ಅನ್ನನಾಳ ಸಮಸ್ಯೆಯಿಂದ ಬಳಲುತ್ತಿರುವ 3 ವರ್ಷದ ಪುಟ್ಟ ಕಂದ ಸಾನ್ವಿಗೆ ಕೂಡಲೇ ಶಸ್ತ್ರಚಿಕಿತ್ಸೆ ಗೆ ಅಗತ್ಯವಿದ್ದು, ಪೋಷಕರು ದಾನಿಗಳಿಂದ ನೆರವು ಕೋರಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೈರಾಪುರ ತಾಂಡ್ಯದ ನಿವಾಸಿ ಹೊನ್ನಪ್ಪ, ಮನುಜ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. 3 ವರ್ಷದ ಮಗಳು ಸಾನ್ವಿಗೆ ತಾಯಿ ಗರ್ಭದಲ್ಲಿದ್ದಾಗಲೇ ಜೀರ್ಣಾಂಗ ವ್ಯವಸ್ಥೆ ಬೆಳವಣಿಗೆ ಕುಂಠಿತವಾಗಿದೆ. ಬಾಯಿಯಿಂದ ಜಠರಕ್ಕೆ ಸಂಪರ್ಕ ಕಲ್ಪಿಸುವ ಅನ್ನನಾಳ(Esophagus) ಬೆಳವಣಿಗೆಯಾಗಿಲ್ಲ, ಇದರಿಂದ ಸಾನ್ವಿ ಸೇವನೆ ಮಾಡಿದ ಆಹಾರ ಪುನಃ ಬಾಯಿ ಮೂಲಕ ಹಿಂತಿರುಗಿ ಬರುತ್ತಿತ್ತು.
ಮಗುವನ್ನ ತಪಾಸಣೆ ಮಾಡಿದ್ದ ವೈದ್ಯರು ಅನ್ನನಾಳ ಬೆಳವಣಿಗೆಯಾಗಿಲ್ಲ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದರು. ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದ ಹೊನ್ನಪ್ಪನ ಕುಟುಂಬಕ್ಕೆ ವೈದ್ಯರ ಮಾತು ಬರ ಸಿಡಿಲು ಬಡಿದಂತಾಗಿತ್ತು. ಮಗಳನ್ನ ಉಳಿಸಿಕೊಳ್ಳಬೇಕೆಂದು ಹೊನ್ನಪ್ಪನಿಗೆ ತಂದೆಯಿಂದ ಬಂದ ಒಂದು ಎಕರೆ ಜಮೀನಲ್ಲಿ ಅರ್ದ ಎಕರೆ ಮಾರಾಟ ಮಾಡಿ ಬಂದ ಒಂದುವರೆ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಂಗಳೂರಿನ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ(PMSSY) ದಲ್ಲಿ ಸಾನ್ವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಮಗು ಕಡಿಮೆ ತೂಕ ಇದೆ ಎಂದು ವೈದ್ಯರು ತಾತ್ಕಾಲಿಕವಾಗಿ ಕುತ್ತಿಗೆ ಭಾಗದಲ್ಲಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿ ಅನ್ನನಾಳ(Esophagus)ಕ್ಕೆ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಸಾನ್ವಿ ಸೇವಿಸಿದ ಆಹಾರ ಸಂಪೂರ್ಣವಾಗಿ ಕುತ್ತಿಗೆ ಭಾಗದ ರಂದ್ರದ ಮೂಲಕ ಹೊರಗೆ ಬರುತ್ತಿದೆ. ಜೊತೆಗೆ ಹೊಟ್ಟೆ ಭಾಗದಲ್ಲಿ ರಂದ್ರ ಮಾಡಿ ಜಠರಕ್ಕೆ ಪ್ಲಾಸ್ಟಿಕ್ ಕೊಳವೆಯನ್ನ ಅಳವಡಿಸಿ ದ್ರವಾಹಾರ ನೀಡುವ ವ್ಯವಸ್ಥೆಯನ್ನ ವೈದ್ಯರು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಸಿಎನ್‌ಜಿ ಇಂಧನ ಕೇಂದ್ರಗಳ ಕೊರತೆ; ಶಾಶ್ವತ ಪರಿಹಾರಕ್ಕೆ ಕಾಯುತ್ತಿದ್ದಾರೆ ಆಟೋ ಚಾಲಕರು
ಈಗ ಸಾನ್ವಿಗೆ 3 ವರ್ಷವಾಗಿದೆ. ಸಮರ್ಪಕವಾಗಿ ಆಹಾರ ಸೇವನೆ ಸಾಧ್ಯವಿಲ್ಲದ ಕಾರಣ ಸಾನ್ವಿಯ ತೂಕ ಈವರೆಗೂ ಹೆಚ್ಚಾಗಿಲ್ಲ. ಹಾಗಾಗಿ ಅನ್ನನಾಳದಿಂದ ಕೃತಕವಾಗಿ ಜಠರಕ್ಕೆ ಸಂಪರ್ಕ ಕಲ್ಪಿಸುವ ಶಸ್ತ್ರಚಿಕಿತ್ಸೆ ಮಾಡಲು ಸಾದ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಸೂಚನೆಯ ಮೇರೆಗೆ ಸಾನ್ವಿಗೆ ಪ್ರತಿನಿತ್ಯ ಪೋಷಕರು ಲ್ಯಾಕ್ಟೊಜಿನ್ 4 ಎಂಬ ಪೌಷ್ಟಿಕ ದ್ರವ ಆಹಾರ ನೀಡುತ್ತಿದ್ದಾರೆ. ಒಂದು ಲ್ಯಾಕ್ಟೋಜಿನ್ ಗೆ 475 ರೂ ಇದ್ದು ಎರಡು ದಿನಕ್ಕೆ ಒಂದು ಪ್ಯಾಕೆಟ್ ಖಾಲಿಯಾಗುತ್ತಿದೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಹೊನ್ನಪ್ಪ ಕುಟುಂಬ ಸದ್ಯ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿಯೇ ವಾಸವಿದ್ದಾರೆ.
ಜೀವನೋಪಾಯಕ್ಕೆ ತಂದೆಯಿಂದ ಬಂದಿರುವ ಒಂದು ಎಕರೆ ಜಮೀನು ಇತ್ತು, ಮಗಳ ಶಸ್ತ್ರಚಿಕಿತ್ಸೆಗೆಂದು ಅರ್ಧ ಎಕರೆ ಜಮೀನು ಮಾರಿ ಚಿಕಿತ್ಸೆ ಕೊಡಿಸಿದ್ದರು. ಮಗಳನ್ನ ನೋಡಿಕೊಳ್ಳಲು ಇಬ್ಬರು ಸದಾ ಇರಲೇ ಬೇಕು ಈಗಾಗಿ ತಂದೆ ಹೊನ್ನಪ್ಪ ಸರಿಯಾಗಿ ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಹೊನ್ನಪ್ಪ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಗಳ ಮುಂದಿನ ಶಸ್ತ್ರಚಿಕಿತ್ಸೆಗೂ ಹಣವಿಲ್ಲದೆ, ಮಗಳಿಗೆ ಪೌಷ್ಟಿಕ ಆಹಾರ ಲ್ಯಾಕ್ಟೋಜಿನ್ ನೀಡಲು ಹಣವಿಲ್ಲದೆ ಪರದಾಡುತ್ತಿದ್ದಾರೆ.
ಮಗಳಿಗೆ ಅನ್ನನಾಳ ಶಸ್ತ್ರಚಿಕಿತ್ಸೆ ಮಾಡಿಸಲು ಹೊನ್ನಪ್ಪ ಕುಟುಂಬಕ್ಕೆ ಆರ್ಥಿಕ ಸಂಕಷ್ಟದಲ್ಲಿದ್ದು ಸಹಾಯ ಮಾಡುವ ದಾನಿಗಳ ನೆರವು ಕೋರಿದ್ದಾರೆ. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಹೊನ್ನಪ್ಪ ಅವರ ಬ್ಯಾಂಕ್ ಉಳಿತಾಯ ಖಾತೆ: 67410100026551, IFSC ಸಂಖ್ಯೆ BARB0VJCHTU ಖಾತೆಗೆ ನಿಮ್ಮ ಕೈಲಾದ ಸಹಾಯ ಮಾಡಬಹುದು. ಹೊನ್ನಪ್ಪ ಅವರ ಸಂಪರ್ಕ ಸಂಖ್ಯೆ:7483654132 ಕರೆ ಮಾಡಿ ಮಾತನಾಡಿ, ಮಾಹಿತಿ ಪಡೆದುಕೊಳ್ಳಬಹುದು.
