ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರದ ಮತಗಟ್ಟೆಗಳ ಬಳಿ ಚಪ್ಪಲಿಯನ್ನು ನಿಷೇಧಿಸಬೇಕು ಎಂಬ ಮನವಿಯನ್ನು ಮಾಡಿದ್ದಾರೆ.
“ಚಪ್ಪಲಿ ನನ್ನ ಚುನಾವಣಾ ಚಿಹ್ನೆಯಾಗಿದೆ, ಅವುಗಳನ್ನು ಧರಿಸುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ” ಎಂದು ಪರಂದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರುದಾಸ್ ಸಂಭಾಜಿ ಕಾಂಬಳೆ ಹೇಳಿದ್ದಾರೆ. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿಗಳನ್ನು ನಿಷೇಧಿಸುವಂತೆ ಕಾಂಬಳೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಚುನಾವಣಾ ನೀತಿ ಸಂಹಿತೆ ಜಾರಿ; ಪ್ರಚಾರ ಸಾಮಗ್ರಿಗಳ ತೆರವು
ಭಾರತೀಯ ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಚಿಹ್ನೆಗಳನ್ನು ಮತಗಟ್ಟೆಗಳ ಬಳಿ ಪ್ರದರ್ಶಿಸುವಂತಿಲ್ಲ.
ಮತದಾರರು ಅಥವಾ ಅಧಿಕಾರಿಗಳು ಬೂತ್‌ಗಳ ಬಳಿ ಚಪ್ಪಲಿ ಧರಿಸಲು ಅವಕಾಶ ನೀಡುವುದು ನಿಯಮಗಳನ್ನು ಉಲ್ಲಂಘಿಸಬಹುದು ಎಂದು ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ ಕಾಂಬ್ಳೆ ವಾದಿಸಿದ್ದಾರೆ.
“ನನ್ನ ಚುನಾವಣಾ ಚಿಹ್ನೆ ಚಪ್ಪಲಿಯಾಗಿದೆ. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿ ಧರಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು, ಚುನಾವಣಾ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಮತದಾರರು ಸೇರಿದಂತೆ ಎಲ್ಲರಿಗೂ ಚಪ್ಪಲಿಯನ್ನು ನಿಷೇಧಿಸುವಂತೆ ನಾನು ವಿನಂತಿಸುತ್ತೇನೆ. ಯಾರಾದರೂ ಚಪ್ಪಲಿ ಧರಿಸಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಿ” ಎಂದು ಕಾಂಬ್ಳೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.
