ಯಾರಿಯೂರು ರಾಜಣ್ಣ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಜನಸಂಖ್ಯೆಯಲ್ಲಿ ದಲಿತ ಸಮುದಾಯ 2ನೇ ಸ್ಥಾನದಲ್ಲಿದ್ದರೂ ಕೂಡ ಎಗ್ಗಿಲ್ಲದೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯ ತಾತ್ಸಾರವೇ ಕಾರಣ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಇಷ್ಟೆಲ್ಲಾ ಇದ್ದರು ಸಹ ದಲಿತರಿಗೆ ಆಗುತ್ತಿರುವ ದೌರ್ಜನ್ಯ ಪ್ರಕಟಿಸದೆ ಅಸಹಾಯಕರಾಗಿದ್ದಾರೆ. ಇದಕ್ಕೆಲ್ಲ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ.5 ರಂದು ಗುಂಡ್ಲುಪೇಟೆ ತಾಲೂಕು ಬಾಚಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಹೋದಾಗ ಅದೇ ಗ್ರಾಮದ ಸವರ್ಣೀಯ ಕುಟುಂಬದ ಮೂರು ಜನರು ಸೇರಿಕೊಂಡು ನೀರು ತೆಗೆದುಕೊಳ್ಳಲು ಬಿಡದೆ, ‘ನೀನು ದಲಿತ, ನೀರು ಮುಟ್ಟುವುದು ಬೇಡ’ವೆಂದು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಕೃಷ್ಣಮೂರ್ತಿ ಎಂಬಾತನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವುದು ಹಾಗೂ ಅವಮಾನ ಮಾಡಿರುವುದು ದಲಿತ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನ. ಅಧಿಕಾರಿಗಳು ಇಂಥದ್ದನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡಸ್ವಾಮಿ ಹುಣಸಿನಪುರ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನಲ್ಲಿ ಇದೇ ವರ್ಷ 5 ದೌರ್ಜನ್ಯ ಪ್ರಕರಣಗಳು ದಾಖಲಾಗಿರುತ್ತವೆ ಹಾಗೂ ದಲಿತರ ಹಣಕಾಸು, ಸಾಮಾಜಿಕ ಮತ್ತು ಔದ್ಯೋಗಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮಗಳು ಕೂಡ ಬೀರುತ್ತದೆ. ಹಾಗಾಗಿ, ತಾವು ಸಂತ್ರಸ್ತ ಕುಟುಂಬಗಳನ್ನು ಖುದ್ದು ಭೇಟಿ ಮಾಡಿ ರಕ್ಷಣೆ, ಪರಿಹಾರ, ಆತ್ಮಸ್ಥೆರ್ಯ ತುಂಬಿ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಬಾಚಹಳ್ಳಿ ದಲಿತರ ಬಡಾವಣೆಗೆ ಪ್ರತ್ಯೇಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು. ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ತಡೆವಲ್ಲಿ ವಿಫಲವಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಿಗೆ ಜಿಲ್ಲಾ ನ್ಯಾಯಾಧೀಶರು ಸಂಬಂಧಿಸಿದ ಆರೋಪಿಗಳನ್ನು ಶಿಕ್ಷಿಸುವಲ್ಲಿ ವಿಫಲವಾಗಿರುವುದನ್ನು ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ನಿಗಾ ವಹಿಸಬೇಕು ಎಂದು ಆಗ್ರಹಿಸಿ ಹಕ್ಕೊತ್ತಾಯ ಮನವಿ ಪತ್ರವನ್ನು ಸಲ್ಲಿಸಿದರು.

ಇದನ್ನು ಓದಿದ್ದೀರಾ? ಪಾಂಡವಪುರ | ನರೇಗಾ ಯೋಜನೆ ದುರ್ಬಳಕೆ: ಯಂತ್ರ ಬಳಸಿ ಗುತ್ತಿಗೆದಾರರಿಂದ ಕಾಮಗಾರಿ

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ದೊರೆಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ಅನಿಲ್ ಕುಮಾರ್, ವೆಂಕಟೇಶ್, ಸಿದ್ದಯ್ಯ, ಗವಿರಾಜು, ಕುಮಾರ್, ಸಿದ್ದರಾಜು, ಬಸವ, ಶಿವರಾಜ್, ಸಿದ್ದು, ಚಿನ್ನಸ್ವಾಮಿ, ನಾಗರಾಜು, ಜಯರಾಜು ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X