ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಸಮಸ್ಯೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಹಲವಾರು ವರದಿಗಳು ಪ್ರಕಟವಾಗಿದ್ದರೂ ಸಿಎನ್‌ಜಿ ಇಂಧನ ಸಮಸ್ಯೆ ಬಗೆಹರಿಸುವಂತೆ ಕಾರ್ಮಿಕ ಸಂಘಟನೆಗಳು ಮನವಿ ಮಾಡಿಕೊಂಡಿದ್ದರೂ ಸಮಸ್ಯೆ ಕೊನೆಯೇ ಇಲ್ಲದಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಆಧಾರಿತ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸಿಎನ್‌ಜಿ ಬಂಕ್‌ಗಳು ಇಲ್ಲದ ಪರಿಣಾಮ ತೀವ್ರ ಇಂಧನ ಕೊರತೆ ಎದುರಾಗಿದೆ. ಪ್ರತಿನಿತ್ಯ ಸಾವಿರಾರು ಸಿಎನ್‌ಜಿ ಆಟೊ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳು ಇಂಧನ ತುಂಬಿಸಿಕೊಳ್ಳಲು ಸಿಎನ್‌ಜಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಅಂದು ದುಡಿದು ಅಂದು ಜೀವನ ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಆಟೋ ಚಾಲಕರ ಪಾಡು ಯಾರಿಗೂ ಬೇಡ. ದಿನದ ಐದಾರು ಗಂಟೆ ಬಾಡಿಗೆ ಹೊಡೆದರೆ ಕನಿಷ್ಠ ಮೂರರಿಂದ ನಾಲ್ಕು ಗಂಟೆ ಇಂಧನ ಭರ್ತಿ ಮಾಡಿಕೊಳ್ಳಲು ಸಿಎನ್‌ಜಿ ಕೇಂದ್ರದ ಮುಂದೆ ಕಾಯಬೇಕಾಗಿದೆ. ಹಗಲಿನ ಹೊತ್ತು ಬಾಡಿಗೆ ನಷ್ಟವಾಗುವ ಆತಂಕದಿಂದ ಬೆಳಗಿನ ಜಾವ, ರಾತ್ರಿ ಹೊತ್ತು ತಾಸುಗಟ್ಟಲೆ ಕಾಯ್ದು ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಸಿಎನ್‌ಜಿ ಇಂಧನ ವಾಹನಗಳಿದ್ದರೂ ಸಿಎನ್‌ಜಿ ಬಂಕ್‌ಗಳು ಇರುವುದು ಕೇವಲ 8 ಉಡುಪಿಯ ಸೀಮಾ ಪ್ಯೂಯಲ್ಸ್ ಅಂಡ್ ಸರ್ವೀಸಸ್, ಮಲ್ಪೆಯ ಭಾವನಾ ಎಂಟರ್ ಪ್ರೈಸಸ್, ಬ್ರಹ್ಮಾವರ ತಾಲೂಕಿನ ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್, ಹೆಜಮಾಡಿ ಟೋಲ್ ಗೇಟ್ ಬಳಿಯ ಮಾತೃಶ್ರೀ ಹೈವೇ ಸ್ಟಾರ್, ಕಾರ್ಕಳದ ಕೆದಿಂಜೆಯ ಶ್ರೀದುರ್ಗಾ ಪ್ಯೂಯಲ್ಸ್, ಕಾರ್ಕಳ ತಾಲೂಕಿನ ಸಾಣೂರಿನಲ್ಲಿರುವ ಪಡು ತಿರುಪತಿ ವೆಂಕಟರಮಣ, ಕುಂದಾಪುರ ತಾಲೂಕು ಕೋಟೇಶ್ವರದಲ್ಲಿರುವ ಕೆವಿಎಂ ಕಾಮತ್, ಪಡುಬಿದ್ರಿಯ ಭವ್ಯ ಪ್ಯೂಯೆಲ್ಸ್ ಜಿಲ್ಲೆಯಲ್ಲಿರುವ ಸಿಎನ್‌ಜಿ ಕೇಂದ್ರಗಳು.
ಬೆರಳೆಣಿಕೆಯ ಸಿಎನ್‌ಜಿ ಕೇಂದ್ರಗಳಲ್ಲಿ ಬೇಡಿಕೆಯಷ್ಟು ಇಂಧನ ಸಿಗುತ್ತಿಲ್ಲ. ಪ್ರತಿದಿನ ಜಿಲ್ಲೆಯ ಬಹುತೇಕ ಸಿಎನ್‌ಜಿ ಕೇಂದ್ರಗಳ ಮುಂದೆ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳ ಉದ್ದನೆಯ ಸಾಲು ಸಾಮಾನ್ಯವಾಗಿ ಕಾಣಸಿಗುತ್ತದೆ. ತಾಸುಗಟ್ಟಲೆ ಕಾದರೂ ಇಂಧನ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲದೆ ವಾಹನ ಸವಾರರು ಹೈರಾಣಾಗಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಆಟೋ ಚಾಲಕ ಬಾಬಣ್ಣ, “ನಮ್ಮ ಗೋಳು ಯಾರು ಸಹ ಕೇಳುವವರಿಲ್ಲ ಎರಡು ತಿಂಗಳ ಹಿಂದೆ ಸಿಎನ್ ಜಿ ಗ್ಯಾಸ್ ಗೆ ಕನ್ವರ್ಟ್ ಮಾಡಿಸಿದ್ದೇನೆ. ಆದರೆ ಈಗ ಸರಿಯಾಗಿ ಇಂಧನವೇ ಸಿಗುತ್ತಿಲ್ಲ ಈಗ ಸಿಎನ್ ಜಿ ಇಂದ ಬದಲಾಯಿಸಿ ಮೊದಲು ಇದ್ದ ಎಲ್ ಪಿಜಿ ಗೆ ಪುನಃ ಮಾಡಿಸಬೇಕು ಅಂದುಕೊಂಡಿದ್ದೇನೆ. ಇಲ್ಲದಿದ್ದರೆ ಬ್ಯಾಟರಿ ಆಟೋ ರಿಕ್ಷಾ ಆದ್ರೂ ಮಾಡಬೇಕೆಂದಿದ್ದೇನೆ. ಆಗ ಈ ರೀತಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪುತ್ತದೆ ಎಂದು ಹೇಳಿದರು.

ಮತ್ತೊಬ್ಬ ಸಿಎನ್ ಜಿ ಆಟೋ ಜಾಲಕ ಶ್ರೀನಿವಾಸ್ ಮಾತನಾಡಿ, “ಸಿಎನ್ ಜಿ ಆಟೋ ತೆಗೆದುಕೊಂಡು ನಾವು ಮಂಗನಂತೆ ಆಗಿ ಬಿಟ್ಟಿದ್ದೇವೆ. ಕಂಪನಿಯವರು ಸಹ ಸರಿಯಾದ ಮಾಹಿತಿ ನೀಡಿರಲಿಲ್ಲ. ಈಗ ಇಂಧನಕ್ಕಾಗಿ ಕಷ್ಟ ಅನುಭವಿಸುತ್ತಾ ಇದ್ದೇವೆ. ಬಾಡಿಗೆ ಮಾಡಲು ಆಟೋ ನಿಲ್ದಾಣದಲ್ಲಿ ನಿಲ್ಲಿಸುವುದಕ್ಕಿಂತ ಹೆಚ್ಚು ಸಮಯ ಸಿಎನ್‌ಜಿ ಕೇಂದ್ರಗಳ ಮುಂದೆಯೇ ಕಳೆಯುತ್ತಿದ್ದೇವೆ. ಉಡುಪಿಯಲ್ಲಿ ಇಂಧನ ಇಲ್ಲದಿದ್ದರೆ ಬ್ರಹ್ಮಾವರಕ್ಕೆ, ಬ್ರಹ್ಮಾವರದಲ್ಲಿ ಇಲ್ಲದಿದ್ದರೆ ಉಡುಪಿಗೆ ಹೀಗೆಯೇ ಓಡಾಗುವುದೆ ದಿನಿತ್ಯದ ಕೆಲಸ ಆಗಿ ಬಿಟ್ಟಿದೆ ಇನ್ನೂ ಬಾಡಿಗೆ ಎಲ್ಲಿಂದ ಮಾಡುವುದು? ಪ್ರತಿದಿನ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ನೂರಾರು ಆಟೋ ರಿಕ್ಷಾಗಳು ಸಾರತಿ ಸಾಲಿನಲ್ಲಿ ನಿಂತಿರುತ್ತವೆ. ಯಾಕೆ ಎಂದು ಒಬ್ಬರೂ ಸಹ ಬಂದು ಕೇಳುವುದಿಲ್ಲ” ಎಂದು ತಮ್ಮ ನೋವು ಹೇಳಿಕೊಂಡರು.

ಇದನ್ನು ಓದಿದ್ದೀರಾ? ದಾವಣಗೆರೆ | ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: ಮುಖ್ಯ ಶಿಕ್ಷಕಿ ಸೇರಿ ಇಬ್ಬರ ಅಮಾನತು
ಒಟ್ಟಿನಲ್ಲಿ ಸಿಎನ್‌ಜಿ ಆಟೋ ರಿಕ್ಷಾ ವಾಹನಗಳು ಹೆಚ್ಚಾದಂತೆಲ್ಲ ಇಂಧನ ಪಂಪ್‌ಗಳ ಸಂಖ್ಯೆ ಸಹ ಹೆಚ್ಚಾಗಬೇಕು. ಅವಶ್ಯಕತೆಗೆ ತಕ್ಕಂತೆ ಪೂರೈಕೆ ಇದ್ದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಉಡುಪಿ ನಗರದಲ್ಲಿ ಇನ್ನೂ ಎರಡು ಸಿಎನ್‌ಜಿ ಇಂಧನ ಕೇಂದ್ರಗಳು ಪ್ರಾರಂಭವಾದರೆ ಮಾತ್ರ ಇದಕ್ಕೆ ಪರಿಹಾರ ಸಾಧ್ಯ ಎನ್ನುತ್ತಾರೆ ಆಟೋ ಚಾಲಕ-ಮಾಲಕರ ಸಂಘದ ಮುಖಂಡರು.
