ಭಾವನೆ, ಸಂಸ್ಕೃತಿ, ಇತಿಹಾಸದ ಮಿಶ್ರಣವೇ ಕನ್ನಡ. ಕರ್ನಾಟಕದ ಇತಿಹಾಸವೇ ಕನ್ನಡವಾಗಿದೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ ಸಿ ನಿಂಗರಾಜೇಗೌಡ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಭಾನುವಾರದಂದು ಡಾ.ಜೀಶಂಪ ಸಾಹಿತ್ಯ ವೇದಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಕರ್ನಾಟಕದಲ್ಲಿ 165ಕ್ಕೂ ಅಧಿಕ ಭಾಷೆಗಳನ್ನು ಜನ ಬಳಸುತ್ತಾರೆ. ಆದರೆ ಮಂಡ್ಯದಂತಹ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅತಿಹೆಚ್ಚು ಬಳಕೆಯಾಗುತ್ತಿರುವುದು ಶ್ಲಾಘನೀಯ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
“ಮಹಾಭಾರತ ಸಂದರ್ಭದಲ್ಲೇ ಕನ್ನಡ, ಕರುನಾಡು ಹುಟ್ಟಿದೆಯೆಂಬ ಹೆಗ್ಗಳಿಕೆಯಿದೆ. ಅಲ್ಲಿಂದ ಕನ್ನಡ ಹುಟ್ಟಿ, ಬೆಳೆಯುತ್ತ ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಹೆಸರಿದೆ” ಎಂದು ಬಣ್ಣಿಸಿದರು.
“ಐದು ಕೋಟಿಗೂ ಹೆಚ್ಚು ಜನರು ವಿಶ್ವಾದ್ಯಂತ ಕನ್ನಡ ಮಾತನಾಡುತ್ತಾರೆ. ಐವತ್ತಕ್ಕೂ ಹೆಚ್ಚು ದೇಶದಲ್ಲಿ ಕನ್ನಡ ಮಾತನಾಡುವ ಕನ್ನಡಿಗರಿದ್ದಾರೆ. ಕನ್ನಡ ಮತ್ತಷ್ಟು ಬೆಳೆಯಬೇಕೆಂದರೆ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕು” ಎಂದರು.
“1,721 ವೈವಿಧ್ಯಮಯ ಭಾಷೆಗಳು ನಮ್ಮ ದೇಶದಲ್ಲಿವೆ. ಜನಗಣತಿ ಮಾಡಿದರೆ ಮತ್ತಷ್ಟು ಭಾಷೆ ಹೆಚ್ಚಾಗುವ ಸಾಧ್ಯತೆಯಿದೆ. ಇಷ್ಟು ಭಾಷೆಗಳ ನಡುವೆ ನಮ್ಮ ಕನ್ನಡ ವಿಶೇಷ ಸ್ಥಾನಮಾನ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ” ಎಂದು ಹೇಳಿದರು.

“ಊಟಿ, ಕಾಸರಗೋಡು, ಸೊಲ್ಲಾಪುರ ಪ್ರದೇಶಗಳು ಬೇರೆ ರಾಜ್ಯದಲ್ಲಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಈ ಪ್ರದೇಶಗಳು ಮೂಲ ಕರ್ನಾಟಕಕ್ಕೆ ಸೇರಿದ್ದರಾದರೂ ಹಿಂದೆ ನಮ್ಮನ್ನಾಳಿದ ರಾಜಕಾರಣಿಗಳ ಲಾಲಸ್ಯದಿಂದ ಈ ಪ್ರದೇಶಗಳು ಇಂದು ಬೇರೆ ರಾಜ್ಯಗಳ ಪಾಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಂಡ್ಯ ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಬಹಳಷ್ಟಿದೆ. ಅವರನ್ನು ಸದಾ ಸ್ಮರಿಸುವ ಕೆಲಸವಾಗಬೇಕು. ಮಂಡ್ಯ ನಗರದ ಪ್ರಮುಖ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಪಿ ಪ್ರಕಾಶ್ ಮಾತನಾಡಿ, “ಮಂಡ್ಯ ಜಿಲ್ಲೆಯಂತಹ ಕನ್ನಡ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯ ಉಳಿಸಿ, ಬೆಳೆಸುವಂತಹ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸಂಘಟನೆಗಳು ಮಡಿವಂತಿಕೆ ಬಿಟ್ಟು ಹೋರಾಟ ಮಾಡಬೇಕಿದೆ: ಕೆಂಪೂಗೌಡ
“ಮುಂದಿನ ತಿಂಗಳು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಮಂಡ್ಯ ಸಮ್ಮೇಳನ ರಾಜ್ಯದಲ್ಲಿ ಇತಿಹಾಸವಾಗಬೇಕು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಸಮಾಜ ಸೇವಕ ಎಲ್ ಜಿ ಮಂಜುನಾಥ್ ಮಾತನಾಡಿ, “ಕನ್ನಡ ರಾಜ್ಯೋತ್ಸವ ಎಂಬುದು ಕೇವಲ ನವೆಂಬರ್ ತಿಂಗಳಿಗೆ ಮೀಸಲಾಗದೇ ವರ್ಷಪೂರ್ತಿ ಕನ್ನಡ ಕಟ್ಟಿ ಬೆಳೆಸುವ ಕೆಲಸವಾಗಬೇಕು” ಎಂದು ಕರೆ ನೀಡಿದರು.
ಜೆಡಿಎಸ್‌ನ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ, “ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರ ಮೇಲಿದೆ. ಇಂದಿನ ಯುವಪೀಳಿಗೆ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಆಂಗ್ಲ ಭಾಷೆಯನ್ನು ಕಲಿಕೆಗೆ ಮೀಸಲಿಟ್ಟು, ಕನ್ನಡವನ್ನು ಹೆಚ್ಚು ಬೆಳೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಂದಿಗೆ ಸುವರ್ಣ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಗಂಗಾಧರ್, ವೆಂಕಟೇಶ್, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ, ಉಪಾಧ್ಯಕ್ಷ ಅರಸಯ್ಯ, ಕಾರ್ಯಧ್ಯಕ್ಷ ನಾಗೇಶ್ ರಾಗಿಮುದ್ದನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉದ್ಯಮಿ ಸಿದ್ದೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಹೊಸಹಳ್ಳಿ ಇದ್ದರು.