ಕರ್ನಾಟಕ ಸರ್ಕಾರ ವಸತಿ, ವಾಣಿಜ್ಯ ಮತ್ತು ಕೃಷಿ ಭೂಮಿ ಸೇರಿದಂತೆ ಎಲ್ಲ ರೀತಿಯ ಆಸ್ತಿಗಳ ನೋಂದಣಿಗೆ ‘ಇ-ಖಾತಾ’ವನ್ನು ಕಡ್ಡಾಯಗೊಳಿಸಿದೆ. ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳ ನೋಂದಣಿಗೆ ಇ-ಖಾತಾಗಳನ್ನು ತ್ವರಿತವಾಗಿ ವಿತರಿಸುವಂತೆ ಕಂದಾಯ ಸಚಿವರು ಸೂಚಿಸಿದ್ದಾರೆ. ಹೆಸರೇ ಸೂಚಿಸುವಂತೆ ಇ-ಖಾತಾ ಎಂದರೆ ಎಲೆಕ್ಟ್ರಾನಿಕ್ ಖಾತಾ. ಈಗಾಗಲೇ ಸಾರ್ವಜನಿಕರ ಬಳಿ ತಮ್ಮ ಆಸ್ತಿಯ ಎಲ್ಲ ದಾಖಲೆಗಳು ಇವೆ. ಇದೊಂದು ಕಂದಾಯ ದಾಖಲೆ. ಈ ಕಂದಾಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಿಗುವ ರೀತಿಯಲ್ಲಿ ಮಾಡುವುದು ಮತ್ತು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡುವಾಗ ನೇರವಾಗಿ ಸಂಪರ್ಕಿಸುವುದಾಗಿದೆ.
ಸಾಮಾನ್ಯವಾಗಿ ‘ಇ-ಖಾತಾ’ವು ಆಸ್ತಿ ಖರೀದಿಸುವವರಿಗೆ, ಆಸ್ತಿ ಮಾರಾಟ ಮಾಡುವವರಿಗೆ, ಆಸ್ತಿಯ ಮೇಲೆ ಸಾಲ ಪಡೆಯುವವರಿಗೆ, ಶಿಕ್ಷಣ ಸಾಲ ಪಡೆಯುವವರಿಗೆ, Partition Deed (ವಿಭಜನಾ ಪತ್ರ), Gift Deed(ದಾನ ಪತ್ರ), ಆಸ್ತಿ ವರ್ಗಾವಣೆ ಮುಂತಾದವುಗಳಿಗೆ ಇ ಖಾತಾ ಕಡ್ಡಾಯವಾಗಿ ಅಗತ್ಯವಾಗಿರುತ್ತದೆ. ನಗರ ಪ್ರದೇಶದ ಹೊರಗೆ ಇ-ಖಾತಾ ಪ್ರಕ್ರಿಯೆ ನಡೆಯುತ್ತಿದೆ. ಕಳೆದ 8-10 ವರ್ಷಗಳಿಂದ ಇ- ಖಾತಾ ಚಾಲನೆಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಗಳಲ್ಲಿ ಇ ಖಾತಾ ಪಡೆಯಲು ಬೆಂಗಳೂರು ಒನ್‌ನಲ್ಲಿ ಕೌಂಟರ್ ತೆರೆಯಲಾಗಿದೆ. ವೆಬ್‌ಸೈಟ್‌ನಲ್ಲಿ ವಿಡಿಯೋ ಸಮೇತ ಹೇಗೆ ಪಡೆಯಬೇಕೆಂಬುದನ್ನು ತಿಳಿಸಲಾಗಿದೆ. ಸರ್ಕಾರ ಹೇಳಿದ ಹಾಗೆ, ವೆಬ್‌ಸೈಟ್‌ನ ಮಾಹಿತಿಯಲ್ಲಿರುವಂತೆ, ಆನ್‌ಲೈನ್ ಮೂಲಕ ಎಲ್ಲವೂ ಸರಳವಾಗಲಿದೆ ಎಂದುಕೊಂಡು ಹೊರಟರೆ ಅದು ಸಾಧ್ಯವಿಲ್ಲದ ಕೆಲಸ. ಆದರೆ ಇ ಖಾತಾ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು, ದೋಷಗಳು ಹಾಗೂ ಕ್ಲಿಷ್ಟಕರ ಸನ್ನಿವೇಶಗಳು ಎದುರಾಗಿವೆ.
ಪೂರ್ವ ತಯಾರಿ ಇಲ್ಲದೆ ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿದ್ದರಿಂದ ಜನರು ಪರದಾಡುವಂತಾಗಿದೆ. ನಗರ ಮಟ್ಟದಲ್ಲಿ ಮಾತ್ರವಲ್ಲದೆ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಹಲವು ಸಮಸ್ಯೆಗಳು ಉಂಟಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣಾ ವ್ಯಾಪ್ತಿಯ ವಿಸ್ತರಣೆಯಲ್ಲೂ ಹಲವು ಲೋಪಗಳುಂಟಾಗಿವೆ. ಖಾತಾವನ್ನು ಪಡೆದ ನಂತರ ಭವಿಷ್ಯದಲ್ಲಿ ಶುರುವಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಪಡೆಯಬಹುದು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಸರ್ಕಾರ ಇ ಖಾತಾ ಮಾಡುವ ಮುನ್ನ ಸಂಬಂಧಪಟ್ಟ ಪರಿಣಿತರಿಂದ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಅಪ್‌ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪುಗಳಾಗಿವೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ. ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ ಶೇ. 6ರಷ್ಟು ಇ ಖಾತಾ ಮಾತ್ರ ಮಾಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು
ಕಠಿಣ ಪ್ರಕ್ರಿಯೆಗಳು ಹೆಚ್ಚಿರುವ ಕಾರಣ ಲಂಚಕ್ಕೆ ಆಸ್ಪದ ನೀಡುವಂತಾಗಿದೆ. ಇದುವರೆಗೆ ಇ ಖಾತಾ ಮಾಡಿಸಲು ಬಿಬಿಎಂಪಿ ಕಚೇರಿ ಅಥವಾ ಆನ್ ಲೈನ್ ಮೂಲಕ ಮಾಡಿಸಲು ಅವಕಾಶವಿತ್ತು. ಬಿಬಿಎಂಪಿ ಬೆಂಗಳೂರು ಒನ್ ಸಿಬ್ಬಂದಿಗಳಿಗೆ ತರಬೇತಿ ನೀಡಿ ಈ ಕೇಂದ್ರಗಳಲ್ಲೂ ಇ ಖಾತಾ ಮಾಡಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕಾಗುತ್ತದೆ. ಬಿಬಿಎಂಪಿಗೆ 125 ರೂ. ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಪಾವತಿ ಮಾಡಬೇಕಾಗುತ್ತದೆ.
ಆದರೆ ಆನ್ ಲೈನ್ ಮೂಲಕ ಮಾಡಿಸಲು ಕೆಲವು ಸೈಬರ್ ಸೆಂಟರ್‌ಗಳಲ್ಲಿ ಮಿತಿ ಮೀರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹಲವು ಕಡೆ 5 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ಲಂಚ ತೆಗೆದುಕೊಳ್ಳಲಾಗುತ್ತದೆ. ಹಲವು ದಿನ ಅಲೆದಾಡಿಸಲಾಗುತ್ತಿದೆ. ಲಂಚ ನೀಡಿ, ದಿನಗಟ್ಟಲೆ ತಿರುಗುತ್ತಿದ್ದರೂ ಬಹುತೇಕರಿಗೆ ಇ ಖಾತಾ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಬೆಂಗಳೂರು ನಗರದಲ್ಲಿ ಇ ಖಾತಾ ಪ್ರಕ್ರಿಯೆ ನಡೆಸುವಾಗ ಆಸ್ತಿ ತೆರಿಗೆ ರಶೀದಿ, ಮಾರಾಟ ಅಥವಾ ನೋಂದಾಯಿತ ಪತ್ರ, ಮಾಲೀಕರ ಆಧಾರ್ ಗುರುತಿನ ಚೀಟಿ, ಬೆಸ್ಕಾಂ ಬಿಲ್, ಕಾವೇರಿ ನೀರಿನ ಸಂಪರ್ಕದ ಬಿಲ್, ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ ದಾಖಲೆ, ಡಿಸಿ ಪರಿವರ್ತನೆ ದಾಖಲೆ, ಬಿಡಿಎ ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್, ಯಾವುದೇ ಸರ್ಕಾರೀ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದರೆ ಅದರ ಪತ್ರಗಳು ಬೇಕಾಗುತ್ತದೆ. ಇವುಗಳು ಆಯಾ ಅಗತ್ಯದ ಆಸ್ತಿಗಳಿಗೆ ಒದಗಿಸುವ ದಾಖಲೆಗಳಾಗಿವೆ. ಬಹುತೇಕರು ಇಷ್ಟೆಲ್ಲ ನೀಡಿದರೂ ಸಲ್ಲಿಕೆ ಪರಿಪೂರ್ಣವಾಗುತ್ತಿಲ್ಲ. ಒಮ್ಮೊಮ್ಮೆ ಎಲ್ಲವನ್ನು ಸಲ್ಲಿಕೆ ಮಾಡಿ ಒಂದಷ್ಟು ಸಮಯ, ದಿಗಗಳ ನಂತರ ಪರಿಶೀಲಿಸಿದರೆ ಸಲ್ಲಿಕೆಯಾಗಿಲ್ಲ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಆನ್‌ಲೈನ್‌ನ ಸಲ್ಲಿಕೆಯ ದಾಖಲೆಗಳಲ್ಲಿ ದೋಷಗಳಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡುವ ಅವಕಾಶವಿರುತ್ತದೆ. ಆದರೆ ಆ ಅಧಿಕಾರಿ ಸಾರ್ವಜನಿಕರಿಗೆ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಅಧಿಕಾರಿ ಪ್ರಾಮಾಣಿಕನಾದರೂ ಮಧ್ಯವರ್ತಿಗಳು ಸಂಬಂಧಿಸಿದ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ಇದರಿಂದ ಯಥಾಪ್ರಕಾರ ಸಾಮಾನ್ಯ ಜನರು ಲಂಚ ನೀಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
ಇ-ಖಾತೆ ಪಡೆಯಲು ಒಂದಿಷ್ಟು ಮಾಹಿತಿ
ಇ ಖಾತೆಯಲ್ಲಿ ಮೂರು ವಿಧಗಳಿವೆ. ‘ಇ ಸ್ವತ್ತು’, ‘ಇ ಆಸ್ತಿ’ ಹಾಗೂ ‘ಯುಎಲ್‌ಎಂಎಸ್’. ‘ಇ ಸ್ವತ್ತು’ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗೆ ಒಳಪಟ್ಟಿದೆ. ಈ ಯೋಜನೆ ಈಗಾಗಲೇ ಜಾರಿಯಲ್ಲಿದೆ. ‘ಈ ಆಸ್ತಿ’ ನಗರ ಪ್ರದೇಶಗಳ ಆಸ್ತಿಗೆ ಸಂಬಂಧಿಸಿದೆ. ‘ಯುಎಲ್‌ಎಂಎಸ್'(ಏಕೀಕೃತ ಭೂ ವಿರ್ವಹಣಾ ಪದ್ಧತಿ) ಬೆಂಗಳೂರಿನ ಬಿಡಿಎ ಆಸ್ತಿಗೆ ಸಂಬಂಧಿಸಿದೆ. ‘ಇ ಖಾತಾ’ ಆರ್ಜಿ ಸಲ್ಲಿಸುವ ಬೆಂಗಳೂರು ನಾಗರಿಕರು ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಸ್ತಿ ತೆರಿಗೆ ರಶೀದಿ, ಮಾರಾಟ ಅಥವಾ ನೋಂದಾಯಿತ ಪತ್ರ, ಮಾಲೀಕರ ಆಧಾರ್ ಗುರುತಿನ ಚೀಟಿ, ಬೆಸ್ಕಾಂ ಬಿಲ್, ಕಾವೇರಿ ನೀರಿನ ಸಂಪರ್ಕದ ಬಿಲ್, ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ ದಾಖಲೆ, ಡಿಸಿ ಪರಿವರ್ತನೆ ದಾಖಲೆ, ಬಿಡಿಎ ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್ ಸಂಬಂಧಿತ ದಾಖಲೆಗಳ ಪ್ರತಿಗಳನ್ನು ತಮ್ಮ ಬಳಿಯಿಟ್ಟುಕೊಂಡಿರಬೇಕು.
ಇ-ಖಾತಾ ಅಗತ್ಯವಿರುವವರಿಗೆ ಸಹಾಯ ಮಾಡಲು ಬಿಬಿಎಂಪಿಯ 11 ಸಮರ್ಪಿತ ಸಿಬ್ಬಂದಿಗಳನ್ನು ತಕ್ಷಣದ ವಹಿವಾಟು/ ನೋಂದಣಿಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಕರಡು ಇ-ಖಾತಾದಲ್ಲಿನ ದೋಷಗಳಿಗಾಗಿ ತಿದ್ದುಪಡಿಗಳನ್ನು ಅನುಮತಿಸಲಾಗಿದೆ. ಮೊದಲ ಬಾರಿಗೆ ಖಾತಾ ಪಡೆಯುತ್ತಿರುವ ಅಪಾರ್ಟ್‌ಮೆಂಟ್‌ಗಳು, ಪಾರ್ಕ್‌ಗಳು, ಸಿಎ ಸೈಟ್‌ಗಳು, ಹೊಸ ಲೇಔಟ್‌ಗಳಲ್ಲಿನ ರಸ್ತೆಗಳು ಇತ್ಯಾದಿಗಳಿಗೆ ಪರಿಹಾರಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಆನ್‌ಲೈನ್ ಮೂಲಕವೂ ಸುಲಭವಾಗಿ ಇ ಖಾತಾಗೆ ಅರ್ಜಿ ಸಲ್ಲಿಸಬಹುದು. ಆಸ್ತಿ ಮಾಲೀಕರು ಮೊದಲು bbmpeaasthi.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮೊಬೈಲ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ. ನಿಮ್ಮ ಆಸ್ತಿ ಕರಡು ಇ ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಂತಿಮ ಇ ಖಾತಾ ಆನ್‌ಲೈನ್‌ನಲ್ಲಿ ನಾಗರಿಕರು ಹೆಚ್ಚುವರಿ ಮಾಹಿತಿಯನ್ನು ಸೇರಿಸಬೇಕು. ರಿಜಿಸ್ಟ್ರರ್ಡ್ ಡೀಡ್, ಆಧಾರ್ ಆಧರಿತ ಇಕೆವೈಸಿ, ಎಸ್‌ಎಎಸ್ ಪ್ರಾಪರ್ಟಿ, ಟ್ಯಾಕ್ಸ್ ಅಪ್ಲಿಕೇಷನ್ ನಂಬರ್, ಪ್ರಾಪರ್ಟಿ ಫೋಟೋ, ಎ ಖಾತಾ, ಬಿ ಖಾತಾಗಳನ್ನು ಪಡೆಯುವ ದಾಖಲೆಗಳು, ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (ಏಳು ದಿನಗಳೊಳಗಿನದ್ದು) ಇತ್ಯಾದಿಗಳನ್ನು ಸೇರಿಸಬೇಕು. ಈ ವೆಬ್‌ಸೈಟ್‌ನಲ್ಲಿ ಯಾವುದಾದರೂ ಪ್ರಾಪರ್ಟಿಗೆ ಅಂತಿಮ ಖಾತೆ ನೀಡದಂತೆಯೂ ತಕರಾರು ಕೂಡ ಸಲ್ಲಿಸಬಹುದು.
ಬಿಬಿಎಂಪಿ ಇ ಖಾತೆ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 1533, ಇಮೇಲ್: bbmpekhata@gmail.com ಸಂಪರ್ಕಿಸಬಹುದು.