ಬೀದರ್ ಜಿಲ್ಲೆಯ, ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದಲ್ಲಿ ಹನುಮಾನ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ದಲಿತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಒತ್ತಾಯಿಸಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಕಾಳಗಿ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆಯ ಕಾಳಗಿ ನಗರದ ಕಂದಗೂಳ ಮುಖ್ಯ ರಸ್ತೆ ತಡೆದು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ಗೃಹಸಚಿವ ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಪ್ರದೀಪ್ ಮಾತನಾಡಿ, “ಬೀದರ ಜಿಲ್ಲೆಯ, ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದಲ್ಲಿ ನವೆಂಬರ್ 3ರಂದು ಹನುಮಾನ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ದಲಿತರನ್ನು 192 ಮಂದಿ ಸವರ್ಣೀಯರು ಹಲ್ಲೆ ಮಾಡಿದ್ದರು. ಇದರಲ್ಲಿ ಈಗಾಗಲೇ 62 ಮಂದಿ ಆರೋಪಿಗಳನ್ನು ಬಂದಿಸಿದ್ದಾರೆ. ಇನ್ನುಳಿದ 132 ಮಂದಿ ಆರೋಪಿಗಳನ್ನು ಬಂದಿಸಿಲ್ಲ. ಇದನ್ನು ನೋಡಿದರೆ ಸವರ್ಣೀಯರು ದಲಿತರ ಮೇಲೆ ಇನ್ನೂ ಹಲ್ಲೆ ಮಾಡುತ್ತ ಬರುತ್ತಿರುವುದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ದಕ್ಷಿಣ ಭಾರತಕ್ಕೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು: ಅಭಿಗೌಡ
“ಸ್ವಾತಂತ್ರ್ಯ ಸಿಕ್ಕು ಸುಮಾರು ವರ್ಷಗಳಾದರೂ ಕೂಡ ನಮ್ಮ ದಲಿತರಿಗೆ ಯಾವುದೇ ರೀತಿ ರಕ್ಷಣೆ ಇಲ್ಲದಂತಾಗಿದೆ. ಸದರಿ ಉಳಿದ 132 ಮಂದಿ ಆರೋಪಿಗಳನ್ನು ಬಂಧಿಸಿ ಹಲ್ಲೆ ಮಾಡಿದ ಎಲ್ಲ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಜುಕುಮಾರ್ ಚಿಂಚೋಳಿ, ಹರೀಶ್ ವರ್ದನ್, ರೋಹಿತ್, ದೇವರಾಜ್, ಸತೀಶ್, ಗೌತಮ್ ಸೇರಿದಂತೆ ಇತರರು ಇದ್ದರು.