ಪ್ರವಾಸಿ ಟ್ಯಾಕ್ಸಿ ಪಡೆದ ಯುವಜನತೆ ಪ್ರಾಮಾಣಿಕವಾಗಿ ಶ್ರಮವಹಿಸಿ ದುಡಿದು, ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಉತ್ತಮ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ಹೇಳಿದರು.
ಗದಗ ನಗರದ ಕೆ ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸಂಭ್ರಮ 50ರ ಅಂಗವಾಗಿ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಗದಗ ಜಿಲ್ಲೆಯೂ ಪ್ರವಾಸೋದ್ಯಮ ತಾಣವಾಗಬೇಕು. ಬೆಂಗಳೂರಿನಿಂದ ದೂರವಿರುವ ಕಾರಣಕ್ಕೆ ಪಾರಂಪರಿಕ ಸಂಪತ್ತಾದ ಐತಿಹಾಸಿಕ ದೇವಸ್ಥಾನ ಹೊಂದಿದ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವಾಗಿಸಲು ಪ್ರವಾಸೋದ್ಯಮ ಇಲಾಖೆಯಿಂದ ಕೆಲಸ ಪ್ರಾರಂಭವಾಗಿದೆ. ಯುವಜನರು ಸ್ವಯಂ ಉದ್ಯೋಗ ಮಾಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎನ್ನುವ ಹಂಬಲದಿಂದ, 200 ಮಂದಿ ಯುವಜನರಿಗೆ ಟ್ಯಾಕ್ಸಿ ನೀಡಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
“ಗದಗ ಜಿಲ್ಲೆಯ ಯುವಕರು ಉತ್ಸಾಹದಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕಾಗಿ ಬಳಸುವ ಟ್ಯಾಕ್ಸಿಗಳಲ್ಲಿ ಇಂದು ಟ್ಯಾಕ್ಸಿ ಪಡೆದ ಜಿಲ್ಲೆಯ ಯುವಕರನ್ನು ಪರಿಗಣಿಸಿ ಬಳಸಿಕೊಳ್ಳಬೇಕು” ಎಂದು ಮಾನ್ಯನೇಜಿಂಗ್ ಡೈರೆಕ್ಟರ್ ರಾಜೇಂದ್ರ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರು ಮಾತನಾಡಿ, “ಯುವಕರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ದಾಖಲೆ ರೀತಿಯಲ್ಲಿ ಕಾರುಗಳನ್ನು ವಿತರಣೆ ಮಾಡಿರುವುದು ಸಂತೋಷ ತಂದಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಅಭಿನಂದನಾರ್ಹರು” ಎಂದರು.
“ಟ್ಯಾಕ್ಸಿಗಳನ್ನು ಪಡೆದ ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಬೇಕು. ಟ್ಯಾಕ್ಸಿ ಪಡೆದ ಯುವಕರು ಗದಗ ಜಿಲ್ಲೆಗೆ ಸೀಮತಿವಾಗದೆ ರಾಜ್ಯದಲ್ಲಿರುವ ವಿವಿಧ ದೊಡ್ಡ ದೇವಾಲಯ, ಸ್ಮಾರಕ, ನಿಸರ್ಗಧಾಮ ಅಲ್ಲಿನ ವಸತಿ, ಊಟ ವ್ಯವಸ್ಥೆ, ಐತಿಹಾಸಿಕ ಹಿನ್ನಲೆ ಬಗ್ಗೆ ಮಾಹಿತಿ ಹೊಂದಿರಬೇಕು. ಹಾಗಾಗಿಯೇ ಓಡಾಟದ ನಡುವೆ ಯಾವುದೇ ಚಟಕ್ಕೆ ಬಲಿಯಾಗದೇ ಉತ್ತಮ ಆಹಾರ ಸೇವಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರಂಗಭೂಮಿ ಮನುಷ್ಯನಾಗಿ ಬದುಕಲು ಕಲಿಸುತ್ತದೆ: ಬಾಬಾಸಾಹೇಬ ಕಾಂಬಳೆ
“ಪದವಿ ಹೊಂದಿ ಅನೇಕ ಮಂದಿ ಯುವಕರು ಕೆಲಸವಿಲ್ಲದೆ ಇದ್ದಾರೆ. ಪ್ರವಾಸೋದ್ಯಮದಿಂದ ನೀಡುವ ಟ್ಯಾಕ್ಸಿಗಳ ಫಲಾನುಭವಿಗಳಲ್ಲಿ ಆಯ್ಕೆ ಮಾಡುವಾಗ ಅವರಿಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲ ಫಲಾನುಭವಿಗಳಿಗೆ ಜೀವನದಲ್ಲಿ ಒಳ್ಳೆಯದಾಗಲಿ” ಎಂದು ಹರಿಸಿದರು.
ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶಾಸಕ ಜಿ ಎಸ್ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಡಿಪಿ ಸದಸ್ಯ ಡಿ ಆರ್ ಪಾಟೀಲ, ಬಿ ಬಿ ಅಸೂಟಿ, ಅಶೋಕ ಮಂದಾಲಿ, ಐಯ್ಯಸ್ವಾಮಿ, ಸಿದ್ದು ಪಾಟೀಲ, ಪ್ರಭು ಬುರಬುರಿ, ನಗರಸಭೆ ಸದಸ್ಯರು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.