ಅಪ್ರಾಪ್ತನೊಬ್ಬ ಬೈಕ್ ಓಡಿಸಿದ ಹಿನ್ನೆಲೆಯಲ್ಲಿ ಆತನಿಗೆ 25 ವರ್ಷ ವಯಸ್ಸಿನವರೆಗೆ ಪರವಾನಗಿ ನೀಡದಂತೆ ಮೈಸೂರು ಜಿಲ್ಲೆಯ ಟಿ ನರಸೀಪುರ ಘನ ನ್ಯಾಯಾಲಯ ಆದೇಶ ನೀಡಿದೆ.
ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ ಅಪ್ರಾಪ್ತನೊಬ್ಬ ಬೈಕ್ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಬಳಿಕ ಟಿ ನರಸೀಪುರ ಪೊಲೀಸರು ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು.
ವಾಹನ ಪರವಾನಗಿ ಇಲ್ಲದೆ, 18 ವರ್ಷ ತುಂಬದೆ ವಾಹನ ಚಾಲನೆ ಮಾಡುತ್ತಿರುವವರಿಗೆ ಟಿ ನರಸೀಪುರ ಘನ ನ್ಯಾಯಾಲಯ ಕಠಿಣ ತೀರ್ಪು ನೀಡುವುದರ ಮೂಲಕ ಬಿಸಿ ಮುಟ್ಟಿಸಿದೆ.
ಬಾಲಕನಿಗೆ ವಾಹನ ನೀಡಿದ ಟಿ ನರಸೀಪುರ ಟೌನ್ ತ್ರಿವೇಣಿ ನಗರದ ಮಹೇಶ್ ಎಂಬುವರಿಗೆ 27 ಸಾವಿರ ದಂಡ ವಿಧಿಸಿ, ಆರ್‌ಸಿ ಅಮಾನತು ಮಾಡಿದೆ. ಜತೆಗೆ ಬಾಲಕನಿಗೆ 25 ವರ್ಷ ತುಂಬುವವರೆಗೂ ಚಾಲನಾ ಪರವಾನಿಗೆ ನೀಡದಂತೆ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
ಈ ವಿಶೇಷ ತೀರ್ಪಿನಿಂದಾಗಿ ಅಪ್ರಾಪ್ತರಿಗೆ ಬಿಸಿ ಮುಟ್ಟಿಸಿದ್ದು, ಪೋಷಕರು ಇನ್ಮುಂದೆ ಅಪ್ರಾಪ್ತರಿಗೆ ವಾಹನ ನೀಡದಂತೆ ಎಚ್ಚರಿಕೆಯ ಸಂದೇಶವಾಗಿದೆ.
ಅಪ್ರಾಪ್ತರು ಪರವಾನಗಿಯಿರದೆ ವೀಲಿಂಗ್ ಮಾಡುವುದು, ರಸ್ತೆ ನಿಯಮ ಪಾಲಿಸದೆ ಮನಬಂದಂತೆ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ಇರುವುದು ಕಂಡುಬರುತ್ತಿತ್ತು.