ಜಿಲ್ಲೆಯಲ್ಲಿ ಒತ್ತುವರಿ ತೆರವಿಗೆ ಕಾನೂನು ಪ್ರಕಾರ ಅಗತ್ಯ ಕ್ರಮವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ನ.15ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ಹನ್ನೇರಡು ಸಾವಿರ ಎಕರೆಗಳಷ್ಟು ಜಮೀನು ಒತ್ತುವರಿಯಾಗಿದೆ. ಇದರಲ್ಲಿ 1400 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಒತ್ತುವರಿ ಜಮೀನನ್ನು ವಶಪಡಿಸಿಕೊಳ್ಳಲು ಕ್ರಮವಹಿಸಬೇಕು. ಹಾಗೆಯೇ ಅನಧಿಕೃತ ಲೇಔಟ್‌ಗಳ ನಿರ್ಮಾಣವನ್ನು ಗುರುತಿಸಿ ಅವುಗಳ ತೆರವಿಗೂ ಕಾನೂನು ಪ್ರಕಾರ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ತಹಶೀಲ್ದಾರ್, ಭೂದಾಖಲೆಗಳ ಇಲಾಖೆ, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು. ಎಲ್ಲಾ ಕಚೇರಿಗಳು ಇ-ಆಫೀಸ್ ತಂತ್ರಾಂಶದಲ್ಲಿ ಪತ್ರ ಮತ್ತು ಕಡತಗಳನ್ನು ಮಂಡಿಸುವಂತೆ ಮತ್ತು ಎಲ್ಲಾ ಪರಿಹಾರ ಕಾರ್ಯಗಳಲ್ಲಿ ಆಧಾರ್ ಲಿಂಕ್ ಮಾಡಿಸಿ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮೊತ್ತ ಪಾವತಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಜಿಲ್ಲೆಯಲ್ಲಿ 1,496 ಕೆರೆಗಳಿದ್ದು, ಇದುವರೆವಿಗೂ 1,226 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಉಳಿದ 270 ಕೆರೆಗಳು ಸರ್ವೆ ಮಾಡಬೇಕಾಗಿದೆ ಎಂದು ಭೂದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಉಳಿದ 270 ಕೆರೆಗಳ ಸರ್ವೆ ಕಾರ್ಯವನ್ನು ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಕೆ ಆರ್ ಪೇಟೆಯ ಶತಮಾನದ ಸರ್ಕಾರಿ ಶಾಲೆಗೂ ತಪ್ಪದ ಒತ್ತುವರಿ ಕಾಟ!
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.