ಒಕ್ಕೂಟ ಸರ್ಕಾರವು ನಿರ್ಲಜ್ಜತನದಿಂದ ಕಾರ್ಪೋರೇಟ್ ಕಂಪನಿಗಳ ಜೊತೆ ಕೈ ಮಿಲಾಯಿಸಿ, ದುಡಿಯುವವರ ಅನ್ನವನ್ನು ಕಸಿದುಕೊಳ್ಳಲು ಹೊರಟಿದೆ. ನಮ್ಮ ಭೂಮಿ, ಬೆಳೆ, ಶ್ರಮ ಮತ್ತು ಬದುಕನ್ನು ಬಂಡವಾಳ ಶಾಹಿಗಳ ಪಾದತಳಕ್ಕೆ ಒಪ್ಪಿಸಲು ಹೊರಟಿದೆ ಎಂದು ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಲದರ್ಶಿನಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರಗತಿಪರ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ನಾವು ಈ ನೀತಿಗಳನ್ನೆಲ್ಲಾ ವಿರೋಧಿಸುತ್ತೇವೆ ಎಂದು ಬಾಯಿ ಮಾತಿಗೆ ಹೇಳುತ್ತಿದೆ. ತನ್ನ ಪ್ರಣಾಳಿಕೆಯಲ್ಲು ಬರೆದುಕೊಂಡಿದೆ. ಅದು ಮಾತು ಭರವಸೆಯಾಗಿಯೇ ಉಳಿದಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಬಿಜೆಪಿ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನೇ ಕಾಂಗ್ರೆಸ್ ಸಹ ಮುಂದುವರೆಸಿಕೊಂಡು ಹೋಗುತ್ತಿದೆ. ನಾವು ಈಗಲು ಎಚ್ಚೆತ್ತು ಕೊಳ್ಳದಿದರೆ, ನಮ್ಮ ಬದುಕಿನ ಮೇಲಾಗುತ್ತಿರುವ ಕಾರ್ಪೋರೇಟ್ ಶಕ್ತಿಗಳ ಆಕ್ರಮಣವನ್ನು ತಡೆಯದಿದ್ದರೆ, ಈ ಸಂಕಷ್ಟಗಳಿಂದ ನಮಗೆ ವಿಮೋಚನೆ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಿಷ್ಟೇ ಅಲ್ಲದೇ, ನಮ್ಮ ಭವಿಷ್ಯದ ತಲೆಮಾರು ಸಂಪೂರ್ಣವಾಗಿ ಅನಾಥಗೊಳ್ಳುವುದು, ಹೊಸ ರೂಪದ ಗುಲಾಮಗಿರಿಗೆ ಒಳಗಾಗುವುದು ಖಚಿತ. ಇದನ್ನು ನಾವು ತಡೆಯಲೇಬೇಕು. ಈ ಉದ್ದೇಶದಿಂದ ಇಡೀ ದೇಶದ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ಹಾಗೂ ಇತರೆ ದುಡಿಯುವ ಜನರ ಸಂಘಟನೆಗಳು ದೇಶದ 500 ಜಿಲ್ಲೆಗಳಲ್ಲಿ ಎಚ್ಚರಿಕಾ ರ್‍ಯಾಲಿ ನಡೆಸಲು ಕರೆ ನೀಡಿವೆ ಎಂದು ಮಾಹಿತಿ ನೀಡಿದರು.
ದೇಶದ ಎಲ್ಲಾ ಜನಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನವೆಂಬರ್ 15 ರಿಂದ 25 ರ ವರೆಗೆ ಎಲ್ಲಾ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರಂದೋಲನ ನಡೆಯಲಿದೆ. ನವೆಂಬರ್ 26ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಎಚ್ಚರಿಕಾ ರ್‍ಯಾಲಿಗಳು ನಡೆಯಲಿವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಸಿರಿಗೆರೆ ತರಳಬಾಳು ಕೇಂದ್ರದ ವಿರುದ್ಧ ನೈಜ ಹೋರಾಟಗಾರರ ವೇದಿಕೆಯಿಂದ ಲೋಕಾಯುಕ್ತಕ್ಕೆ ದೂರು
ಸರ್ಕಾರಗಳಿಗೆ ಮೂರು ತಿಂಗಳ ಗಡುವು, ಆದರೊಳಗೆ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದಿದ್ದರೆ ಕೇಂದ್ರೀಕೃತ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಿದ್ದೇವೆ. ಮುಂದೆ ತೀವ್ರವಾದ ಹೋರಾಟಕ್ಕೆ ಈ ದೇಶ ಸಾಕ್ಷಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ದೇವದಾಸ್, ಚಂದ್ರಶೇಖರ್ ಮೇಟಿ, ಜಗದೀಶ್ ಸೂರ್ಯ, ಉಗ್ರ ನರಸಿಂಹೆಗೌಡ, ಹೊಸಕೋಟೆ ಬಸವರಾಜು, ಪಿ ಮರಂಕಯ್ಯ, ಬಾಲಾಜಿ ರಾವ್, ಬೊಕ್ಕಳ್ಳಿ ನಂಜುಂಡ ಸ್ವಾಮಿ, ಕಾಮ್ರೇಡ್ ಜಗನ್ನಾಥ್ ಇದ್ದರು.