ಪ್ರಸ್ತುತ ದಿನಗಳಲ್ಲಿ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಳವಾದರೂ ಕೂಡಾ ಓದುಗರ ಸಂಖ್ಯೆ ಕುಂಠಿತವಾಗಿದೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಗ್ರಂಥಾಲಯ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷರು ಹಾಗೂ ನ್ಯಾ. ಕೆ ಪಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಕಳವಳ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನʼಕ್ಕೆ ಚಾಲನೆ ನೀಡಿ ಮಾತನಾಡಿದರು.
“ಓದುಗರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಲು, ಗ್ರಂಥಾಲಯಕ್ಕೆ ಹೆಚ್ಚಿನ ಸಂಖ್ಯೆಯ ಸದಸ್ಯರು ಸೇರ್ಪಡೆಗೊಳ್ಳುವಂತಾಗಬೇಕು. ಓದುಗರಿಗೆ ಪುಸ್ತಕದ ಮಹತ್ವವನ್ನು ಸಾರುವ ಪ್ರಚಾರಗಳು ನಡೆಯಬೇಕು” ಎಂದು ಸಲಹೆ ನೀಡಿದರು.
ಪ್ರಭಾರ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ, “ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನ ಮುಂದಿನ ಒಂದು ವಾರಗಳ ತನಕ ನಡೆಯಲಿದ್ದು, ಸಾರ್ವಜನಿಕರು ಹಾಗೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಈ ಅಭಿಯಾನದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ನ.17ರಂದು ಕನ್ನಡಹಬ್ಬ; ಕವಿಗೋಷ್ಠಿ ಕಾರ್ಯಕ್ರಮ
“ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನವೆಂಬರ್ 20 ರಂದು ಸಮಾರೋಪಗೊಳ್ಳಲಿದ್ದು, ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ನಡೆಯಲಿದೆ” ಎಂದು ಮಹಿಂತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಓದುಗರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.