ಮೈಸೂರು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್(ವಿಜಿಲೆನ್ಸ್) ಆಗಿ ವರ್ಗಾವಣೆಗೊಂಡಿರುವ ನ್ಯಾ. ರವೀಂದ್ರ ಹೆಗಡೆ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಮೈಸೂರು ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಿಗೆ ಮೈಸೂರು ಪೇಟ ತೊಡಿಸಿ, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ನೆನಪಿನ ಕಾಣಿಕೆ ಹಾಗೂ ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ನ್ಯಾಯಮೂರ್ತಿ ರವೀಂದ್ರ ಹೆಗಡೆಯವರು ಮಾತನಾಡಿ, “ಮೈಸೂರಿನ ನ್ಯಾಯಾಲಯದಲ್ಲಿ ಕೆಲಸ ಮಾಡುವುದೇ ಒಂದು ಹೆಮ್ಮೆಯ ಸಂಗತಿ. ಇಲ್ಲಿನ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ನನಗೆ ಪೂರ್ಣ ಸಹಕಾರ ನೀಡಿದರು. ಈ ಸಹಕಾರದಿಂದ ಕೆಲವೊಂದಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಯಿತು” ಎಂದರು.
ಈ ಸುದ್ದಿ ಓದಿದ್ದೀರಾ? ಬಸವಕಲ್ಯಾಣ | ಗ್ರಂಥಾಲಯಗಳಿಂದ ಜ್ಞಾನ ಪರಂಪರೆ ವಿಸ್ತರಣೆ ಸಾಧ್ಯ : ಸಿದ್ದಪ್ಪ ಮೂಲಗೆ
“ಮೈಸೂರಿನಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ನೆಮ್ಮದಿಯಿದೆ. ನೀವೆಲ್ಲರೂ ನನಗೆ ಅಂತಹ ಅವಕಾಶ ದೊರಕಿಸಿದ್ದಕ್ಕೆ ನಾನೆಂದೂ ಆಭಾರಿ. ಕ್ಯಾಂಟೀನ್ ಸೌಲಭ್ಯ ಮತ್ತು ಶೌಚಾಲಯಗಳ ಉನ್ನತೀಕರಿಸುವ ಬಗ್ಗೆ ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ಈ ವೇಳೆ ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಕಾರ್ಯದರ್ಶಿ ಎ ಜಿ ಸುಧೀರ್, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.